Advertisement
ಹಳದಿರೋಗ, ಬೇರು ಹುಳ ರೋಗ, ಆನೆಕಾಟ ಇತ್ಯಾದಿಗಳಿಂದ ತತ್ತರಿಸಿರುವ ತಾಲೂಕಿನ ಅಡಿಕೆ ಬೆಳೆಗಾರರಿಗೆ ಸುಡು ಬಿಸಿಲು ಮತ್ತಷ್ಟು ಆತಂಕ ಸೃಷ್ಟಿಸಿದೆ. ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೇ ಅತಂತ್ರ ಸ್ಥಿತಿಯಲ್ಲಿರುವ ಕೃಷಿಕರಿಗೆ ಈಗ ನೀರೂ ಕಡಿಮೆಯಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ರಬ್ಬರ್ ಧಾರಣೆ ಪಾತಾಳಕ್ಕೆ ಇಳಿದ ಪರಿಣಾಮ, ಅಡಿಕೆಯನ್ನೇ ಜನ ನಂಬಿಕೊಂಡಿದ್ದಾರೆ. ಬೇಸಗೆಯಲ್ಲಿ ಅಡಿಕೆಗೆ ನೀರು ಅತ್ಯಗತ್ಯ. ಬೇರಿಂದ ಕೊಂಬೆ ತನಕವು ಹಸುರಾಗಿದ್ದರೆ ಮಾತ್ರ ಅದರಿಂದ ಫಸಲು ನಿರೀಕ್ಷಿಸಬಹುದು. ಫಸಲು ನೀಡುವ ಅಡಿಕೆ ಮರಕ್ಕೆ ದಿನಕ್ಕೆ 18ರಿಂದ 20 ಲೀ. ನೀರು ಬೇಕು. ಅವೆಲ್ಲವೂ ಕೆರೆ, ಬಾವಿ, ಹೊಳೆ ಅಥವಾ ಕೊಳವೆಬಾವಿ ಮೂಲಕ ಭರಿಸಬೇಕು. ಆ ನೀರಿನ ಮೂಲಗಳೇ ಬತ್ತುತ್ತಿರುವುದರಿಂದ ಮಾರ್ಚ್ ಬಳಿಕ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಈ ಬಾರಿ ಉಷ್ಣಾಂಶ ಅಧಿಕವಾಗಿದೆ. ಮಧ್ಯಾಹ್ನ 12ರಿಂದ 4 ಗಂಟೆಯ ತನಕ ಸುಡು ಬಿಸಿಲು ಇದೆ. ಫೆಬ್ರವರಿಯಲ್ಲಿ 30 ಡಿ.ಸೆ. ನಿಂದ 33 ಡಿ. ಸೆ. ಒಳಗೆ ಇರುತ್ತಿದ್ದ ಉಷ್ಣಾಂಶ ಈ ವರ್ಷ 37 ಡಿ. ಸೆ. ಗಡಿ ದಾಟಿದೆ. ಹವಾಮಾನ ಇಲಾಖೆ ಪ್ರಕಾರ ಶಿವರಾತ್ರಿ ಬಳಿಕ ಬಿಸಿಲು ಹೆಚ್ಚಿದೆ.
Related Articles
ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯವಾಗಿದೆ. ಮಧ್ಯರಾತ್ರಿ ತ್ರಿಫೇಸ್ ವಿದ್ಯುತ್ ನೀಡುವ ಕಾರಣ, ಕೆರೆ, ಹೊಳೆಗಳಿಂದ ನೀರು ಬಳಸುವ ಕೃಷಿಕರಿಗೆ ಈ ಹೊತ್ತಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಮಧ್ಯರಾತ್ರಿ ಬದಲು ಬೆಳಗ್ಗಿನ ಹೊತ್ತಲ್ಲಿ ತ್ರಿಫೇಸ್ ವಿದ್ಯುತ್ ನೀಡಬೇಕು ಎಂಬ ಕೃಷಿಕರ ಬೇಡಿಕೆ ಈಡೇರಿಲ್ಲ.
Advertisement
ಫಸಲು ನಷ್ಟ ಭೀತಿತಾಲೂಕಿನ ಒಟ್ಟು ಅಡಿಕೆ ಬೆಳೆಯುವ ಪ್ರದೇಶ 28,096 ಎಕ್ರೆ. ತೋಟಗಾರಿಕಾ ಇಲಾಖೆಯ ಪ್ರಕಾರ ಹೆಕ್ಟೇರಿಗೆ 20 ಕಿಂಟ್ವಾಲ್ ಅಡಿಕೆ ಸಿಕ್ಕಿದರೆ, ಒಟ್ಟು ಹೆಕ್ಟೇರಿಗೆ 5,61,920 ಕಿಂಟ್ವಾಲ್ ದೊರೆಯುತ್ತದೆ. ಕೆಲ ವರ್ಷಗಳಿಂದ ನೀರಿನ ಕೊರತೆಯಿಂದ ಅಡಿಕೆ ಇಳುವರಿ ಕುಸಿತವಾಗುತ್ತಿದೆ. ಬಿಸಿಲಿನ ತೀವ್ರತೆ ಇದೇ ರೀತಿ ಮುಂದುವರಿದರೆ, ಹೊಸ ಹಿಂಗಾರ ಕರಟಿ ಫಸಲು ನಷ್ಟವಾಗುವುದು ನಿಶ್ಚಿತ ಅನ್ನುತ್ತಾರೆ ಬೆಳೆಗಾರರು. ಒಂದು ತಿಂಗಳು ಸಮಸ್ಯೆಯಿಲ್ಲ
ಸದ್ಯಕ್ಕೆ ಇನ್ನು ಒಂದು ತಿಂಗಳು ಸಮಸ್ಯೆ ಕಾಡದು. ಆದರೆ ಅನಂತರ ಬಿಸಿಲಿನ ಪ್ರಖರತೆ ತೀವ್ರವಾದಷ್ಟು ನೀರಿನ ಕೊರತೆ ಹೆಚ್ಚಬಹುದು. ಈ ಬಗ್ಗೆ ಯೋಚಿಸಬೇಕಿದೆ.
– ಎಂ.ಡಿ. ವಿಜಯ ಕುಮಾರ್
ಸಂಚಾಲಕರು, ಅಖಿಲ ಭಾರತ ಅಡಿಕೆ
ಬೆಳೆಗಾರರ ಸಂಘ, ಸುಳ್ಯ ಘಟಕ ಕಿರಣ್ ಪ್ರಸಾದ್ ಕುಂಡಡ್ಕ