Advertisement

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

12:15 AM Aug 14, 2020 | mahesh |

ಸಮಾನತೆಯ ಹಾದಿಯಲ್ಲಿ ದೇಶವು ಸಾಗಬೇಕಾದ ದಾರಿ ಇನ್ನೂ ಇದೆಯಾದರೂ ಈ ನಿಟ್ಟಿನಲ್ಲಿ ಒಂದು ರಾಷ್ಟ್ರವಾಗಿ, ಸಮಾಜವಾಗಿ ನಾವು ಕೆಲವು ವರ್ಷಗಳಿಂದ ಗಮನಾರ್ಹ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವೊ ಒಂದೆನ್ನಬಹುದು. ಹಿಂದೂ ಅವಿಭಜಿತ ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು, ಮಗಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಸಮಾನ ಹಕ್ಕಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಇದಷ್ಟೇ ಅಲ್ಲದೇ 2005ರ ಹಿಂದೂ ಉತ್ತರಾಧಿಕಾರ ಕಾಯ್ದೆ (ತಿದ್ದುಪಡಿ) ಜಾರಿಗೆ ಬರುವುದಕ್ಕಿಂತ ಮೊದಲೇ ತಂದೆ ಮೃತರಾಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಸಮಾನ ಹಕ್ಕು ಸಿಗುತ್ತದೆ ಎಂದು ಮಹತ್ವದ ಆದೇಶ ನೀಡಿದೆ.

Advertisement

ತಂದೆಯ ಸಂಪತ್ತಿನಲ್ಲಿ ಮಗಳಿಗೆ ಮಗನಷ್ಟೇ ಸಮಾನ ಹಕ್ಕು ಇರಬೇಕು ಎಂಬ ವಿಚಾರದಲ್ಲಿ ಮೊದಲಿನಿಂದಲೂ ಒಮ್ಮತದ ಮಾತುಗಳು ಕೇಳಿಬರುತ್ತಿರಲಿಲ್ಲ. ಈ ಹಿಂದೆ ಅಂದರೆ 2005ಕ್ಕೂ ಮುನ್ನ ಇದ್ದ ಕಾನೂನಿನಲ್ಲಿ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕುದಾರಳೆಂಬ ಅಂಶ ಇರಲಿಲ್ಲ. 1956ರಿಂದ ಲಾಗೂ ಆಗಿದ್ದ ಈ ಉತ್ತರಾಧಿಕಾರ ಕಾನೂನಿಗೆ 2005ರಲ್ಲಿ ತಿದ್ದುಪಡಿ ತಂದು, ಹೆಣ್ಣು-ಗಂಡು ಆಸ್ತಿ ಪಡೆಯುವಲ್ಲಿ ಸಮಾನರು ಎಂದು ಬದಲಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಕೆಲವು ಗೊಂದಲಗಳೂ ಇದ್ದವು. ಈಗ ಈ ಗೊಂದಲಗಳನ್ನು ಬಗೆಹರಿಸಿರುವ ತ್ರಿಸದಸ್ಯ ಪೀಠವು, ಹಿಂದೂ ಉತ್ತರಾಧಿಕಾರ ಕಾಯಿದೆಗೆ ಮಾಡಿದ ತಿದ್ದುಪಡಿಯು ಪೂರ್ವಾನ್ವಯವೂ ಆಗುತ್ತದೆ ಎಂದು ಹೇಳಿದೆ.

ಯಾವುದೇ ಪ್ರಜಾಪ್ರಭುತ್ವಿಯ ರಾಷ್ಟ್ರವಿರಲಿ, ಅಲ್ಲಿ ಸಮಾನತೆಗೆ ಮೇಲುಗೈ ಇರಬೇಕು. ಯಾವುದೇ ರೀತಿಯ ಭೇದಭಾವ-ತಾರತಮ್ಯ ರಾಷ್ಟ್ರವೊಂದರ ಒಟ್ಟಾರೆ ಏಳ್ಗೆಗೆ ಅಡ್ಡಗಾಲಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ಸಮಾನತೆ, ಸಶಕ್ತೀಕರಣವೆನ್ನುವುದು ಕೇವಲ ಭಾಷಣಕ್ಕೆ ಸೀಮಿತವಾಗದೆ ಅನುಷ್ಠಾನದಲ್ಲೂ ಮುಂಚೂಣಿಯಲ್ಲಿರುವ ರಾಷ್ಟ್ರಗಳು ಸರ್ವತೋಮುಖ ಅಭಿವೃದ್ಧಿ ಹೊಂದಿವೆ. ಭಾರತದಲ್ಲೀಗ ಮಹಿಳೆಯರಿಗೆ ಬೆನ್ನೆಲುಬಾಗುವಂಥ ಕಾನೂನುಗಳಿವೆಯಾದರೂ ಈಗಲೂ ಅವರು ಹಲವು ವಿಷಯಗಳಲ್ಲಿ ಸಮಾನತೆಗಾಗಿ, ನ್ಯಾಯಕ್ಕಾಗಿ ಪಡಿಪಾಟಲುಪಡುತ್ತಿದ್ದಾರೆ. ಅಂದರೆ ಕಾನೂನುಗಳಷ್ಟೇ ಅಲ್ಲದೆ ಹೆಣ್ಣುಮಕ್ಕಳೆಡೆಗಿನ ಸಮಾಜದ ಒಟ್ಟಾರೆ ಧೋರಣೆಯು ಬದಲಾಗುವುದೂ ಸಹ ಮಹಿಳಾ ಸಶಕ್ತೀಕರಣದ ಕನಸು ನನಸಾಗಲು ಸಹಕರಿಸಬಲ್ಲದು. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಕೆಲವು ವರ್ಷಗಳಿಂದ ಮಹಿಳಾ ಸಶಕ್ತೀಕರಣದ ವಿಷಯದಲ್ಲಿ ನೀಡುತ್ತಿರುವ ತೀರ್ಪುಗಳು ಸಮಾನತೆಯ ಹಾದಿಯಲ್ಲಿ ಅತ್ಯಂತ ಆಶಾದಾಯಕ ಹೆಜ್ಜೆಗಳೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next