Advertisement

ಬೆಂಬಲ ಬೆಲೆ ಮಾನದಂಡವೇ ಕಂಟಕ

05:28 PM Feb 19, 2022 | Team Udayavani |

ಹುನಗುಂದ: ತೊಗರಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನಿಗದಿಪಡಿಸಿದ ಗುಣಮಟ್ಟದಲ್ಲಿ (ಗ್ರೇಡಿಂಗ್‌) ಇಲ್ಲ ಎನ್ನುವ ಕಾರಣಕ್ಕೆ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ ತೊಗರಿಯನ್ನು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಮಹಾಮಂಡಳಿಯು ನೇಮಿಸಿದ್ದ ಗ್ರೇಡರ್‌ಗಳು ತಿರಸ್ಕರಿಸಿದ್ದು, ಸಾವಿರಾರು ತೊಗರೆ ಬೆಳೆಗಾರರಿಗೆ ಬೆಂಬಲ ಬೆಲೆಯ ಮಾನದಂಡ ಕಂಟಕವಾಗಿವೆ. ಹೌದು, ಮುಂಗಾರು ಹಂಗಾಮಿನ ಪೂರ್ವದಲ್ಲಿ ಉತ್ತಮ ಮಳೆಯಾಗಿತ್ತು.

Advertisement

ಹೀಗಾಗಿ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ 16,520 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿತ್ತು. ಡಿಸೆಂಬರ್‌ನಲ್ಲಿ ಅತಿವೃಷ್ಟಿಯಿಂದ ತೊಗರಿ ಬೆಳೆಗಿಡದಲ್ಲಿ ಮೊಳಕೆಯೊಡೆದು ಬಹುತೇಕ ಬೆಳೆ ಹಾನಿಯಾಗಿತು. ರೈತನ ಕೈಗೆ ಸಿಕ್ಕ ತೊಗರಿ ಬೆಳೆಯು ಸಣ್ಣ ಕಾಳು ಮತ್ತು ಮುದೂಡಿದ ಕಾಳು ಹೆಚ್ಚಾಗಿದೆ. ಇಂತಹದ್ದನ್ನು ಖರೀದಿಸಿದರೇ ಕಂಪನಿಗೆ ನಷ್ಟವಾಗಲಿದೆ ಎಂದು ದೆಹಲಿಯಿಂದ ಬಂದ ಗ್ರೇಡರ್‌ ತಂಡ ಅವಳಿ ತಾಲೂಕಿನ ಸಾವಿರಾರು ಕ್ವಿಂಟಲ್‌ ರೈತರ ತೊಗರಿಯನ್ನು ತಿರಸ್ಕರಿಸಿದ್ದು, ಅವಳಿ ತಾಲೂಕಿನ ರೈತರು ಕಂಗಾಲಾಗಿದ್ದಾರೆ.

ಬೆಂಬಲ ಬೆಲೆಯಲ್ಲಿ ಖರೀದಿಯಾದ ತೊಗರಿ: ಹುನಗುಂದ ಮತ್ತು ಇಳಕಲ್ಲ ತಾಲೂಕಿನ ಪೈಕಿ ಸರ್ಕಾರ 11 ತೊಗರಿ ಬೆಂಬಲ ಬೆಲೆಯ ಕೇಂದ್ರ
ತೆರೆ‌ದಿದೆ. 11 ಕೇಂದ್ರಗಳಲ್ಲಿ ಒಟ್ಟು 5252 ಜನ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅಮರಾವತಿ ಕೇಂದ್ರದಲ್ಲಿ ಕೇವಲ 9 ರೈತರಿಂದ 100 ಕ್ವಿಂಟಲ್‌,ಹುನಗುಂದ ಟಿಎಪಿಸಿಎಂಎಸ್‌ ಕೇಂದ್ರದಲ್ಲಿ 194 ಜನ ರೈತರಿಂದ ಖರೀದಿಯಾದ 2469 ಕ್ವಿಂಟಲ್‌ದಲ್ಲಿ 1790 ಕ್ವಿಂಟಲ್‌ ಉಗ್ರಾಣ ನಿಗಮಕ್ಕೆ ಕಳುಹಿಸಿದರೇ, ಉಳಿದ 679 ಕ್ವಿಂಟಲ್‌ ತೊಗರಿ ಕೇಂದ್ರದಲ್ಲಿದೆ. ಕೂಡಲಸಂಗಮ ಕೇಂದ್ರದಲ್ಲಿ 200 ಜನ ರೈತರಿಂದ ಖರೀದಿಸಿದ ಸಾವಿರ ಕ್ವಿಂಟಲ್‌ದಲ್ಲಿ 489 ಕ್ವಿಂಟಲ್‌ ಉಗ್ರಾಣ ನಿಗಮಕ್ಕೆ ಸಾಗಿಸಿದರೇ, ಉಳಿದ 502 ಕ್ವಿಂಟಲ್‌ ತೊಗರಿ ಕೇಂದ್ರದಲ್ಲಿದೆ.

