Advertisement

ಬೇಸಿಗೆ ಬೆಳೆಗೆ ನೀರು ಬೇಕೇ ಬೇಕು

03:11 PM Nov 10, 2018 | Team Udayavani |

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಉಪ ಕಾಲುವೆಗಳಿಗೆ ಅಸಮರ್ಪಕ ನೀರು ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ 10 ಲಕ್ಷಕ್ಕೂ ಹೆಚ್ಚು ರೈತರು ವ್ಯವಸಾಯದಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಂಕಿ ಅಂಶಗಳೇ ಸಾಕ್ಷಿ
ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್‌ ಆರೋಪಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಬಾರಿ ಬೆಲೆಯ ರಸಗೊಬ್ಬರ, ಕಳಪೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ತುಂಗಭದ್ರಾ ಜಲಾಶಯದಿಂದ ಉಪ ಕಾಲುವೆಗಳಿಗೆ ಅಸಮರ್ಪಕ ನೀರು ಪೂರೈಕೆ ಸೇರಿದಂತೆ ಇತರೆ ಸಮಸ್ಯೆಗಳಿಂದಾಗಿ ರೈತಾಪಿ ಜನರಿಗೆ ಬೇಸಾಯವೆಂದರೆ ವಾಕರಿಕೆ ಬಂದಂತಾಗಿದೆ. ಇದರಿಂದ ಬೇಸತ್ತು ರಾಜ್ಯದ ವಿವಿಧ ಗ್ರಾಮಗಳಲ್ಲಿನ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ರೈತರು ಬೇಸಾಯ ಪದ್ಧತಿಯನ್ನು ಕೈ ಬಿಟ್ಟು, ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ತುಂಗಭದ್ರಾ ಜಲಾಶಯದ ಎಲ್‌ಎಲ್‌ಸಿ ಉಪ ಕಾಲುವೆಗೆ ಮಾರ್ಚ್‌ 30ರ ವರೆಗೆ ಬೇಸಿಗೆ ಬೆಳೆಗೆ ನೀರನ್ನು ಹರಿಸಬೇಕು. ಎಚ್‌ಎಲ್‌ಸಿ ಉಪಕಾಲುವೆಗೆ ಜನವರಿ 15ರ ವರೆಗೆ ನೀರನ್ನು ಹರಿಸಬೇಕು. ಭತ್ತಕ್ಕೆ ಈಗಾಗಲೇ ಕೇಂದ್ರ ಸರ್ಕಾರವು ಕ್ವಿಂಟಲ್‌ಗೆ 1750 ರೂ. ಬೆಲೆ ನಿಗದಿ ಮಾಡಿ ಘೋಷಣೆ ಮಾಡಿದೆ. 

ಅದರೊಂದಿಗೆ ರಾಜ್ಯ ಸರ್ಕಾರವು 250 ರೂ. ಸೇರಿಸಿ ಒಟ್ಟು ಮೊತ್ತ ಕ್ವಿಂಟಲ್‌ಗೆ 2000 ರೂ. ಬೆಂಬಲ ಬೆಲೆ ನೀಡಿ, ಖರೀದಿ ಕೇಂದ್ರ ತೆರೆಯುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಬೇಸಿಗೆ ಬೆಳೆಗೆ ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರನ್ನು ಒದಗಿಸುವಂತೆ ಆಗ್ರಹಿಸಿ ನ.13ರಂದು ಹೊಸಪೇಟೆಯ ಟಿಬಿ ಬೋರ್ಡ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ ಜೆ.ಕಾರ್ತೀಕ್‌, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ರೈತರಿಗೆ ಎರಡನೇ ಬೆಳೆಗೆ ನೀರು ಕೊಡಬೇಕು. ಭತ್ತ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಮುಂದಾಗುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕಣ್ಣು ಒರೆಸುವ ತಂತ್ರಗಾರಿಕೆಯನ್ನು ನಡೆಯುತ್ತಿವೆ. ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈವರೆಗೂ ರಾಜ್ಯದ ರೈತರ ಸಾಲಮನ್ನಾ ಮಾಡಿಲ್ಲ. ಕೇಂದ್ರ ಸರ್ಕಾರ ಸ್ವಾಮಿನಾಥನ್‌ ವರದಿ ಜಾರಿ ಮಾಡಲು ಹಿಂದೇಟು ಹಾಕುತ್ತಿದೆ. ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಎಲ್ಲ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ
ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
 
ಈ ಸಂದರ್ಭದಲ್ಲಿ ಮುಖಂಡರಾದ ದೇವರೆಡ್ಡಿ, ವೀರಾ ರೆಡ್ಡಿ, ಖಾಸಿಂ ಸಾಬ್‌, ಸುದರ್ಶನ, ಎಲ್‌.ಎಸ್‌.ರುದ್ರಪ್ಪ, ಕೆ.ಸುರೇಶ್‌, ಎಂ.ರಾಮಚಂದ್ರಪ್ಪ, ಶ್ರೀನಿವಾಸ್‌, ಕೆ.ರಮೇಶ, ಕಾಗೆ ಈರಣ್ಣ ಇನ್ನಿತರರಿದ್ದರು. 

ಜಿಲ್ಲಾಧಿಕಾರಿಗೆ ಮನವಿ ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರಗುಪ್ಪ, ಬಳ್ಳಾರಿ ತಾಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಈಗಾಗಲೇ ಭತ್ತ ಕಟಾವು ಹಂತಕ್ಕೆ ಬಂದಿದ್ದು, ದಲ್ಲಾಳಿಗಳ ಹಾವಳಿಯಿಂದ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದೆ ನಷ್ಟ ಅನುಭವಿಸುವಂತಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next