Advertisement

ವೆನಲಾಕ್ ಜಿಲ್ಲಾ ಆಸ್ಪತ್ರೆ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ 

12:16 PM Mar 26, 2017 | Harsha Rao |

ಮಂಗಳೂರು: ವೆನಲಾಕ್ ಜಿಲ್ಲಾ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ ಅನ್ನು ನಿರ್ಮಿಸಲು ಈಗಾಗಲೇ 15.16 ಕೋಟಿ ರೂ. ಅಂದಾಜು ವೆಚ್ಚದ ನೂತನ ಕಟ್ಟಡ ನಿರ್ಮಾಣ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಮಂಗಳೂರು ನಗರದ ದಕ್ಷಿಣ ಶಾಸಕ ಜೆ.ಆರ್‌. ಲೋಬೊ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಸಚಿವರು, 5.10 ಕೋ. ರೂ. ಅನ್ನು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಪಾವತಿಸಲಾಗಿದ್ದು, ಇದರಲ್ಲಿ ನೂತನ ಕಟ್ಟಡದ ನೆಲ ಮಾಳಿಗೆ ನಿರ್ಮಾಣ ಸಂಪೂರ್ಣ ಮುಗಿದಿದೆ. ನಬಾರ್ಡ್‌ ವತಿಯಿಂದ 9.70 ಕೋ. ರೂ. ಅನುದಾನವನ್ನು ಆರ್‌ಐಡಿಎಫ್‌-22 ಯೋಜನೆಯಡಿ ಮಂಜೂರು ಮಾಡಿ ಕೆಎಚ್‌ಎಸ್‌ಡಿಆರ್‌ಪಿ ಬೆಂಗಳೂರು ಅವರಿಗೆ ಕಾಮಗಾರಿ ಕೈಗೊಳ್ಳಲು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕೆಎಚ್‌ಎಸ್‌ಡಿಆರ್‌ಪಿ ವತಿಯಿಂದ ಕಾಮಗಾರಿ ನಿರ್ವಹಿಸಲು ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು. 

ಆಸ್ಪತ್ರೆಯ ಸಮಗ್ರ ದುರಸ್ತಿಗೆ ಕೆಎಚ್‌ಎಸ್‌ಡಿಆರ್‌ಪಿ ಮಂಗಳೂರು ಅವರು 18.20 ಕೋ. ರೂ. ಅಂದಾಜು ವೆಚ್ಚದ ಪಟ್ಟಿ ಸಲ್ಲಿಸಿದ್ದು, ಅದರಂತೆ 5 ಕೋ. ರೂ. ಅನುದಾನವನ್ನು ಕೆಎಚ್‌ಎಸ್‌ಡಿಆರ್‌ಪಿಗೆ ನಿರ್ವಹಣೆಗೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲಾಗಿದೆ. 

ಆರ್‌ಎಪಿಸಿಸಿ ಮಕ್ಕಳ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲದೇ, ಇನ್ನಿತರ ಸುತ್ತಮುತ್ತಲಿನ 8-10 ಜಿಲ್ಲೆಗಳಿಂದ ಹಾಗೂ ಗಡಿಭಾಗದ ಕೇರಳ ರಾಜ್ಯದಿಂದ ಬರುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸ ಲಾಗುತ್ತಿದೆ. ಮಂಗಳೂರು ಮತ್ತು ಸುತ್ತಮುತ್ತಲಿನ ಮಕ್ಕಳಿಗೆ ಹೆಚ್ಚುವರಿ ಆರೋಗ್ಯ ಸೌಲಭ್ಯ ಒದಗಿಸಲು 3 ಕೋ. ರೂ. ವೆಚ್ಚದಲ್ಲಿ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಮಾದರಿಯಲ್ಲಿ ಪ್ರಾದೇಶಿಕ ಹಾಗೂ ಉನ್ನತ ಮಕ್ಕಳ ಆರೋಗ್ಯ ಸಂಸ್ಥೆ ಸ್ಥಾಪಿಸಲು ಯೋಜಿಸಲಾಗಿದೆ. ಇದಕ್ಕಾಗಿ 3 ಕೋ. ರೂ. ಅನುದಾನವನ್ನು 2017-18ನೇ ಸಾಲಿನ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next