Advertisement

ಸುರಂಗ ತಂದಿಟ್ಟ ಸಂಚಾರ ಸಂಕಟ

05:34 AM Jul 13, 2019 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಸುರಂಗ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಮೂರೂವರೆ ವರ್ಷಗಳ ಕಾಲ ಕಾಮರಾಜ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಆದರೆ, ಮೆಟ್ರೋ ಸುರಂಗ ಮಾರ್ಗದುದ್ದಕ್ಕೂ ಬರುವ ನಿಲ್ದಾಣಗಳಲ್ಲೆಲ್ಲಾ ಈ “ನಿರ್ಬಂಧ’ ಎದುರಾಗಲಿದೆಯೇ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

Advertisement

ಡೈರಿ ವೃತ್ತದಿಂದ ಶುರುವಾಗುವ ಮೆಟ್ರೋ ಕಾಮಗಾರಿ, ನಾಗವಾರದವರೆಗೆ ಸಾಗಲಿದೆ. ಎಂ.ಜಿ. ರಸ್ತೆ ನಂತರದಲ್ಲಿ ಇನ್ನೂ ಏಳು ನಿಲ್ದಾಣಗಳು ಬರಲಿವೆ. ಅಲ್ಲಿಯೂ ಇದೇ ರೀತಿ ವರ್ಷಗಟ್ಟಲೆ ವಾಹನಗಳ ಸಂಚಾರ ನಿರ್ಬಂಧ ಆಗಲಿದೆಯೇ ಎಂಬ ಆತಂಕ ಮನೆ ಮಾಡಿದೆ. ಹಾಗೊಂದು ವೇಳೆ ಈ ಆತಂಕ ನಿಜವಾದಲ್ಲಿ ಆಯಾ ಭಾಗದಲ್ಲಿ ಸಂಚಾರ ನರಕಯಾತನೆ ಆಗಲಿದೆ.

ಆದರೆ, ಬಿಎಂಆರ್‌ಸಿಎಲ್‌ ಅಧಿಕಾರಿಗಳ ಪ್ರಕಾರ “ಈ ಸಮಸ್ಯೆ ಬೇರೆಲ್ಲೂ ಉಂಟಾಗುವುದಿಲ್ಲ. ಮೆಜೆಸ್ಟಿಕ್‌ ಮಾದರಿಯಲ್ಲಿ ಎಂ.ಜಿ. ರಸ್ತೆಯಲ್ಲಿ ಇಂಟರ್‌ಚೆಂಜ್‌ (ಎರಡು ಮಾರ್ಗಗಳು ಕೂಡುವ ಸ್ಥಳ) ನಿಲ್ದಾಣ ಬರಲಿದೆ. ಹಾಗಾಗಿ, ರಸ್ತೆ ಮೇಲೆ ಕೆಲಸ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಸ್ತೆ ಬಂದ್‌ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಮುಂದಿನ ಯಾವುದೇ ನಿಲ್ದಾಣ ನಿರ್ಮಾಣ ಕಾಮಗಾರಿಯಲ್ಲಿ ಈ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮನಸ್ಸು ಮಾಡಿದ್ದರೆ, ಮುಂದಿನ ಮೂರೂವರೆ ವರ್ಷಗಳ ಕಾಲ ಸ್ಥಗಿತಗೊಂಡ ಕಾಮರಾಜ ರಸ್ತೆಯನ್ನೂ ಸಂಚಾರಕ್ಕೆ ಮುಕ್ತಗೊಳಿಸಬಹುದಿತ್ತು. ರಸ್ತೆ ಪಕ್ಕದಲ್ಲೇ ಮಾಣಿಕ್‌ ಷಾ ಪರೇಡ್‌ ಮೈದಾನ ಇದೆ. ಬಿಎಂಆರ್‌ಸಿಲ್‌ ರಕ್ಷಣಾ ಇಲಾಖೆ ಮನವೊಲಿಸಿ, ಉದ್ದೇಶಿತ ಮೈದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬಹುದಿತ್ತು. ಆದರೆ, ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿಲ್ಲ ಎನ್ನಲಾಗಿದೆ. ಇದರ ಪರಿಣಾಮ ಈಗ ರಸ್ತೆಯಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಪರ್ಯಾಯ ವ್ಯವಸ್ಥೆ ಇಲ್ಲ: ಕಾಮಗಾರಿ ಬಗ್ಗೆ ಪ್ರಸ್ತಾವನೆ ಬಂದ ಕೂಡಲೇ ಪರ್ಯಾಯ ರಸ್ತೆಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಯಿತು. ತಾಂತ್ರಿಕ ವಿಭಾಗ ಹಾಗೂ ತಜ್ಞರ ಜತೆಯೂ ಚರ್ಚಿಸಲಾಯಿತು. ಆದರೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಕಬ್ಬನ್‌ ರಸ್ತೆಯಿಂದ ಬರುವ ವಾಹನಗಳನ್ನು (ಲಘುವಾಹನಗಳು) ಕಾಮರಾಜ ರಸ್ತೆ ಹಾಗೂ ಕಮರ್ಷಿಯಲ್‌ ಸ್ಟ್ರೀಟ್‌ ರಸ್ತೆ ಕಡೆಗೆ ಬಲತಿರುವು ಪಡೆದು ಕಮರ್ಷಿಯಲ್‌ ಸ್ಟ್ರೀಟ್‌-ಹಲಸೂರು ಮಾರ್ಗವಾಗಿ ಹೋಗುವಂತೆ ಸೂಚಿಸುವ ಬಗ್ಗೆಯೂ ಚಿಂತಿಸಲಾಯಿತು.

