ಕುಂದಾಪುರ: ಕಲಾವಿದರು ಸಾಧನೆಯ ಹಿಂದೆ ಹೋಗಬೇಕು. ಬದಲಾಗಿ ಪ್ರಶಂಸೆಯ ಹಿಂದೆ ಅಲ್ಲ. ಪುರಸ್ಕಾರಗಳು ಪ್ರತಿಭೆಗಳನ್ನು ಅರಸಿಕೊಂಡು ಬರುವಂತಾಗಬೇಕು ಎಂದು ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದರು.
ರವಿವಾರ ಸಂಜೆ ಇಲ್ಲಿನ ಪಾರಿಜಾತ ಹೋಟೆಲ್ ಸಭಾಂಗಣದಲ್ಲಿ ಸಂಗೀತ ಭಾರತಿ ಟ್ರಸ್ಟ್‌ನ ರಜತ ಮಹೋತ್ಸವ ಅಂಗವಾಗಿ ಯುವ ಸಂಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಯುವ ಸಾಧಕ ಸಂಗೀತಗಾರರನ್ನು ಗೌರವಿಸಿ ಮಾತನಾಡಿದರು.
ಸಾಹಿತ್ಯ, ಸಂಗೀತ, ಕಲೆ ಮನುಷ್ಯನ ಜೀವನದ ಅವಿಭಾಜ್ಯ ಅಂಗಗಳು. ಅವುಗಳ ರಸಾಸ್ವಾದನೆ ಅರಿಯದಾತ ಬಾಲ, ಕೋಡುಗಳಿಲ್ಲದ ಪ್ರಾಣಿಯಂತೆ ಎಂಬ ಸುಭಾಷಿತವಿದೆ. ಪ್ರತಿಭೆಗೆ ಆರಂಭದ ಹಂತದಲ್ಲೇ ತರಬೇತಿ, ಪ್ರೋತ್ಸಾಹದ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಸಂಗೀತ ಭಾರತಿ ಟ್ರಸ್ಟ್ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಕರ್ಣಾಟಕ ಬ್ಯಾಂಕಿನ ಮಾಜಿ ನಿರ್ದೇಶಕ, ವೈದ್ಯ ಡಾ| ಎಚ್. ರಾಮ್‌ಮೋಹನ್, ಹಿಂದಿನ ಕಾಲದಲ್ಲಿ ಕಲೆಗೆ ರಾಜಾಶ್ರಯ ಇತ್ತು. ನಂತರದ ದಿನಗಳಲ್ಲಿ ಸರಕಾರದ ಕಲಾಪೋಷಣೆ ಕಡಿಮೆಯಾಗುತ್ತಾ ಬಂದಿದೆ ಎಂದರು.
ಕರ್ಣಾಟಕ ಬ್ಯಾಂಕಿನ ಉಡುಪಿ ವಲಯ ಎಜಿಎಂ ಗೋಪಾಲಕೃಷ್ಣ ಸಾಮಗ, ಸಂಗೀತ ಭಾರತಿ ಟ್ರಸ್ಟ್ ಅಧ್ಯಕ್ಷ ವೈಕುಂಠ ಹೆಬ್ಟಾರ್, ಟ್ರಸ್ಟಿಗಳಾದ ಸೀತಾರಾಮ ನಕ್ಕತ್ತಾಯ, ಬಿ. ವಾದಿರಾಜ ಬಿಳಿಯ, ಕೆ. ನಾರಾಯಣ ಉಪಸ್ಥಿತರಿದ್ದರು.
ಯುವ ಸಂಗೀತೋತ್ಸವದಲ್ಲಿ ಭಾಗವಹಿಸಿದ ಕೀರ್ತನ್ ಹೊಳ್ಳ ಮಂಗಳೂರು, ಕೇದಾರ್ ಮರವಂತೆ, ಕಾರ್ತಿಕ್ ಭಟ್ ಮಂಗಳೂರು, ಹೇಮಂತ್ ಭಾಗವತ್ ಮಂಗಳೂರು, ಸುಮಂತ್ ಭಟ್ ಉಡುಪಿ, ಸುಮನ್ ದೇವಾಡಿಗ ಪುತ್ತೂರು, ಶ್ರೀವತ್ಸ ಶರ್ಮ ಪಡುಬಿದ್ರೆ, ಶ್ರೀದತ್ತ ಪ್ರಭು ಮಂಗಳೂರು, ಅನುಷಾ ಭಟ್ , ಚೈತನ್ಯ ಜಿ. ಭಟ್ ಮಣಿಪಾಲ, ಸುಮುಖ ಆರ್. ಆಚಾರ್ಯ, ಧುಳು ಟಿ. ಅಡೋಲ್ಕರ್ ಅವರನ್ನು ಗೌರವಿಸಲಾಯಿತು.ಟ್ರಸ್ಟಿ , ಪತ್ರಕರ್ತ ಯು.ಎಸ್. ಶೆಣೈ ನಿರ್ವಹಿಸಿ, ಜಯವಂತ ಪೈ ವಂದಿಸಿದರು.