Advertisement

ರಾಜ್ಯಪಾಲರ ಕರ್ತವ್ಯ ಪರಿಧಿ ಜ್ಞಾಪಿಸಿದ ಸುಪ್ರೀಂ ಕೋರ್ಟ್‌

11:52 PM May 11, 2023 | Team Udayavani |

ದೇಶದ ಸರ್ವೋತ್ಛ ನ್ಯಾಯಾಲಯ ಗುರುವಾರ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ನೀಡಿದ ತೀರ್ಪುಗಳು ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳ ಕರ್ತವ್ಯ ಪರಿಧಿಯೇನು ಎಂಬುದರತ್ತ ಬೆಳಕು ಚೆಲ್ಲಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೇಂದ್ರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್‌ ಗವರ್ನರ್‌ ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯನ್ನು ವಸ್ತುನಿಷ್ಠವಾಗಿ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಪಂಚಸದಸ್ಯ ಪೀಠ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

Advertisement

ರಾಷ್ಟ್ರ ರಾಜಧಾನಿ ದಿಲ್ಲಿಯ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣದ ವಿಚಾರವಾಗಿ ದಿಲ್ಲಿ ಸರಕಾರ ಮತ್ತು ಕೇಂದ್ರ ಸರಕಾರದ ನಡುವೆ ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿರುವ ಹಗ್ಗಜಗ್ಗಾಟಕ್ಕೆ ಸುಪ್ರೀಂ ಕೋರ್ಟ್‌ ತೆರೆ ಎಳೆದಿದೆ. ಕಾನೂನು ಮತ್ತು ಸುವ್ಯವಸ್ಥೆ, ಪೊಲೀಸ್‌ ಹಾಗೂ ಭೂಮಿಗೆ ಸಂಬಂಧಿಸಿದ ಅಧಿಕಾರಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ಆಡಳಿತಾತ್ಮಕ ಸೇವೆಗಳ ಅಧಿಕಾರದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವ ಅಧಿಕಾರ ದಿಲ್ಲಿಯ ಚುನಾಯಿತ ಸರಕಾರಕ್ಕಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿ ತವಾದ ಸರಕಾರಕ್ಕೆ ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲವಾದರೆ ಪ್ರತ್ಯೇಕ ಚುನಾಯಿತ ಸಂಸ್ಥೆ ಹೊಂದುವ ಉದ್ದೇಶವೇ ವಿಫ‌ಲವಾದಂತೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇನ್ನು ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಬಿಕ್ಕಟ್ಟಿನ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವುದಕ್ಕೂ ಮುನ್ನವೇ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ಸರಕಾರದ ಪುನಃಸ್ಥಾಪನೆ ಸಾಧ್ಯವಿಲ್ಲ ಎಂದು ಹೇಳಿದೆ. ಇದೇ ವೇಳೆ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂದಿನ ರಾಜ್ಯಪಾಲರ ನಡೆಯ ಬಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆಯಲ್ಲದೆ ಹಾಲಿ ಸಿಎಂ ಏಕನಾಥ್‌ ಶಿಂಧೆ ಬಣದ ಸಚೇತಕರನ್ನು ಸ್ಪೀಕರ್‌ ನೇಮಕ ಮಾಡಿರುವುದು ಕೂಡ ಸರಿಯಲ್ಲ ಎಂದು ಹೇಳಿದೆ.

ಯಾವುದೇ ರಾಜಕೀಯ ಪಕ್ಷದ ಆಂತರಿಕ ವಿಚಾರಗಳಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಲು ಸಂವಿಧಾನ ಅಥವಾ ದೇಶದ ಕಾನೂನಿನಲ್ಲಿ ಅವಕಾಶವಿಲ್ಲ. ರಾಜ್ಯಪಾಲರು ವಸ್ತುನಿಷ್ಠ ಸಾಕ್ಷ್ಯ, ದಾಖಲೆಗಳನ್ನು ಪರಿಗಣಿಸಿ ತಮ್ಮ ವಿವೇಚಾನಾಧಿಕಾರವನ್ನು ಬಳಸಬೇಕೇ ವಿನಾ ವ್ಯಕ್ತಿ ನಿಷ್ಠವಾಗಿ ಅಲ್ಲ. ಈ ವಿಚಾರದಲ್ಲಿ ರಾಜ್ಯಪಾಲರು ಮತ್ತು ಸ್ಪೀಕರ್‌ ಅವರ ನಿಲುವು ಮತ್ತು ನಡೆ ಪ್ರಶ್ನಾರ್ಹ ಎಂದು ಸುಪ್ರೀಂ ಕೋರ್ಟ್‌ ಕಟು ಮಾತುಗಳಲ್ಲಿ ಹೇಳಿದೆ.

ಈ ಎರಡೂ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಅವರ ಸಾಂವಿಧಾನಿಕ ಹೊಣೆಗಾರಿಕೆ, ಅವರ ಕರ್ತವ್ಯದ ಪರಿಧಿ ಬಗೆಗೆ ಕೆಲವೊಂದು ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ ಸಂದರ್ಭದಲ್ಲಿ ರಾಜ್ಯಪಾಲರು ಅದನ್ನು ಸಾಂವಿಧಾನಿಕ ನಿಯಮಾವಳಿಗಳಿಗನುಸಾರ ಹೇಗೆ ನಿಭಾಯಿಸಬೇಕು ಎಂಬ ವಿಷಯವಾಗಿಯೂ ತನ್ನ ತೀರ್ಪಿನಲ್ಲಿ ಕ್ಷ-ಕಿರಣ ಬೀರಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಈ ಎರಡು ಹುದ್ದೆಗಳ ಅಧಿಕಾರ, ಕಾರ್ಯವ್ಯಾಪ್ತಿ ಸೀಮಿತ ವಾದುದಾದರೂ ಆ ಹುದ್ದೆಗಿರುವ ಸಾಂವಿಧಾನಿಕ ಗೌರವ, ಘನತೆಯನ್ನು ಎತ್ತಿಹಿಡಿಯುವ ಕಾರ್ಯ ಈ ಹುದ್ದೆಗಳಲ್ಲಿ ಇರುವವರಿಂದಾಗಬೇಕಿದೆ. ರಾಜ್ಯಗಳಲ್ಲಿನ ಚುನಾಯಿತ ಸರಕಾರಗಳು ಹಾದಿತಪ್ಪಿದಾಗ ಅವುಗಳ ಕಿವಿ ಹಿಂಡಿ ಸರಿದಾರಿಯಲ್ಲಿ ಕೊಂಡೊಯ್ಯುವ ಕೆಲಸ ರಾಜ್ಯಪಾಲರಿಂದಾಗಬೇಕೇ ವಿನಾ ಕೇವಲ ರಾಜಕೀಯ ಪ್ರತಿಷ್ಠೆ, ವೈಮನಸ್ಸು, ಪಕ್ಷನಿಷ್ಠೆಯನ್ನು ಮುಂದಿಟ್ಟು ಹುದ್ದೆಗೆ ಮಸಿ ಬಳಿಯುವ ಕಾರ್ಯವಾಗಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next