Advertisement

ಆದರೆ, ಈ ಪ್ರದೇಶಗಳು ಸೂಕ್ಷ್ಮ ಪ್ರದೇಶಗಳು ಹಾಗೂ ರಸ್ತೆಗಳು ಕಿರಿದಾಗಿರುವ ಕಾರಣ, ಹೆಚ್ಚು ವಾಹನ ಸಂಚಾರ ಸಾಧ್ಯವಿಲ್ಲ. ಜತೆಗೆ ಪಾದಾಚಾರಿ ಮಾರ್ಗ ಸಹ ಇಲ್ಲದ್ದರಿಂದ ರಸ್ತೆ ಬದಿಯಲ್ಲೇ ಸಾರ್ವಜನಿಕರು ಓಡಾಡುತ್ತಾರೆ. ಒಂದು ವೇಳೆ ಈ ಮಾರ್ಗಗಳಲ್ಲಿ ಹೆಚ್ಚು ವಾಹನಗಳು ಸಂಚರಿಸಿದರೆ, ಅಪಘಾತ ಹಾಗೂ ಇತರೆ ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ.

ಮತ್ತೂಂದೆಡೆ ಕಬ್ಬನ್‌ ರಸ್ತೆಯಿಂದ ಮಣಿಪಾಲ್‌ ಸೆಂಟರ್‌ವರೆಗೆ ಇರುವ ಸಿಗ್ನಲ್‌ಗ‌ಳಲ್ಲಿ ಅಳವಡಿಸಿರುವ ಟೈಮರ್‌ (ಸಿಗ್ನಲ್‌ಗ‌ಳ ಅವಧಿ)ಗಳ ಸಮಯ ಹೆಚ್ಚಿಸಿ, ವಾಹನಗಳು ಬೇಗ ಹೋಗುವಂತೆ ಮಾಡುವ ಬಗ್ಗೆಯೂ ಚಿಂತಿಸಲಾಯಿತು. ಆದರೆ, ಈ ರೀತಿಯ ತೀರ್ಮಾನದಿಂದ ಸುಮಾರು 8-10 ಕಿ.ಮೀಟರ್‌ ವ್ಯಾಪ್ತಿಯ ಸಿಗ್ನಲ್‌ಗ‌ಳ “ಲೆಕ್ಕಾಚರ ಪರಿಣಾಮ’ (ಕ್ಯಾಲ್ಯುಕ್ಯೂಲೆಟಿಂಗ್‌ ಎಫೆಕ್ಟ್) ಎದುರಾಗುತ್ತದೆ. ಹೀಗಾಗಿ ಈಗಾಗಲೇ ಸೂಚಿಸಿರುವ ಬದಲಿ ಮಾರ್ಗದಲ್ಲೇ ಮೂರುವರೆ ವರ್ಷಗಳ ಕಾಲ ವಾಹನಗಳು ಸಂಚರಿಸಬೇಕು ಎನ್ನುತ್ತಾರೆ ಸಂಚಾರ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿಗಳು.

ಸಂಚಾರ ದಟ್ಟಣೆ ಅಧಿಕ: ಕಾಮಗಾರಿ ಹಿನ್ನೆಲೆಯಲ್ಲಿ ಈಗಾಗಲೇ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ. ಆದರೆ ಆ ಮಾರ್ಗಗಳಲ್ಲೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದು ಸಂಚಾರ ಪೊಲೀಸರಿಗೆ ಇನ್ನಷ್ಟು ತಲೆನೋವಾಗಿದೆ. ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣ ಹಾಗೂ ಕ್ವೀನ್ಸ್‌ ರಸ್ತೆ ಕಡೆಯಿಂದ ಮಣಿಪಾಲ್‌ ಸೆಂಟರ್‌ ಕಡೆಗೆ ಸಾಗುವ ವಾಹನಗಳು, ಕಬ್ಬನ್‌ ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲುತ್ತಿವೆ. ಮತ್ತೂಂದೆಡೆ ಬಳ್ಳಾರಿ ರಸ್ತೆ, ಶಿವಾಜಿನಗರ ಹಾಗೂ ಸುತ್ತಮುತ್ತಲ ಜನ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಕಾಮರಾಜ ರಸ್ತೆ ಹಾಗೂ ಬ್ರಿಗೇಡ್‌ ರಸ್ತೆ ಮಾರ್ಗವಾಗಿಯೇ ಹೊಸೂರು ಹಾಗೂ ಕೋರಮಂಗಲ ಕಡೆ ಹೋಗುತ್ತಿದ್ದರು.

