ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ನೀಡಿರುವ ತೀರ್ಪು ರಾಜಕೀಯ ಪ್ರೇರಿತ. ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಇದು ಸಕಾಲವಾಗಿದ್ದು, ರಾಜ್ಯ ಚುನಾವಣಾ ಪ್ರಚಾರಕ್ಕೆ ಬರುವ ಬಿಜೆಪಿ ನಾಯಕರ ವಿರುದ್ಧ ಜನತೆ ತಿರುಗಿಬೀಳಬೇಕು ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ಹೇಳಿದ್ದಾರೆ.
ನಗರದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ) ಹಳೆಯ ವಿದ್ಯಾರ್ಥಿಗಳ ಸಂಘದ ಸಭಾಂಗಣದಲ್ಲಿ ಗುರುವಾರ ಬೆಂಗಳೂರು ವಕೀಲರ ಸಮುದಾಯ ಹಮ್ಮಿಕೊಂಡಿದ್ದ “ಎಸ್ಸಿ/ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ-1989ರ ಬಗ್ಗೆ ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ ತೀರ್ಪು’ ಕುರಿತ ಸಂವಾದದಲ್ಲಿ ಮಾತನಾಡಿದರು.
ಈಚೆಗೆ ಮೈಸೂರಿನಲ್ಲಿ ಅಮಿತ್ ಶಾ ವಿರುದ್ಧ ದಲಿತರು ದನಿ ಎತ್ತುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಆದರೆ, ಈ ಆಕ್ರಮಣ ಮತ್ತಷ್ಟು ತೀವ್ರವಾಗಬೇಕು. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು, ದಲಿತರ ಕಾಯ್ದೆ ದುರ್ಬಲಗೊಳಿಸುತ್ತಿರುವ ಈ ಇಬ್ಬರೂ ನಾಯಕರಿಗೆ (ನರೇಂದ್ರ ಮೋದಿ ಮತ್ತು ಅಮಿತ್ ಶಾ) ಖಡಕ್ ಎಚ್ಚರಿಕೆ ನೀಡಬೇಕು ಎಂದರು.
ಟಾರ್ಗೆಟ್ ಮಾಡಿ: ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆ ಮತ್ತು ಬರುವ ವರ್ಷ ಲೋಕಸಭಾ ಚುನಾವಣೆ ಇದೆ. ಇಂತಹ ಸಂದರ್ಭದಲ್ಲಿ ಈ ತೀರ್ಪು ಹೊರಬಿದ್ದಿದೆ. ಈ ಮೂಲಕ ಮೇಲ್ಜಾತಿಯ ವೋಟುಗಳನ್ನು ಒಗ್ಗೂಡಿಸಿ, ಕೆಳಜಾತಿಗಳನ್ನು ಒಡೆಯುವುದು ಇದರ ಹುನ್ನಾರವಾಗಿದೆ ಹೀಗಾಗಿ ಚುನಾವಣೆ ಪ್ರಚಾರಕ್ಕೆ ಬರುವ ಇಬ್ಬರೂ ನಾಯಕರನ್ನು ಟಾರ್ಗೆಟ್ ಮಾಡಬೇಕು ಎಂದರು.
ಇದಕ್ಕೂ ಮುನ್ನ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನಿಸ್ವಾಮಿ ಮಾತನಾಡಿ, ಬಿಜೆಪಿಯ ಆಂತರ್ಯ ಈ ತೀರ್ಪಿನಲ್ಲಿ ಎದ್ದು ಕಾಣುತ್ತಿದೆ. ಆಗಾಗ್ಗೆ ಬಿಜೆಪಿಯು ಇಂತಹ “ಟೆಸ್ಟ್ ಡೋಸ್’ ಕೊಡುತ್ತಲೇ ಇರುತ್ತದೆ. ಆದರೆ, ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಆಳುವವರ ಮನಃಸ್ಥಿತಿ ಬಯಲು: ಪುರುಷೋತ್ತಮ್ ದಾಸ್ ಮಾತನಾಡಿ, ಎಸ್ಸಿ/ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ತೀರ್ಪಿನಲ್ಲಿ ನಮ್ಮನ್ನು ಆಳುತ್ತಿರುವವರ ಮನಃಸ್ಥಿತಿಯನ್ನು ಬಯಲುಗೊಳಿಸಿದೆ. ಇದರ ವಿರುದ್ಧ ಹೋರಾಡಬೇಕಾದರೆ, ನಮ್ಮದೂ ಒಂದು “ಗೌಪ್ಯ ಕಾರ್ಯಸೂಚಿ’ ಬೇಕು ಎಂದು ಹೇಳಿದರು.
ವಕೀಲ ಬಿ.ಟಿ. ವೆಂಕಟೇಶ್, ಪೀಪಲ್ಸ್ ವಾರ್ಚ್ ನಿರ್ದೇಶಕ ಹೆನ್ರಿ ತಿಪಾನಿ ಮಾತನಾಡಿದರು. ಅಖೀಲ ಭಾರತ ವಕೀಲರ ಸಂಘದ ನಾರಾಯಣಸ್ವಾಮಿ, ದಲಿತ ಮುಖಂಡ ಮೋಹನ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.