ಕುಂಬಳೆ: ಬ್ರಹ್ಮರಥವನ್ನು ಒಬ್ಬನಿಂದ ಎಳೆಯಲು ಅಸಾಧ್ಯ. ಆದರೆ ಎಲ್ಲರೂ ಬಲ ಕೊಟ್ಟರೆ ಅದು ಸುಲಭ ಸಾಧ್ಯ. ಚಾತುರ್ಮಾಸ್ಯದ ಯಶಸ್ಸು ಎನ್ನುವುದು ಸಮಾಜದ ಏಕತೆಯ ಸಂಕೇತವಾಗಬೇಕೆಂದು ಕಟಪಾಡಿಯ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಚಾತುರ್ಮಾಸ್ಯದ ಪೂರ್ವಭಾವಿ ಯಾಗಿ ಕ್ಷೇತ್ರ ಸಂದರ್ಶನವನ್ನು ಗೋಕರ್ಣ ಶ್ರೀ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನದಲ್ಲಿ ಆರಂಭಿಸಿ ಶಿಷ್ಯವೃಂದಕ್ಕೆ ಆಶೀರ್ವಚನ ನೀಡಿದರು.
ಚಾತುರ್ಮಾಸ್ಯದ ಕುರಿತು ಮಾತನಾಡಿ ಎಲ್ಲ ವ್ರತಾಚರಣೆಗೂ ಮಹತ್ವವಿದೆ, ನಮ್ಮ ನಿತ್ಯ ನೈಮಿತ್ತಿಕ ವೈದಿಕ ಆಚರಣೆಯಲ್ಲೂ ಕೂಡಾ ಯೋಗಾಸನ, ಮುದ್ರೆಗಳು ಅಡಗಿಕೊಂಡಿವೆ ಎಂದು ವಿವರಿಸಿ ದರು. ಗೋಕರ್ಣ ಕ್ಷೇತ್ರದ ಅಭಿವೃದ್ಧಿಯ ಜತೆಗೆ ಮಹಾಸಂಸ್ಥಾನದ ಎಲ್ಲ ಯೋಜನೆ ಗಳಲ್ಲಿಯೂ ಗೋಕರ್ಣ ವ್ಯಾಪ್ತಿಯ ಸಮಾಜ ಬಾಂಧವರು ತೊಡಗಿಸಿಕ್ಕೊಳ್ಳುವಂತೆ ಪೂಜ್ಯರು ಕರೆನೀಡಿದರು.
ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ ವಹಿಸಿದ್ದರು. ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಉಪಾಧ್ಯಕ್ಷ ಕೆ.ಹರೀಶ್ ಆಚಾರ್ಯ ಕಾರ್ಕಳ, ಕೋಶಾಧಿಕಾರಿ ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು, ಆನೆಗುಂದಿ ಸರಸ್ವತೀ ಎಜುಕೇಶನಲ್ ಟ್ರಸ್ಟ್ ನಿಯುಕ್ತ ಅಧ್ಯಕ್ಷ ಟಿ. ಸುಧಾಕರ ಆಚಾರ್ಯ ತ್ರಾಸಿ, ಸಂಸ್ಥಾನದ ಆಪ್ತ ಸಹಾಯಕ ಐ. ಲೋಲಾಕ್ಷ ಆಚಾರ್ಯ ಕಟಪಾಡಿ ಮಾತನಾಡಿದರು. ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಲೋಕೇಶ್ ಎಂ.ಬಿ ಆಚಾರ್ ಕಂಬಾರು ನಿರೂಪಿಸಿದರು.
ಪೂಜ್ಯರು ಶ್ರೀಕ್ಷೇತ್ರ ಗೋಕರ್ಣ ಆತ್ಮಲಿಂಗಕ್ಕೆ ಮಹಾರುದ್ರಾಭಿಷೇಕ ಮತ್ತು ಮಹಾಗಣಪತಿ ಸನ್ನಿಧಾನದಲ್ಲಿ ಅಭಿಷೇಕಾದಿಗಳನ್ನೂ ನೆರವೇರಿಸಿದರು. ವಿಶ್ವಬ್ರಾಹ್ಮಣ ಕುಲಗುರುಗಳಿಗೆ ಶ್ರೀಕ್ಷೇತ್ರದ ವತಿಯಿಂದ ಗೌರವ ಸಮರ್ಪಣೆ ನಡೆಸಲಾಯಿತು.