ಬೂದಿಹಾಳ ಎಸ್‌.ಕೆ ಕೇಂದ್ರದ 98 ಜನ ರೈತರಿಂದ ಖರೀದಿಯಾದ 1400 ಕ್ವಿಂಟಲ್‌ದಲ್ಲಿ 750 ಕ್ವಿಂಟಲ್‌ ಏರ್‌ ಹೌಸ್‌ಗೆ ಕಳುಹಿಸಿದರೇ, ಉಳಿದ 650 ಕ್ವಿಂಟಲ್‌ ತೊಗರಿ ಕೇಂದ್ರದಲ್ಲಿದೆ. ಇಳಕಲ್ಲ 2 ಕೇಂದ್ರಗಳ ಪೈಕಿ 95 ಜನ ರೈತರಿಂದ 489.5 (967 ಪ್ಯಾಕೇಟ್‌) ಕ್ವಿಂಟಲ್‌ ತೊಗರಿ ಖರೀದಿಯಾಗಿದ್ದು, ಕೇಂದ್ರದಲ್ಲಿದೆ. ಇನ್ನೊಂದು ಕೇಂದ್ರದಲ್ಲಿ ಖರೀದಿಯಾದ 101 ಟನ್‌ ತೊಗರಿಯಲ್ಲಿ ಕೇವಲ 16 ಟನ್‌ ಮಾತ್ರ ಏರ್‌ ಹೌಸ್‌ಗೆ ಸಾಗಿಸಿದೆ. ಉಳಿದಿದ್ದು ಕೇಂದ್ರದಲ್ಲಿದೆ.

ಸೂಳೇಭಾವಿ ಕೇಂದ್ರದಲ್ಲಿ 94 ರೈತರಿಂದ ಖರೀದಿಯಾದ 1192 ಕ್ವಿಂಟಲ್‌ದಲ್ಲಿ 580 ಕ್ವಿಂಟಲ್‌ ಉಗ್ರಾಣ ನಿಗಮಕ್ಕೆ ಕಳುಹಿಸಿದ್ದು, ಉಳಿದ 612 ಕ್ವಿಂಟಲ್‌ ಕೇಂದ್ರದಲ್ಲಿದೆ. ಚಿಕ್ಕಸಿಂಗನಗುತ್ತಿ 600 ಕ್ವಿಂಟಲ್‌ ತೊಗರಿ ಖರೀದಿಯಾಗಿದ್ದು ಅದರಲ್ಲಿ 312 ಪ್ಯಾಕೇಟ್‌ ಮಾತ್ರ ಏರ್‌ ಹೌಸ್‌ಗೆ ಹೋಗಿದೆ. ಹಿರೇಆದಾಪುರ ಕೇಂದ್ರದ 82 ರೈತರಿಂದ ಖರೀದಿಯಾದ 1089 ಕ್ವಿಂಟಲ್‌ ತೊಗರಿಯಲ್ಲಿ 825 ಕ್ವಿಂಟಲ್‌ ಉಗ್ರಾಣ ನಿಗಮಕ್ಕೆ ಕಳಿಸಿದರೇ ಉಳಿದ 254.5 ಕ್ವಿಂಟಲ್‌ ಕೇಂದ್ರದಲ್ಲಿದೆ. ಕಂದಗಲ್ಲ ಕೇಂದ್ರದಲ್ಲಿ 643.5 ಕ್ವಿಂಟಲ್‌ ಖರೀದಿಯಾಗಿದೆ ಅದರಲ್ಲಿ 249 ಕ್ವಿಂಟಲ್‌ ಉಗ್ರಾಣ ನಿಗಮಕ್ಕೆ ಕಳುಹಿಸಿದೆ.ನಂದವಾಡಗಿ ಕೇಂದ್ರದಲ್ಲಿ 1063.5 ಕ್ವಿಂಟಲ್‌ದಲ್ಲಿ 600 ಕ್ವಿಂಟಲ್‌ ತೊಗರಿ ಉಗ್ರಾಣ ನಿಗಮಕ್ಕೆ ಸಾಗಿಸಲಾಗಿದೆ.

Advertisement

ಸಾವಿರ ರೈತರಿಂದ ಮಾತ್ರ ತೊಗರಿ ಖರೀದಿ:ತೊಗರಿ ಬೆಂಬಲ ಬೆಲೆಯಡಿಯಲ್ಲಿ ನೋಂದಣಿಯಾದ 5252 ರೈತರ ಪೈಕಿ ಕೇವಲ 1000 ಜನ ರೈತರಿಂದ ಮಾತ್ರ ಸದ್ಯ ತೊಗರಿಯನ್ನು ಖರೀದಿಸಿದ್ದು, ಉಳಿದ 4252 ಜನ ರೈತರ ತೊಗರಿ ಖರೀದಿಸಬೇಕಾಗಿದೆ.

