Advertisement

ಸರ್ವೆ ಮಾಡಿದ್ರೂ ಒತ್ತುವರಿ ತೆರವು ಮಾಡಿಲ್ಲ

02:32 PM Dec 23, 2019 | Suhan S |

ಮುಳಬಾಗಿಲು: ತಾಲೂಕಿನಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನು ತೆರವು ಗೊಳಿಸಲು ಅಬಕಾರಿ ಸಚಿವರು ಸಾಕಷ್ಟು ಬಾರಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ನಾಲ್ಕೈದು ವರ್ಷಗಳಿಂದ ಪ್ರಭಾವಿಗಳು ನಿಧನವಾಗಿ ಒತ್ತುವರಿ ಮಾಡುತ್ತಲೇ ಇದ್ದಾರೆ.

Advertisement

ಸರ್ಕಾರಿ ಭೂಮಿಗಳ ಒತ್ತುವರಿ ತಡೆಗಟ್ಟಲು ರಾಜ್ಯ ಸರ್ಕಾರ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತಂದು 192ಎ ಅನ್ವಯ ಒತ್ತುವರಿದಾರರನ್ನು ಶಿಕ್ಷೆಗೆ ಗುರಿಪಡಿಸಲು ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಭೂಮಿ ಒತ್ತುವರಿ ತಡೆಗಟ್ಟಲು ಎ.ಟಿ. ರಾಮಸ್ವಾಮಿ ಮತ್ತು ಬಾಲಸುಬ್ರಮಣ್ಯಂ ನೇತೃತ್ವ ದಲ್ಲಿ ವರದಿಗಳ ಅನ್ವಯ, ಕೋರ್ಟ್‌ ಆದೇಶದಂತೆ ಸರ್ಕಾರಿ ಭೂ ಸಂರಕ್ಷಣೆ ಮತ್ತು ಒತ್ತುವರಿ ಜಮೀನು ತೆರವುಗೊಳಿಸಲು 2013ರ ಮೇ 27 ರಂದು ಅಂದಿನ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಲತಾ ಕೃಷ್ಣರಾವ್‌ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು.

ಅದರಂತೆ, ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಜಮೀನನ್ನು ಗುರುತಿಸಿ ಅದರ ವಿಸ್ತೀರ್ಣವನ್ನು ಅಳತೆ ಮಾಡಿ ಒತ್ತುವರಿ ತೆರವುಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಜಿಲ್ಲಾಧಿಕಾರಿ ತ್ರಿಲೋಕ್‌ಚಂದ್ರ ಸೂಚನೆಯಂತೆ ಅಂದಿನ ತಹಶೀಲ್ದಾರ್‌ ಎಂ.ಗಂಗಪ್ಪ ಆವಣಿ, ಕಸಬಾ, ತಾಯಲೂರು, ಬೈರಕೂರು, ದುಗ್ಗಸಂದ್ರ ಸೇರಿ 5 ಹೋಬಳಿಯಲ್ಲಿನ 433 ಕೆರೆಗಳು, ಸ್ಮಶಾನ, ಗುಂಡು ತೋಪು ಒತ್ತುವರಿ ತೆರವುಗೊಳಿಸಲು ಅಧೀನ ಅಧಿಕಾರಿ ಗಳಿಗೆ ಸೂಚಿಸಿ ತಾವೂ ಕಾರ್ಯ  ಪ್ರವೃತ್ತರಾಗಿದ್ದರು.

ಸರ್ವೆ ಮಾಡಿದ್ರೂ ತೆರವು ಮಾಡಿಲ್ಲ: ಕಾರ್ಯಾಚರಣೆಯಂತೆ 211 ಕೆರೆಗಳಲ್ಲಿನ 366 ಎಕರೆ ಜಮೀನನ್ನು ತೆರವುಗೊಳಿಸಿ, 81 ಜನರ ವಿರುದ್ಧ ಕ್ರಿಮಿನಲ್‌ ಮೊಕದೊಮ್ಮೆ ದಾಖಲಿಸಲಾಗಿತ್ತು. ಆ ಮೂಲಕ ಶೇ.75 ಕಾರ್ಯಾಚರಣೆ ಮುಗಿಸಿದ್ದರು. ಬಾಕಿ ಶೇ.25 ಒತ್ತುವರಿ ತೆರವು ವರದಿಯನ್ನು 2015 ಫೆ.15ರಂದು ಕೋರ್ಟ್‌ಗೆ ಸಲ್ಲಿಸಬೇಕಾಗಿತ್ತು. ನಂತರ ಎಲ್ಲಾ ಕೆರೆ ತೆರವುಗೊಳಿಸಲು ಡೀಸಿ ಕಟ್ಟುನಿಟ್ಟಾಗಿ ಆದೇಶಿಸಿದ್ದರು. ಅದರಂತೆ ತಹಶೀಲ್ದಾರ್‌ ಉಳಿದ 83 ಕೆರೆಗಳ ಸರ್ವೆಗೆ ಸಿಬ್ಬಂದಿ ನಿಯೋಜಿಸಿದ್ದರು. ಕೆರೆ ಸರ್ವೆ ಮಾಡಿದ್ದರೂ ತೆರವು ಕಾರ್ಯಾಚರಣೆ ಮಾಡಲಿಲ್ಲ. ಇದರಿಂದ ಮತ್ತಷ್ಟು ಜಮೀನು ಒತ್ತುವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ.

