ದಾವಣಗೆರೆ: ಸೂರ್ಯ ಸಕಲ ಸವಲತ್ತು ಕೊಡುವಂತಹ ದೇವರು. ಹಾಗಾಗಿ ಪ್ರತಿಯೊಬ್ಬರು ಪ್ರತಿ ನಿತ್ಯ ಸೂರ್ಯ ನಮಸ್ಕಾರ ಮಾಡಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ರಥಸಪ್ತಮಿ ಅಂಗವಾಗಿ ಭಾನುವಾರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಾಗನೂರು ಬಸಪ್ಪ ಮೈದಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೂರ್ಯನೇ ಇಲ್ಲದೇ ಹೋದರೆ ಎಲ್ಲಾ ಜೀವಿಗಳು ಕತ್ತಲಲ್ಲೇ ಇರಬೇಕಾಗುತ್ತಿತ್ತು. ಸೂರ್ಯ ಇಡೀ ಜಗತ್ತಿಗೆ ಬೆಳಕನ್ನು ಹಾಗೂ ಸಕಲ ಸವಲತ್ತು ಕೊಡುವಂತಹ ದೇವರು ಎಂದು ಪ್ರತಿಪಾದಿಸಿದರು. ಪ್ರತಿಯೊಬ್ಬರು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವುದಾದರೆ ಪ್ರತಿ ದಿನ ಯೋಗ, ಪ್ರಾಣಾಯಾಮ, ಸೂರ್ಯ ನಮಸ್ಕಾರ ಮಾಡಬೇಕು. ಹಣ, ಸಂಪತ್ತು, ಹೆಂಡತಿ, ಮಕ್ಕಳು ಎಲ್ಲ ಇದ್ದರೂ ಆರೋಗ್ಯವೇ ಇರದಿದ್ದರೆ ಏನು ಮಾಡಲಿಕ್ಕೆ ಆಗುವುದಿಲ್ಲ.
ಹಾಗಾಗಿ ಆರೋಗ್ಯವನ್ನ ಚೆನ್ನಾಗಿ ಇಟ್ಟುಕೊಳ್ಳಬೇಕು. ಅದಕ್ಕಾಗಿ ಯೋಗ, ಪ್ರಾಣಾಯಾಮಕ್ಕೆ ಗಮನ ನೀಡಬೇಕು ಎಂದು ತಿಳಿಸಿದರು. ನಾವೆಲ್ಲರೂ 100 ವರ್ಷ ಬದುಕುವ ಛಲ, ಸಂಕಲ್ಪ ಮಾಡಬೇಕು. ಒಂದೇ ಕಡೆ ಇರುವಂತಹ ಮರ ನೂರಾರು ವರ್ಷ ಬಾಳುವಂತಹ ಚಲನವಲನತೆಯನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿ ದಿನ 10 ನಿಮಿಷ ಪ್ರಾಣಾಯಾಮ, 1 ಗಂಟೆ ಯೋಗ ಮಾಡುವ ಮುಖೇನ ಅಂತಹ ಚಲನವಲನವಂತರಾಗಬೇಕು ಎಂದು ತಿಳಿಸಿದರು.
ಜಾತಿ, ಮತ, ಪಂಥ ಯಾವುದೇ ಭೇದವೇ ಇಲ್ಲದಂತಹ ಯೋಗ ಭಾರತೀಯರ ಹೆಮ್ಮೆ. ಅಂತಹ ಯೋಗದಿಂದ ಸುಂದರ, ಶ್ರೀಮಂತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ಯೋಗವನ್ನ ಕ್ಷಣಕ್ಕೆ ಅಲ್ಲದೆ ಜೀವನ ವಿಧಾನ, ಮಾರ್ಗವನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಯಾರ ಮುಖ ಪ್ರಸನ್ನತೆಯಿಂದ ಕೂಡಿರುತ್ತದೆಯೋ ಅವರೇ ನಿಜವಾದ ಯೋಗಿಗಳು. ಅಂತಹ ಯೋಗಿಗಳನ್ನುಸಿದ್ಧಪಡಿಸುವಂತಹ ಶಕ್ತಿ ಯೋಗಕ್ಕಿದೆ.
ಪ್ರತಿಯೊಬ್ಬರು ಪ್ರತಿ ದಿನ ಯೋಗ ಮಾಡುವ ಮೂಲಕ ಯೋಗಿಗಳಾಗಬೇಕು ಎಂದು ತಿಳಿಸಿದರು. ರಾಜ ಯೋಗೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ವಚನಗಳಲ್ಲಿ ವೈಚಾರಿಕತೆ ಜೊತೆಗೆ ವೈಜ್ಞಾನಿಕ ಚಿಂತನೆ ಹೇಳಿದ್ದಾರೆ ಅದಕ್ಕೆ ಯೋಗವೇ ನಿದರ್ಶನ. ಸದೃಢ ದೇಹ, ಮನಸ್ಸಿಗೆ ಯೋಗ. ಬದುಕು ಸುಂದರವಾಗಿರಲು ಯೋಗ, ಧ್ಯಾನ, ಪ್ರಾಣಾಯಾಮ, ಸೂರ್ಯನಮಸ್ಕಾರ ಮಾಡಬೇಕು. ಭೌತಿಕಸಂಪತ್ತಾದ ಶರೀರವನ್ನು ಉತ್ತಮ ಸಾಧನೆಗೆ ಬಳಸಬೇಕು ಎಂದು ತಿಳಿಸಿದರು.
ಇಂದಿನ ವಾತಾವರಣದಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯಲ್ಲಿನ ವಿಕೃತಿಯನ್ನು ಅನುಸರಣೆ ಮಾಡುವ ಮೂಲಕ ದಾರಿ ತಪ್ಪುತ್ತಿದ್ದಾರೆ. ಗುರು ಹಿರೊಯರು ಅವರ ಮಾನಸಿಕ ದೌರ್ಬಲ್ಯವನ್ನ ತಿಳಿ ಹೇಳಿ, ಸರಿದಾರಿಗೆ ತರುವಂಥಾಗಬೇಕು ಎಂದು ತಿಳಿಸಿದರು. ಮೇಯರ್ ರೇಖಾ ನಾಗರಾಜ್, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಬಿ.ಸಿ. ಉಮಾಪತಿ, ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ರಮಾನಂದ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಮಂಜುನಾಥ್ ಇತರರು ಇದ್ದರು.