ಗ್ರೇಡಿಂಗ್‌ ಇಲ್ಲದ್ದಕ್ಕೆ ಬೆಂಬಲ ಬೆಲೆ ಕೇಂದ್ರ ಬಂದ್‌: ತೊಗರಿ ಬೆಳೆಯು ಮಳೆಗೆ ಸಿಲುಕಿ ಶೇ. 8ರಷ್ಟು ಕಳಪೆಯಿಂದ ಕೂಡಿದೆ ಎಂದು ತಿಳಿಸಿ ಜ. 29ರಂದು ಬೆಂಬಲ ಬೆಲೆ ಕೇಂದ್ರವನ್ನು ಬಂದ್‌ ಮಾಡಲಾಗಿದೆ. ಇದರಿಂದ ಸಾವಿರಾರು ತೊಗರಿ ಬೆಳೆದ ರೈತರು ಕಂಗಾಲಾಗಿದ್ದಾರೆ.

ಬೆಂಬಲ ಬೆಲೆ ಖರೀದಿ ಕೇಂದ್ರ ಪುನಾರಂಭಿಸುವಂತೆ ರೈತರಿಂದ ಹೋರಾಟ: ಮಳೆಯಿಂದ ತೊಗರಿ ಸ್ವಲ್ಪ ಮಟ್ಟಿಗೆ ಕಳಪೆ ಮಟ್ಟದಿಂದ ಕೂಡಿದೆ. ಆದರೆ ಬೆಂಬಲ ಬೆಲೆಯಲ್ಲಿ ಖರೀದಿಸಲು ಮಾಡಿದ ಮಾನದಂಡಗಳನ್ನು ಸಡಿಲಿಗೊಳಿಸಿ ರೈತರ ತೊಗರಿ ಖರೀದಿಸಬೇಕು ಮತ್ತು ಖರೀದಿ ಕೇಂದ್ರವನ್ನು ಪುನಾರಂಭಿಸುವಂತೆ ಕಳೆದ ಐದು ದಿನಗಳಿಂದ ರೈತ ಸಂಘ ತಹಶೀಲ್ದಾರ್‌ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ನಡೆಯುತ್ತಿದೆ.

ಉಗ್ರಾಣ ನಿಗಮದಲ್ಲಿ ಕೊಳೆಯುತ್ತ ಬಿದ್ದ ತೊಗರಿ: ಅವಳಿ ತಾಲೂಕಿನ 11 ಖರೀದಿ ಕೇಂದ್ರಗಳಿಂದ 10,895 ಕ್ವಿಂಟಲ್‌ ತೊಗರಿ ಖರೀದಿಯಾಗಿದೆ. 4197.5 ಕ್ವಿಂಟಲ್‌ ತೊಗರಿಯನ್ನು ಉಗ್ರಾಣ ನಿಗಮಕ್ಕೆ ಸಾಗಿಸಿದೆ.ಅದಕ್ಕೆ ನಪೇಡ್‌ ಅನುಮತಿ ನೀಡಿದರೇ ಮಾತ್ರ ರೈತರಿಗೆ ಪರಿಹಾರ ಸಿಗುತ್ತದೆ. ಇಲ್ಲದಿದ್ದರೇ ಪರಿಹಾರ ಕಷ್ಟ ಸಾಧ್ಯ ಎನ್ನುತ್ತಾರೆ ಉಗ್ರಾಣ ನಿಗಮದ ಅಧಿಕಾರಿಗಳು.

ತಾಲೂಕಿನಲ್ಲಿ ಬೆಳೆದ ತೊಗರಿ ಬೆಳೆ ಶೇ. 8ರಷ್ಟು ಕಳಪೆ ಮಟ್ಟದಿಂದ ಕೂಡಿದೆ ಎಂದು ಗ್ರೇಡರ್‌ ಹೇಳಿದ್ದಾರೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೆ ತರಲು ಶಾಸಕರು ಮತ್ತು ಸಂಸದರ ಮೂಲಕ ಪತ್ರ ವ್ಯವಹಾರ ಮಾಡಲಾಗಿದೆ. ಇದಕ್ಕೆ ಯಾವುದೇ ಉತ್ತರ ಬಂದಿಲ್ಲ. ಸರ್ಕಾರ ಖರೀದಿಸಲು ಅನುಮತಿ ನೀಡಿದರೇ ಖಂಡಿತ ರೈತರಿಂದ ತೊಗರಿ ಖರೀದಿಸಲಾಗುವುದು.
ಶ್ರೀಧರ ಕುಲಕರ್ಣಿ, ಮ್ಯಾನೇಜರ್‌
ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳ

*ಮಲ್ಲಿಕಾರ್ಜುನ ಎಂ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next