ಅಳೆಯುತ್ತಿದ್ದರು. ಹಿಂಗಾರ ಬಿಟ್ಟ ತೆಂಗು ಕಂಗುಗಳ ಎತ್ತರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಕೆರೆ ತೋಡುಗಳ ಮೀನುಗಳಿಂದ ಪಾಠ ಕಲಿಯುತ್ತಿದ್ದರು.
Advertisement
ಪೇರಳೆ, ಮಾವು, ಹಲಸಿನ ಹಣ್ಣುಗಳನ್ನು ಸವಿದು ಮುದಗೊಳ್ಳುತ್ತಿದ್ದರು. ಗುಡ್ಡ ಬೆಟ್ಟ ಸುತ್ತಾಡಿ ಹುರುಪುಗೊಳ್ಳುತ್ತಿದ್ದರು. ಅಜ್ಜಿಯ ಕಥೆ, ಅಜ್ಜನ ಯೌವನದ ಸಾಹಸ ಗಾಥೆಗಳು ಆ ಕಾಲದ ಯಾವ ಕಾರ್ಟೂನ್ ಕಥೆಗೂ ಕಮ್ಮಿಯಿಲ್ಲದಂತೆ ಮಕ್ಕಳನ್ನು ಕಲ್ಪನಾಲೋಕಕ್ಕೆ ಕೊಂಡೊಯ್ಯುತ್ತಿದ್ದವು. ಸಂಜೆಯಾಗುತ್ತಲೇ ಆಟಕ್ಕಾಗಿ ಬಯಲಲ್ಲಿ ಮಕ್ಕಳ ಜಾತ್ರೆಯೋಪಾದಿಯಲ್ಲಿ ನೆರೆಯುತ್ತಿದ್ದರು. ಬಯಲು ಅಂದ್ರೆ ಈಗಿನಂತೆ ಕಂಪೌಂಡಿನೊಳಗಿನ ಯಾರದ್ದೋ ಐದು ಸೆಂಟ್ಸ್ ಖಾಲಿ ಜಾಗವಲ್ಲ. ದೊಡ್ಡ ವಿಮಾನವೇ ಬಂದಿಳಿಯಬಹುದಾದಂತಹಮೈದಾನ ಅಥವಾ ಒಂದೆರಡು ಮುಡಿ ಭತ್ತ ಬಿತ್ತುವ ಗದ್ದೆ ! ಅಲ್ಲಿ ವಿವಿಧ ವಯೋಮಾನದ ಮಕ್ಕಳ ಹತ್ತಾರು ಗುಂಪುಗಳು; ಗೋಲಿ, ಲಗೋರಿ, ಮುಟ್ಟಾಟ, ಕುಂಟಾಟ ಎಂದು ನೂರಾರು ಆಟಗಳು. ಇದನ್ನು ನೋಡಲು ಹಿರಿಯರ ಕಣ್ಣಿಗೂ ಹಬ್ಬವೇ ಆಗಿತ್ತು.
ಕಾಲ ಕಳೆಯುವುದರಲ್ಲೂ ಮಜವಿತ್ತು. ಮದುವೆ , ಸೀಮಂತ , ಕೋಲ , ಜಾತ್ರೆಯಾದಿಗಳು ಈ ರಜೆಯಲ್ಲಿ ಬಂದರೆ ಮಕ್ಕಳ ಸಡಗರ ಇಮ್ಮಡಿಗೊಳ್ಳುತ್ತದೆ. ಹೊಟ್ಟೆ ಭರ್ತಿ ತಿಂದು ತೇಗಲು ಓರಗೆಯವರೊಂದಿಗೆ ಮನಸಾರೆ ಬೆರೆತು ಬೀಗಲು ಮಕ್ಕಳಿಗೆ ಇದೊಂದು ಅವಕಾಶ. ಹಿಂದೆ ಓದುವ ಹವ್ಯಾಸವಿರುವ ಮಕ್ಕಳು ಬಹಳ ಮಂದಿಯಿದ್ದರು. ಈ ಮಕ್ಕಳು ಓದುವ ಹಂಬಲ ಈಡೇರಿಸಿಕೊಳ್ಳಲೆಂದೇ ರಜೆಯನ್ನು ಕಾಯುತ್ತಿದ್ದರು. ರಜೆ ಸಿಕ್ಕಿದ ಕೂಡಲೇ ಕಥೆ ಪುಸ್ತಕಗಳನ್ನು ರಾಶಿ ಹಾಕಿಕೊಂಡು ಓದುತ್ತಿದ್ದರು. ಗೇರು ಬೀಜ ಸಂಗ್ರಹಿಸಿ ಅದನ್ನು ಮಾರಿ ಬಂದ ಹಣದಿಂದ ಹಳೆಯ ಪುಸ್ತಕಗಳನ್ನು ಅರ್ಧ ಬೆಲೆಗೆ ಕೊಂಡು ಓದುವ ಮಕ್ಕಳೂ ಇದ್ದರು.
