ಹೊಸದಿಲ್ಲಿ: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ ಯಾದರೂ, ಕೇರಳ, ಪಶ್ಚಿಮ ಬಂಗಾಲದಂಥ ರಾಜ್ಯಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಬಿಜೆಪಿಯ ಯಶಸ್ಸು ನಿಜವಾಗಿಯೂ ಉಚ್ಛಾ†ಯ ಮಟ್ಟಕ್ಕೆ ಏರುತ್ತದೆ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುರುವಾರ, ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಕೇಂದ್ರ ಕಚೇರಿಯ ಪದಾಧಿಕಾರಿಗಳು ಹಾಗೂ ರಾಜ್ಯಮಟ್ಟದ ಬಿಜೆಪಿ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಪ್ರಾಬಲ್ಯ ಇಲ್ಲದಿರುವ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸಲು ಎಲ್ಲ ಪದಾಧಿಕಾರಿಗಳು ಶ್ರಮಿಸಬೇಕು. ಇದಕ್ಕೆ ಪೂರಕವಾಗಿ, ಅರ್ಹ ವ್ಯಕ್ತಿಗಳನ್ನು ಪಕ್ಷಕ್ಕೆ ಕರೆ ತರುವ ಮೂಲಕ ಪಕ್ಷವನ್ನು ಆ ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿ ಸಂಘಟಿಸಬೇಕೆಂದು ತಾಕೀತು ಮಾಡಿದ್ದಾರೆ.
ಈವರೆಗೆ ಬಿಜೆಪಿ ಕೆಲವೇ ಕೆಲವು ಸ್ಥಾನಗಳನ್ನು ಪಡೆಯುತ್ತಿದ್ದ ರಾಜ್ಯಗಳಾದ ಒಡಿಶಾ ಹಾಗೂ ಪಶ್ಚಿಮ ಬಂಗಾಲದಲ್ಲಿ ಈ ಬಾರಿ ಗಣನೀಯ ಸಾಧನೆಯಾಗಿದೆ ಎಂದ ಶಾ, ತಮಿಳುನಾಡು, ಕೇರಳ ಹಾಗೂ ಆಂಧ್ರದಲ್ಲಿ ಒಂದೂ ಸ್ಥಾನ ಗೆಲ್ಲದ್ದನ್ನು ಒತ್ತಿ ಹೇಳಿ, ಆ ರಾಜ್ಯಗಳಲ್ಲಿ ಬಿಜೆಪಿ ಪರ ಹೆಚ್ಚು ಕೆಲಸಗಳಾಗಬೇಕಿದೆ ಎಂದಿದ್ದಾರೆ.
ಸಭೆಯ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್, “”ಸದ್ಯದಲ್ಲೇ ರಾಷ್ಟ್ರಮಟ್ಟದಲ್ಲಿ ಆರಂಭಗೊಳ್ಳಲಿರುವ ಸದಸ್ಯತ್ವ ಅಭಿಯಾನಕ್ಕೆ ಶಾ ಅವರು ಸಭೆಯಲ್ಲಿ ಅಂತಿಮ ಸ್ಪರ್ಶ ನೀಡಿದರು. ಈ ಬಾರಿಯ ಅಭಿಯಾನದಲ್ಲಿ ನಿಗದಿತ ಗುರಿಗಿಂತ ಶೇ. 20ರಷ್ಟು ಹೆಚ್ಚು ಸದಸ್ಯರನ್ನು ಪಕ್ಷಕ್ಕೆ ನೇಮಿಸಿಕೊಳ್ಳುವ ಗುರಿ ಹೊಂದಲಾಗಿದೆ” ಎಂದರು.
ಶಾ ನೇತೃತ್ವದಲ್ಲೇ ಚುನಾವಣೆ: ಪ್ರಸಕ್ತ ವರ್ಷ ನಡೆ ಯಲಿರುವ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ವಿಧಾನಸಭೆ ಚುನಾವಣೆಗಳನ್ನೂ ಶಾ ನೇತೃತ್ವದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಬಿಜೆಪಿ ಅಧ್ಯಕ್ಷರಾಗಿ ಶಾ ಮುಂದು ವರಿಯಲಿದ್ದು, 2020ರ ಜನವರಿಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿದೆ.
ಆಪ್ತ ಕಾರ್ಯದರ್ಶಿಗಳ ನೇಮಕ
ಐಎಎಸ್ ಅಧಿಕಾರಿ ಕುಂದನ್ ಕುಮಾರ್ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರ ಆಪ್ತ ಕಾರ್ಯ ದರ್ಶಿಯನ್ನಾಗಿ ನೇಮಿಸಲಾಗಿದೆ. ಇತರ ಐಎಸ್‌ಎಸ್ ಅಧಿಕಾರಿಗಳಾದ ನವನೀತ್ ಮೋಹನ್ ಕೊಠಾರಿ, ಸಚಿನ್ ಶಿಂಧೆ, ಮನೋಜ್ ಕುಮಾರ್ ಸಿಂಗ್ ಹಾಗೂ ಐಆರ್‌ಎಸ್ ಅಧಿಕಾರಿ ರಾಜ್‌ಕುಮಾರ್ ದಿಗ್ವಿಜಯ್ ಅವರನ್ನು ಕ್ರಮವಾಗಿ ಕೃಷಿ ಮತ್ತು ರೈತರ ಅಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್, ಕ್ರೀಡಾ ಸಚಿವ ಕಿರಣ್ ರಿಜಿಜು, ಇಂಧನ ಸಚಿವ ರಾಜ್ ಕುಮಾರ್ ಸಿಂಗ್, ಪಶುಸಂಗೋಪನೆ ಸಚಿವ ಗಿರಿರಾಜ್ ಸಿಂಗ್ ಅವರ ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.