ಭೂಮಿಯ, ಪ್ರಕೃತಿಯ ಒಂದಿಲ್ಲೊಂದು ಅಚ್ಚರಿ, ವಿಸ್ಮಯಗಳಿಗೆ ಸದಾ ನಾವು ಸಾಕ್ಷಿಯಾಗುತ್ತಿರುತ್ತೇವೆ. ಇವತ್ತಿಗೂ ಮನುಷ್ಯನ ಹುಟ್ಟು, ವಿಕಾಸದ ಕುರಿತು ವಿವಿಧ ರೀತಿಯ, ಹೊಸಹೊಸ ಸಂಶೋಧನೆಗಳನ್ನು ವಿಜ್ಞಾನಿಗಳು ನಡೆಸುತ್ತಲೇ ಇದ್ದಾರೆ. ಈ ಸಂಶೊಧನೆಗಳಿಂದ ಹೊಸ ಸಂಗತಿಗಳು, ವಿಚಾರಗಳು ಜಗತ್ತನ್ನು ಆಶ್ವರ್ಯಗೊಳಿಸುತ್ತಿವೆ. ಹೀಗೆ ಭೂಗ್ರಹದ ರಚನೆಯ ಮೇಲೆ ಮಾಡಿದ ಅಧ್ಯಯನಗಳು ಇದರ ಕುರಿತಾದ ಹಲವು ವಿಸ್ಮಯದ ಸಂಗತಿಗಳನ್ನು ಬಿಚ್ಚಿಟ್ಟಿವೆ.
ಉತ್ತರಕ್ಕೆ ಮುಖ ಮಾಡಿ ನಿಂತರೆ ಹಿಂದೂ ಮಹಾಸಾಗರ ಕಾಣುತ್ತಿತ್ತು ದಿಲ್ಲಿಯಲ್ಲ….ದಕ್ಷಿಣಕ್ಕೆ ಮುಖ ಮಾಡಿದರೆ ತಂಜಾನೀಯ ಕಾಣುತ್ತಿತ್ತೆ ಹೊರತು ಕನ್ಯಾಕುಮಾರಿಯಲ್ಲ. ಚೆನ್ನೈಯಿಂದ ಶ್ರೀಲಂಕಾ ಕಡೆಗೆ ಹಾರಿದರೆ ನೀವು ಅಂಟಾರ್ಟಿಕಾ ಮೇಲೆ ಲ್ಯಾಂಡ್ ಆಗುತ್ತೀದ್ದೀರಿ…ಬೆಂಗಳೂರಿನಿಂದ ಜಮ್ಮುಗೆ ಹಾರಿದರೆ ಉಗಾಂಡ ತಲುಪುತ್ತಿದ್ದೀರಿ…ಕಾರಿನಲ್ಲಿ ಕೋಲ್ಕತಾಗೆ ಪ್ರಯಾಣಿಸಿದರೆ ಆಸ್ಟ್ರೇಲಿಯಾದ ಪರ್ತ್ ತಲುಪುತ್ತಿದ್ದೀರಿ… ಸೀತೆಯನ್ನು ಅಪಹರಿಸಲು ಪಂಚವಟಿ ಅರಣ್ಯಕ್ಕೆ ಬರಬೇಕಿದ್ದ ರಾವಣನ ಪುಷ್ಪಕ ವಿಮಾನ ಸೌದಿ ಅರೇಬಿಯಾದ ಮರಭೂಮಿಯಲ್ಲಿ ಲ್ಯಾಂಡ್ ಆಗುತ್ತಿತ್ತು….ಹೀಗೆಂದರೆ ಯಾರಿಗಾದರು ನಂಬಲು ಸಾಧ್ಯವೇ! ಹೀಗೂ ಉಂಟೆ ?, ಹೀಗಾಗಿರಲು ಸಾಧ್ಯವೇ ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.
ಹೌದು 12 ಕೋಟಿ ವರ್ಷಗಳ ಹಿಂದೆ ಭಾರತದ ಭೂ ಪ್ರದೇಶ ಈಗಿರುವ ಜಾಗದಲ್ಲಿ ಇರಲಿಲ್ಲ ಬದಲಾಗಿ 9,000 ಮೈಲಿಗಳಷ್ಟು ದೂರದ ಆಫ್ರಿಕಾ ಖಂಡವನ್ನು ತಬ್ಬಿಕೊಂಡಿತ್ತು. ಆಫ್ರಿಕಾ, ಸೌತ್ ಅಮೆರಿಕ, ಆಸ್ಟ್ರೇಲಿಯ ಹಾಗೂ ಅಂಟಾರ್ಟಿಕಾ ಸೇರಿ ಗೊಂಡ್ವಾನ ಖಂಡ ಎನಿಸಿತ್ತು. ಅದರಂತೆ ಈಗಿರುವ ಏಳು ಖಂಡಗಳು ಬೇರೆ ಎಲ್ಲೆಲ್ಲೋ ಇದ್ದವು….
ಕ್ರಮೇಣ ಟೇರ್ಪಾನಿಕ್ ಪ್ಲೇಟ್‌ಗಳು ಸರಿದಾಡಿ ಬೇರೆ ಬೇರೆ ಜಾಗಗಳಿಗೆ ವಲಸೆ ಹೋದವು. ಎಲ್ಲ ಖಂಡಗಳು ವರ್ಷಕ್ಕೆ ಕೇವಲ 5 ಸೆಂಟಿ ಮೀಟರ್‌ನಷ್ಟು ಸರಿದರೆ ಭಾರತ ಬಲುವೇಗವಾಗಿ ಅಂದರೆ ವರ್ಷಕ್ಕೆ 15 ಸೆಂಟಿ ಮೀಟರ್‌ನಷ್ಟು ಸರಿಯುತ್ತಾ ಆಫ್ರಿಕಾದಿಂದ ಬೇರ್ಪಟ್ಟು, ಸಮುದ್ರವನ್ನು ಸೀಳುತ್ತಾ, ಸೀಳುತ್ತಾ ಬಂದು ತಲುಪಿದ್ದು ಯುರೇಶಿಯಾ ಖಂಡವನ್ನು.
ಹೀಗೆ ಯುರೇಶಿಯಾ ಮತ್ತು ಭಾರತದ ಭೂ ಪ್ರದೇಶಗಳು ಢಿಕ್ಕಿ ಹೊಡೆದಾಗ ಬೆಟ್ಟ ಪರ್ವತಗಳು ಹುಟ್ಟಿಕೊಂಡವು.ಹಿಮಾಲಯ ಹುಟ್ಟಿದ್ದು ಇದೆ ಢಿಕ್ಕಿಯಿಂದ, ಆಕಾಶವೆಲ್ಲ ಮೋಡ ತುಂಬಿಕೊಂಡಿತು, ಅದರ ಪರಿಣಾಮವೇ ಭೂ ಗ್ರಹದ ಐಸ್ ಏಜ್ ಪ್ರಾರಂಭವಾಗಿದ್ದು. ಅದರ ಅದೃಷ್ಟಕ್ಕೆ ಆಗ ಮನುಷ್ಯ ಇನ್ನು ಹುಟ್ಟಿರಲಿಲ್ಲ, ಕೇವಲ ಸಸ್ಯವರ್ಗ, ಪ್ರಾಣಿ ವರ್ಗಗಳು ಮಾತ್ರ ಹುಟ್ಟಿಕೊಂಡಿದ್ದವು.
ಭಾರತ ಆಫ್ರಿಕಾದಿಂದ ಬೇರ್ಪಟ್ಟು ಉತ್ತರಕ್ಕೆ ಪ್ರಯಾಣಿಸುತ್ತಾ ಯುರೇಶಿಯಾ ತಲುಪಲು ಸುಮಾರು 7 ಕೋಟಿ ವರ್ಷಗಳೇ ಸಂದವಂತೆ. ಬರುವಾಗ ತನ್ನಲ್ಲಿಯ ಸಸ್ಯವರ್ಗ, ಪ್ರಾಣಿವರ್ಗವನ್ನು ಹೊತ್ತು ತಂದಿತ್ತು. ಕೆಲವು ಪ್ರಾಣಿಗಳು ಭೂಮಿಯ ಮೇಲಿಂದ ಸಮುದ್ರದೊಳಗಿನ ಜೀವ ಸಂಕುಲದೊಂದಿಗೆ ಬೆರೆತು ವೇಲ್ಸ್ ತಿಮಿಂಗಲಗಳಾಗಿ ಮಾರ್ಪಟ್ಟವು ಎಂದು ವಿಜ್ಞಾನದ ಸಂಶೋಧನೆಗಳು ಹೇಳುತ್ತವೆ. ಇದು ಕಥೆಯಲ್ಲ, ಇದೇ ಭೂ ಗ್ರಹದಲ್ಲಿ ನಡೆದ ವಿಸ್ಮಯ.
*ಪ್ರಕಾಶ ಉಳ್ಳೆಗಡ್ಡಿ, ಮಸ್ಕತ್ತ್