Related Articles
ರಜೆಯನ್ನವರು ಮನಸಾರೆ ಅನುಭವಿಸುತ್ತಿದ್ದರು. ಆದರೆ ಇಂದು ಕಾಲ ಸಂಪೂರ್ಣ ಬದಲಾಗಿದೆ. ಮೊಬೈಲ್ ಇಂಟರ್ನೆಟ್‌ನ ಮಾಯಾಜಾಲ ಮಕ್ಕಳ ಮನಸ್ಸಿಗೆ ನಿಧಾನ ವಿಷದ ಹಾಗೆ ಅಂಟಿಕೊಂಡಿದೆ. ಹಿಂದೆ ಮನೆ ತುಂಬ ಮಕ್ಕಳಿದ್ದರೆ ಈಗ ಒಂದು ಅಥವಾ ಎರಡು ಎಂಬ ಪರಿಸ್ಥಿತಿ ಇರುವುದರಿಂದ ಮಕ್ಕಳ ಮೇಲೆ ಹೆತ್ತವರ ಅತಿ ಮುದ್ದು, ಅತಿ ನಿರೀಕ್ಷೆ ಸಾಮಾನ್ಯವಾಗಿದೆ. ಕೇಳಿದ್ದು ಕ್ಷಣಾರ್ಧದಲ್ಲಿ ತಂದು ಕೊಡುವ ಇವರ ಮಮಕಾರದಿಂದ ಮಕ್ಕಳು ಬದುಕಿನ ಸ್ವಯಂ ಕಲಿಕೆ ಮತ್ತು ಸತ್ಪಥದ ಆಯ್ಕೆಯಲ್ಲಿ ವಿಫಲರಾಗುತ್ತಿದ್ದಾರೆ. ಇದರ ಪರಿಣಾಮ ಈಗಿನ ಬೇಸಗೆ ರಜೆಯಲ್ಲಿ ಮಕ್ಕಳು ಗಳಿಸುವ ಸಂತಸದಾಯಕ ಅನುಭವ ಹಿಂದಿನಂತಿಲ್ಲ. ಈಗ ಮಕ್ಕಳಿಗೆ ಬಾಲ್ಯದ ರಸಾನುಭೂತಿಯನ್ನು ಸರಿಯಾಗಿ ಅನುಭವಿಸಲು ಹೆತ್ತವರು ಅವಕಾಶ ನೀಡುತ್ತಿಲ್ಲ. ಒಟ್ಟಿನಲ್ಲಿ ತಮ್ಮ ಮಗು ಕಲಿಯಬೇಕು. ನಾಳೆ ಮೂಟೆಗಟ್ಟಲೆ ಹಣ ಗಳಿಸುವಂತಾಗಬೇಕು. ಅದಕ್ಕಾಗಿ ತರಬೇತಿಯನ್ನು ಮಗು ತನ್ನ ಮೂರು ವರ್ಷ ಹತ್ತು ತಿಂಗಳ ವಯಸ್ಸಿನಲ್ಲೇ ಆರಂಭಿಸುತ್ತದೆ.
Advertisement
ಶೈಕ್ಷಣಿಕ ದಿನಗಳಲ್ಲಿ ಓದು ಬರಹ, ಗೃಹಪಾಠ ಇದ್ದೇ ಇರುತ್ತದೆ. ಬೇಸಿಗೆ ರಜೆಯಲ್ಲಿಯೂ ಮುಂಬರುವ ಶಿಕ್ಷಣದ ಪೂರ್ವ ತಯಾರಿಗೆ ತರಬೇತಿ , ಸಂಗೀತ ಕಲಿಕೆ, ನೃತ್ಯ, ಚಿತ್ರ, ಕ್ರೀಡಾ ತರಬೇತಿ ಎಂದು ಮಕ್ಕಳು ಬಿಡುವಿಲ್ಲದ ಯಂತ್ರಗಳಾಗಿರುತ್ತಾರೆ. ಅವರ ಬಾಲ್ಯ ಹೆತ್ತವರಕೈವಶದಲ್ಲಿರುತ್ತದೆ. ಮಕ್ಕಳೂ ಅಷ್ಟೆ; ಸಾಧುತ್ವ, ಮುಗ್ಧತೆ, ತಾಳ್ಮೆ ಮುಂತಾದ ವಯೋಸಹಜ ಮಾನಸಿಕ ಪರಿವ್ಯಾಪ್ತಿಯನ್ನು ಮೀರಿ ಬೆಳೆದಿರುತ್ತಾರೆ. ಇವರ ಈ ಬೆಳವಣಿಗೆಗೆ ಪರಿಸರವೂ ತನ್ನದೇ ಆದ ಕೊಡುಗೆ ಸಲ್ಲಿಸುತ್ತದೆ. ದಿನದ 24 ಗಂಟೆ ಮೊಬೈಲ್ ಉಪಯೋಗಿಸುವ, ಮನರಂಜನೆಗಾಗಿ ಟಿವಿ ಸೀರಿಯಲ್‌ಗಳನ್ನು ಅವಲಂಬಿಸಿದ ಹೆತ್ತವರೊಂದಿಗೆ ಈ ಮಕ್ಕಳು ಬೆಳೆಯುತ್ತಿರುತ್ತಾರೆ. ಹೊರಗಿನ ಪರಿಸರವೂ ಹಿಂದಿನಂತೆ ನಿಷ್ಕಲ್ಮಶವಾಗಿಲ್ಲ. ಸೈಬರ್ ಕೇಂದ್ರಗಳು, ಭಯಾನಕ ಕ್ರೀಡಾ ಮನರಂಜನೆ ನೀಡುವ ಅಂತರ್ಜಾಲ ತಾಣಗಳು ಮಕ್ಕಳಿಗೆ ಬಲೆ ಬೀಸಿ ಕಾಯುತ್ತಿರುತ್ತವೆ. ಆಡಿಕೊಳ್ಳಲು ಬಯಲುಗಳೇ ನಾಪತ್ತೆಯಾಗಿವೆ. ಹೊರಗೆ ಬಯಲಲ್ಲಿ ಆಡುವುದಕ್ಕಿಂತ ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯಲ್ಲಿ ಆಡುವುದರಲ್ಲೇ ಹೆಚ್ಚು ಸಂತೋಷ ಕಾಣುವ ಈಗಿನ ಮಕ್ಕಳಿಗೆ ಬಯಲಿನ ಆಟದಲ್ಲಿ ಆಸಕ್ತಿಯೂ ಕಡಿಮೆ. ಹಳ್ಳಿಗೆ ಹೋಗಿ ಕಾಲ ಕಳೆಯುವ ಅವಕಾಶವಿದ್ದರೂ ಅವರಿಗದು ತುಂಬಾ ಬೋರು. ಈ ಪರಿಸ್ಥಿತಿಯಲ್ಲಿ ಈಗಿನ ಮಕ್ಕಳಿಗೆ ಬೇಸಿಗೆ ರಜೆ ಅನುಭವಿಸಲು ಅವಕಾಶ ಮಾಡಿಕೊಡುವುದು ಹೆತ್ತವರಿಗೊಂದು ಸವಾಲೇ ಆಗಿದೆ. ಮೊದಲನೆಯದಾಗಿ ಬೇಸಿಗೆ ರಜೆ ಮಕ್ಕಳ ಪಾಲಿಗೆ ಅಂತರ್ ಜಾಲ ಮುಕ್ತವಾಗುವಂತೆ, ಓದುವ ಬರೆ ಯುವ ಒತ್ತಡವೂ ಬೀಳದಂತೆ ನೋಡಿಕೊಳ್ಳಬೇಕು. ಶಾಲೆಗಳಲ್ಲಿ ಈ ರಜೆಗಳಲ್ಲಿ ಮನೋಲ್ಲಾಸ ಪಡೆಯುವುದು ಹೇಗೆಂಬ ಮಾಹಿತಿ ಒದಗಿಸಿದರೆ ಉತ್ತಮ. ಆಟ ಮತ್ತು ಸುತ್ತಾಟಕ್ಕೆ ಅನಗತ್ಯ ನಿಬಂಧನೆ ಹೇರಬಾರದು. ಮಕ್ಕಳ ಸೃಜನಶೀಲತೆಯನ್ನು ವೃದ್ಧಿಸುವ ಬಗ್ಗೆ ಅವರ ಅಪೇಕ್ಷೆಯ ಮೇರೆಗೆ ಸೂಕ್ತ ವೇದಿಕೆ ಒದಗಿಸಬೇಕು. ಒಟ್ಟಿನಲ್ಲಿ ಬೇಸಗೆ ರಜೆಯಲ್ಲಾದರೂ ಮಕ್ಕಳು ತಮ್ಮ ಸಹಜ ಬಾಲ್ಯವನ್ನು ಅನುಭವಿಸುವಂತಾಗಬೇಕು. ಜವಾಬ್ದಾರಿಯುತ ಹೆತ್ತವರು ಇದಕ್ಕೆ ಅವಕಾಶ ಒದಗಿಸಬೇಕು. ಭಾಸ್ಕರ ಕೆ. ಕುಂಟಪದವು