Advertisement

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಕಾರ್ಯಾರಂಭ

04:24 PM Sep 09, 2018 | |

ಬಸವನಬಾಗೇವಾಡಿ: ವಿಜಯಪುರ ನಗರದಲ್ಲಿ 25 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 14 ಕೋಟಿ ವೆಚ್ಚದಲ್ಲಿ 100 ಹಾಸಿಗೆಯ ಮದರ್‌ ಚೈಲ್ಡ್‌ ಹೆಲ್ತ್‌ ಆಸ್ಪತ್ರೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಶೀಘ್ರದಲ್ಲೆ ಸಾರ್ವಜನಿಕರ ಸೇವೆಗೆ ಬರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ
ಹೇಳಿದರು.

Advertisement

ಶನಿವಾರ ಪಟ್ಟಣದಲ್ಲಿ ಮೆಗಾ ಮಾರುಕಟ್ಟೆ, ಬಸವ ಭವನ, ನೂತನ ಪುರಸಭೆ ಹಾಗೂ 500 ಜಿ+ ಆಸರೆ ಯೋಜನೆ ಮನೆಗಳ ನಿರ್ಮಾಣ ಕಾಮಗಾರಿ ವೀಕ್ಷಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದ ಸರಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಹಾಗೂ ವೈದ್ಯರ ಕೊರತೆ ಇತ್ತು. ಕಳೆದ 5 ವರ್ಷಗಳಿಂದ ನೇಮಕಾತಿಯಾಗಿರಲಿಲ್ಲ. ನಾನು ಆರೋಗ್ಯ ಸಚಿವನಾದ ಬಳಿಕ ಸಂದರ್ಶನ ಮೂಲಕ 118 ತಜ್ಞ ವೈದ್ಯರು ಹಾಗೂ 250 ವೈದ್ಯರು, 1659 ಎಎನ್‌ಎಂ (ಕಿರಿಯ ಮಹಿಳಾ ಆರೋಗ್ಯ ಸಹಾಯಕರು), 31 ಜ್ಯೂನಿಯರ್‌ ಡ್ರಗ್ಸ್‌ ಕಂಟ್ರೋಲರ್‌ಗಳನ್ನು 62 ಬ್ಲಾಕ್‌ ಹೆಲ್ತ್‌ ಎಜ್ಯುಕೇಶನ್‌ ಆಫೀಸರ್‌ ನೇಮಕ ಮಾಡುವ ಮೂಲಕ ಅರೋಗ್ಯ ಇಲಾಖೆಯಲ್ಲಿ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಮೂಲಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಹೇಳಿದರು.

ಕೊಲ್ಹಾರ ಹಾಗೂ ನಿಡಗುಂದಿ ಪಟ್ಟಣ ಸೇರಿದಂತೆ ಗೊಳಸಂಗಿಯಲ್ಲಿ ಮದರ್‌ ಆ್ಯಂಡ್‌ ಚೈಲ್ಡ್‌ ಆಸ್ಪತ್ರೆ (ಎಂಸಿಎಚ್‌) ಮಂಜೂರಿಸಲಾಗಿದೆ. ಕೂಡಗಿ ಬಳಿಯ ಎನ್‌ಟಿಪಿಸಿ ಸ್ಥಾಪನೆ ವಿರೋಧಿಸಿ ಹೋರಾಟ ನಡೆಸಿದ ಸಂದರ್ಭದಲ್ಲಿ ರೈತರ ಮೇಲೆ ದಾಖಲಾಗಿದ್ದ 30 ಪ್ರಕರಣ ಹಿಂಪಡೆಯುವಂತೆ ಹಲವು ಬಾರಿ ಒತ್ತಾಯಿಸಿದ್ದರು. ನಾನು ಸಚಿವನಾದ ಬಳಿಕ ಸಚಿವ ಸಂಪುಟದ ಗಮನಕ್ಕೆ ತಂದು ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿಯೆ ಮಾದರಿ ಎನ್ನುವಂತೆ ಪಟ್ಟಣದ ದ್ವಿಪಥ ಮಧ್ಯಭಾಗದಲ್ಲಿ ಬೀದಿ ದೀಪ ಅಳವಡಿಸಲಾಗುತ್ತಿದೆ. ಪಟ್ಟಣದಲ್ಲಿ ಪ್ರಗತಿಯಲ್ಲಿರುವ ಬಸವ ಭವನ, ಪುರಸಭೆ ನೂತನ ಕಟ್ಟಡದ ಒಂದನೇ ಹಂತದ ಕಾಮಗಾರಿ ಪೂರ್ಣಗೊಂಡಿವೆ. ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಮೆಗಾ ಮಾರುಕಟ್ಟೆಯ ಮೊದಲನೇ ಹಂತದ ಕಾಮಾಗಾರಿ ಆರಂಭವಾಗಿದೆ. ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್‌ ಮಾರ್ಗವಾಗಿ ಸಿಬಿಎಸ್‌ಇ ಶಾಲಾ ಕಾಂಪೌಂಡ್‌ ಗೆ ಹೊಂದಿಕೊಂಡ ರಸ್ತೆ ನಿರ್ಮಾಣ ಹಾಗೂ ಬಸವನಬಾಗೇವಾಡಿ, ಇವಣಗಿ ಕೂಡು ರಸ್ತೆಗೆ ಸೇತುವೆ ಕಾಮಗಾರಿ ಪೂರ್ಣಗೊಂಡ ಮೇಲೆ ಪಟ್ಟಣದಲ್ಲಿನ ವಾಹನ ಸಂಚಾರ ದಟ್ಟಣೆ ಒಂದಷ್ಟು ಕಡಿಮೆಯಾಗಿಲಿದೆ ಎಂದು ತಿಳಿಸಿದರು.

Advertisement

ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿ+ ಆಶ್ರಯ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಫಲಾನುಭವಿಗಳು ರೂ.1.30 ಲಕ್ಷ ಹಣ ಭರಿಸಬೇಕಿದೆ. ಕ್ಷೇತ್ರದಲ್ಲಿ ಕೆಲ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಬಾಕಿ ಇವೆ. ಈ
ಕೆಲ ರಸ್ತೆಗಳು ಪೂರ್ಣಗೊಂಡರೆ ಕ್ಷೇತ್ರದಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಮಾಡಿದಂತಾಗುತ್ತದೆ ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಮುಖ್ಯಾಥಿಕಾರಿ ಬಿ.ಎಸ್‌. ಸೌದಾಗಾರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಸಿ. ವಂದಾಲ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next