Advertisement

ಶುದ್ಧ ಕುಡಿವ ನೀರು ಪೂರೈಕೆ ಕಾರ್ಯ ಶ್ಲಾಘನೀಯ

12:07 PM Jan 02, 2017 | Team Udayavani |

ದಾವಣಗೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯದೆಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ಜನರಿಗೆ ನೀರು ಒದಗಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. 

Advertisement

ಭಾನುವಾರ ಭಾರತ್‌ ಕಾಲೋನಿಯ ಪುಷ್ಪ ಕೇಂದ್ರ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ದಾವಣಗೆರೆ ಬಿ ವಲಯದ ಒಕ್ಕೂಟ ಪದಗ್ರಹಣ ಮತ್ತು ಸಾಧನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ಪುಟ್ಟಪರ್ತಿಯ ಸಾಯಿಬಾಬಾರವರು ಆಂಧ್ರಪ್ರದೇಶದ ಕೆಲವಾರು ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ ಹಮ್ಮಿಕೊಂಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ದಾವಣಗೆರೆ ಒಳಗೊಂಡಂತೆ ಇಡೀ ರಾಜ್ಯಕ್ಕೆ ಶುದ್ಧವಾದ ಕುಡಿಯುವ ನೀರು ಒದಗಿಸುವ ಕಾರ್ಯ ಹಮ್ಮಿಕೊಂಡಿರುವುದು ಸಂತೋಷದ ವಿಚಾರ.

ಅತಿ ಕಡಿಮೆ ವೆಚ್ಚದಲ್ಲಿ ಶುದ್ಧಗಂಗಾ ಯೋಜನೆಯ ಮೂಲಕ ಶುದ್ಧ ನೀರು ಒದಗಿಸಲಾಗುತ್ತಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ಒಂದಾಗಿ ಹಲವಾರು ಕಾರ್ಯಕ್ರಮ, ಯೋಜನೆಯ ಮೂಲಕ ಬಡವರಿಗೆ ಆರ್ಥಿಕ ಒಳಗೊಂಡಂತೆ ಎಲ್ಲ ರೀತಿಯ ಸಹಾಯ ಮಾಡಲಾಗುತ್ತಿದೆ. 

ಗ್ರಾಮೀಣ ಭಾಗದಲ್ಲಿರುವ ದೇವಸ್ಥಾನ, ಧಾರ್ಮಿಕ ಶ್ರದ್ಧಾಕೇಂದ್ರಗಳ ಪುನಶ್ಚೇತನಕ್ಕೆ ಧನ ಸಹಾಯ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಸ್ವತ್ಛತೆಗೆ ಅಪಾರ ಕಾಳಜಿ ವಹಿಸಲಾಗುತ್ತಿದೆ. ಈ ರೀತಿಯ ಹಲವಾರು ಜನಪರ ಮತ್ತು ಜನಪಯೋಗಿ ಕೆಲಸಗಳ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಒಳ್ಳೆಯ ಹೆಸರು ಪಡೆದಿವೆ.

Advertisement

ಈ ಕೆಲಸ ಸದಾ ಹೀಗೇಯೇ ಮುಂದುವರೆಯಲಿ ಎಂದು ಆಶಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಮೂಲಕ ಮಹಿಳೆಯರಿಗಾಗಿ ಸ್ವ ಸಹಾಯ ಸಂಘಗಳ ಪ್ರಾರಂಭಿಸಿ, ವಿವಿಧ ರೀತಿಯ ತರಬೇತಿ ಕೊಡಲಾಗುತ್ತಿದೆ. ಮಹಿಳೆಯರು ಸಹ ಆರ್ಥಿಕ ಚಟುವಟಿಕೆ ನಡೆಸುವ ಮೂಲಕ ಸ್ವಾವಲಂಬನೆ, ಉಳಿತಾಯ ಮಾಡುವುದನ್ನು ಕಲಿಸಲಾಗುತ್ತಿದೆ.

ನೂರಾರು ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಸಬಲತೆ ಸಾಧಿಸುತ್ತಿದ್ದಾರೆ. ವಿವಿಧ ವಿಷಯಗಳ ಬಗ್ಗೆ ವಿಚಾರ ಸಂಕಿರಣ, ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣಕ್ಕೆ ಒತ್ತು, ಅರ್ಹರಿಗೆ ಮಾಶಾಸನ, ಶಿಕ್ಷಣ, ಹಿರಿಯರಿಗೆ ತಿಂಗಳಿಗೆ 500 ರೂಪಾಯಿ ಸಹಾಯಧನ ನೀಡಲಾಗುತ್ತಿದೆ ಎಂದು ಸ್ಮರಿಸಿದರು.

2016 ಹೋಗಿ ಹೊಸ ವರ್ಷ 2017 ಬಂದಿದೆ. ಬರದಿಂದ ರೈತರು, ಜನ, ಜಾನುವಾರು ಬಹಳ ಸಮಸ್ಯೆ ಅನುಭವಿಸಬೇಕಾಯಿತು. ರೈತರಗಂತೂ ಕರಾಳ ವರ್ಷವಾಗಿತ್ತು. ಹೊಸ ವರ್ಷದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ. ದೇಶದ ಅಭಿವೃದ್ಧಿಯಾಗುವಂತೆ ದೇವರು ಕರುಣಸಲಿ. ಹೊಸ ವರ್ಷ ಎಲ್ಲರಿಗೆ ಒಳ್ಳೆಯದನ್ನು ಉಂಟು ಮಾಡಲಿ ಎಂದು ಶುಭ ಕೋರಿದರು. 

ನಗರಪಾಲಿಕೆ ಶಿವನಳ್ಳಿ ರಮೇಶ್‌ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾವಣಗೆರೆಯಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಮಾಣದಲ್ಲಿ ಸಹಾಯ ಮಾಡುತ್ತಿದೆ. ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಬಲೀಕರಣ ಮಾಡುತ್ತಿದೆ.

ಮಾಜಿ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಆಡಳಿತಾವಧಿಯಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಅತಿ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡಲಾಗಿತ್ತು. ಸಂಘಗಳ ಅಭಿವೃದ್ಧಿಗೆ ಸುತ್ತುನಿಧಿ ಒಳಗೊಂಡಂತೆ ಹಲವಾರು ಸೌಲಭ್ಯ ಕೊಡಲಾಯಿತು ಎಂದು ತಿಳಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಎನ್‌.ಜಿ. ಪುಟ್ಟಸ್ವಾಮಿ ಮಾತನಾಡಿದರು. ಮೇಯರ್‌ ರೇಖಾ ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಮೇಯರ್‌ಗಳಾದ ಎಚ್‌.ಬಿ. ಗೋಣೆಪ್ಪ, ರೇಣುಕಾಬಾಯಿ, ಸದಸ್ಯೆ ಮಂಜುಳಮ್ಮ ಹನುಮಂತಪ್ಪ, ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ದೇವಿರಮ್ಮ ರಾಮಚಂದ್ರನಾಯ್ಕ, ಎಂ. ಮಾದೇಶ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್‌ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next