ಗೋಮಾಳ ಪ್ರಭಾವಿಗಳ ಪಾಲು: ಕೆಲವು ದಿನಗಳ ನಂತರ ತಹಶೀಲ್ದಾರ್‌ ಎಂ.ಗಂಗಪ್ಪ ವರ್ಗಾವಣೆಯಾದರು. ನಂತರ ಬಂದ ಕಾಂತವೀರಯ್ಯ, ಬಿ. ಎನ್‌.  ಪ್ರವೀಣ್‌, ಈಗಿನ ತಹಶೀಲ್ದಾರ್‌ ರಾಜಶೇಖರ್‌ ಸೇರಿ ಯಾರೊಬ್ಬರೂ ಒತ್ತುವರಿ ತೆರುವು ಕಾರ್ಯ ಕೈಗೊಂಡಿಲ್ಲ. ಇದರಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆವಣಿ ಹೋಬಳಿ ಕೊತ್ತಮಂಗಲ ಸರ್ವೆ ನಂಬರ್‌ 222ರ ನೂರಾರು ಎಕರೆ ಗೋಮಾಳ ಪ್ರಭಾವಿಗಳ ಪಾಲಾಗುವಂತಾಗಿದೆ.

Advertisement

ಬಂಡೆಯನ್ನೇ ಸ್ಫೋಟಿಸಿ ಒತ್ತುವರಿ?: ಮತ್ತೂಂದಡೆ ರಾಷ್ಟ್ರೀಯ ಹೆದ್ದಾರಿ 75ರ ಅಂಚಿನಲ್ಲಿರುವ ದೇವರಾಯಸಮುದ್ರ ಲ್ಯಾಂಕೋ ಟೋಲ್‌ ಹಿಂಭಾಗದಲ್ಲಿರುವ ಸರ್ವೆ ನಂಬರ್‌ 115ರಲ್ಲಿರುವ 48 ಎಕರೆ ಖರಾಬು ಜಮೀನಿನಲ್ಲಿರುವ ಬಂಡೆಗಳನ್ನು ಬೆಂಗಳೂರಿನ ಭೂ ಮಾಫಿಯಾದ ಮುಖಂಡನೊಬ್ಬ ಸ್ಫೋಟಿಸಿ ನೆಲಸಮ ಮಾಡಿಕೊಳ್ಳುತ್ತಿದ್ದಾನೆ. ಅದೇ ರೀತಿ ಸ.ನಂ 653, 180, 103ರಲ್ಲಿನ ಗೋಮಾಳನ್ನೂ ಕಬಳಿಕೆ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯ ಆರೋಪವಾಗಿದೆ.

ವಶಕ್ಕೆ ಪಡೆದಿಲ್ಲ: ಅಲ್ಲದೇ, ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಂದ ಮಂಜೂರಾಗಿ ಕಾಯ್ದಿರಿಸಲಾಗಿದ್ದ ಜಮೀನು ಖಾಸಗಿ ಟೇಡರ್‌ ಮಾಲಿಕರ ಪಾಲಾಗಿದೆ. ಜಮ್ಮನಹಳ್ಳಿ ಸರ್ವೆ ನಂ.103ರಲ್ಲಿ 36 ಎಕರೆ ಜಮೀನನ್ನು ಹಲವು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದೆ. ಆದರೂ, ತಹಶೀಲ್ದಾರ್‌ ರಾಜಶೇಖರ್‌ ಅವರು ಇದುವರೆಗೂ ವಶಕ್ಕೆ ಪಡೆದುಕೊಂಡಿಲ್ಲ. ಇದರ ಜೊತೆಗೆ ಮುಳಬಾಗಿಲು ನಗರ, ದೇವರಾಯಸಮುದ್ರ, ವೈ.ಕೋಗಿಲೇರು, ಪುಣ್ಯಹಳ್ಳಿ, ಸಂಗಸಂದ್ರ, ಎಚ್‌.ಗೊಲ್ಲಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ರೈತ ಸಂಘದ ಮುಖಂಡರು ದೂರಿದ್ದಾರೆ.

 

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next