ಆದರೆ, ಈಗ ಮಣಿಪಾಲ್‌ ಸೆಂಟರ್‌ ಮುಂಭಾಗದ ಸಿಗ್ನಲ್‌ ಬಳಿ ಬಲ ತಿರುವು ಪಡೆದು ಹೋಗಬೇಕಿದೆ. ಪರಿಣಾಮ ಹಳೇ ವಿಮಾನ ನಿಲ್ದಣದಿಂದ ಎಂ.ಜಿ. ರಸ್ತೆಗೆ ಬರುವ ವಾಹನಗಳ ಸಂಚಾರಕ್ಕೂ ಇದರಿಂದ ಅಡ್ಡಿ ಉಂಟಾಗುತ್ತಿದೆ. ಅಲ್ಲದೆ, ಹಳೇ ಮದ್ರಾಸ್‌ ಕಡೆಯಿಂದ ಬರುವ ರಾಜ್ಯ ಸಾರಿಗೆ, ಬಿಎಂಟಿಸಿ, ನೆರೆ ರಾಜ್ಯಗಳ ಬಸ್‌ಗಳು ಸ್ವಾಮಿ ವಿವೇಕಾನಂದ ರಸ್ತೆ, ಹಲಸೂರು ಪೊಲೀಸ್‌ ಠಾಣೆ, ಟ್ರಿನಿಟಿ ವೃತ್ತ-ರಿಚ್‌ಮಂಡ್‌ ರಸ್ತೆ ಮೂಲಕ ಸಾಗುವಂತೆ ಸೂಚಿಸಲಾಗಿದೆ. ಆದರೂ, ಪ್ರಯಾಣಿಕರ ಹಿತದೃಷ್ಟಿಯಿಂದ ಬಿಎಂಟಿಸಿ ಬಸ್‌ಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿವೆ ಎಂದು ಸಂಚಾರ ಪೊಲೀಸರು ತಿಳಿಸಿದರು.

ವಾಣಿಜ್ಯೋದ್ಯಮಕ್ಕೆ ಪೆಟ್ಟು: ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧ ಮಾಡಿರುವುದರಿಂದ ಅನಿವಾರ್ಯವಾಗಿ ಎಂ.ಜಿ. ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ ಎಂ.ಜಿ. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಅದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಪೆಟ್ಟು ಬೀಳುತ್ತಿದೆ. ಅಲ್ಲದೆ, ಕೇಂದ್ರ ವಾಣಿಜ್ಯ ಪ್ರದೇಶದಲ್ಲಿಯ (ಸಿಬಿಡಿ) ವಹಿವಾಟಿಗೂ ಧಕ್ಕೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಾಮರಾಜ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿರುವ ಕಾರಣ ಕಬ್ಬನ್‌ ರಸ್ತೆಯಿಂದ ಮಣಿಪಾಲ್‌ ಸೆಂಟರ್‌ವರೆಗೆ ಸಂಚಾರ ದಟ್ಟಣೆ ಹೆಚ್ಚಾಗಿದೆ. ಪರ್ಯಾಯ ಮಾರ್ಗ ಇಲ್ಲದ್ದರಿಂದ ಅನಿವಾರ್ಯವಾಗಿ ಸಂಚಾರ ದಟ್ಟಣೆ ಎದುರಿಸುವಂತಾಗಿದೆ. ಸಾರ್ವಜನಿಕರು ಸಹಕರಿಸಬೇಕು.
-ಪಿ.ಹರಿಶೇಖರನ್‌, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ

ಒಪ್ಪಂದದ ಮೇರೆಗೆ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲೇ ರಕ್ಷಣಾ ಇಲಾಖೆಯಿಂದ ಜಾಗ ಪಡೆದು ಕಾಮಗಾರಿ ನಡೆಸಬಹುದಿತ್ತು. ಆದರೆ, ದು ಸಾಧ್ಯವಾಗಿಲ್ಲ. ಪರ್ಯಾಯ ಮಾರ್ಗದ ಸಮಸ್ಯೆ ಇರುವುದರಿಂದ ಅನಿವಾರ್ಯವಾಗಿ ಕಾಮರಾಜ ರಸ್ತೆ ಬಂದ್‌ ಮಾಡಲಾಗಿದೆ.
-ಎಂ.ಎನ್‌.ಶ್ರೀಹರಿ, ನಗರ ಸಂಚಾರ ತಜ್ಞ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next