Advertisement

ಸೆಪ್ಟೆಂಬರ್‌ ಒಳಗೆ ಸರ್ಕಾರಕ್ಕೆ ಹಣಕಾಸು ಆಯೋಗದ ವರದಿ ಸಲ್ಲಿಕೆ

12:17 PM Jan 07, 2017 | Team Udayavani |

ಕಲಬುರಗಿ: ನಾಲ್ಕನೇ ರಾಜ್ಯ ಹಣಕಾಸು ಆಯೋಗ ಈವರೆಗೆ ರಾಜ್ಯದ 27 ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಇನ್ನೂ ಮೂರು ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ ಬಳಿಕ ಸೆಪ್ಟೆಂಬರ್‌ ಅಂತ್ಯದೊಳಗೆ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ ಎಂದು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ಹೇಳಿದರು. 

Advertisement

ತಾಲೂಕಿನ ನಂದೂರ(ಕೆ) ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಸಮಾಲೋಚನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಣಕಾಸು ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತರಾಜ್‌ ಸಂಸ್ಥೆಗಳಿಂದ ಸ್ವೀಕರಿಸಿದ ಅಹವಾಲು ಮತ್ತು ಪ್ರಶ್ನೆಗಳಿಗೆ ಉತ್ತರ ಕ್ರೋಢೀಕರಿಸಿ  ವರದಿ ಸಲ್ಲಿಸಲಿದೆ ಎಂದು ಹೇಳಿದರು. 

ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದೆ. ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕೈಗೊಳ್ಳಲು ಅನುವಾಗುವಂತೆ ಅಂತರ್ಜಲ ಮಟ್ಟ ಹೆಚ್ಚಳಕ್ಕಾಗಿ ಹೆಚ್ಚಿನ ಹಣಕಾಸು ಸೌಲಭ್ಯ ಒದಗಿಸುವ ಬಗ್ಗೆ ಆಯೋಗ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ ರಾಜ್‌ ಸಂಸ್ಥೆಗಳಿಗೆ ಆಯೋಗದಿಂದ ಕಳುಹಿಸಲಾದ ಪ್ರಶ್ನಾವಳಿಗಳಿಗೆ ವಿಳಂಬ ಮಾಡದೇ ಆನ್‌ ಲೈನ್‌ ಮೂಲಕ ಉತ್ತರ ಸಲ್ಲಿಸಬೇಕು ಎಂದು ಹೇಳಿದರು. 

ಕೇಂದ್ರದ 14ನೇ ಹಣಕಾಸು ಆಯೋಗ ನಿಧಿಯಡಿ ಪ್ರತಿ ಗ್ರಾಪಂಗೆ 26 ಲಕ್ಷ ರೂ. ಬಿಡುಗಡೆಯಾಗುತ್ತಿದ್ದು, ಗ್ರಾಪಂನಿಂದ ಕೈಗೊಳ್ಳಲಾಗುವ ಅಭಿವೃದ್ಧಿ ಯೋಜನೆಗಳ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಹೆಚ್ಚಿನ ಅನುದಾನಕ್ಕಾಗಿ ಜಿಪಂ ಮತ್ತು ತಾಪಂಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು. 

ಆಯೋಗದ ಸದಸ್ಯ ಎಚ್‌.ಡಿ. ಅಮರನಾಥ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿವಿಧ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಆಗುವ ವಿಳಂಬ ತಪ್ಪಿಸಲು ಕಾನೂನಾತ್ಮಕ ದಾಖಲೆಗಳಿರುವುದನ್ನು ಮೊದಲು ಪರಿಶೀಲಿಸಬೇಕು. ನಗರ ಪ್ರದೇಶಗಳಂತೆ ಹಳ್ಳಿಗಳು ಬೆಳೆಯುವಂತಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶ್ರಮಿಸಬೇಕು ಎಂದು ಹೇಳಿದರು. 

Advertisement

ಆಯೋಗದ ಇನ್ನೋರ್ವ ಸದಸ್ಯ ಶಶಿಧರ, ಆಪ್ತ ಕಾರ್ಯದರ್ಶಿ ಜಾಫರ್‌ ಷರೀಫ್‌, ನಂದೂರ(ಕೆ) ಗ್ರಾಪಂ ಅಧ್ಯಕ್ಷೆ ಲಿಂಗಮ್ಮ ಚಂದಪ್ಪ ಕಟ್ಟಿಮನಿ, ಉಪಾಧ್ಯಕ್ಷ ಕಲ್ಲಪ್ಪ ಹಣಮಂತರಾಯ ಅಪಚಂದ, ಜಿಪಂ ಜಿಲ್ಲಾ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಎಂ.ಜಿ. ನರೇಗಾ ಸಹಾಯಕ ನಿರ್ದೇಶಕ ಕಟ್ಟಿಮನಿ, ಗ್ರಾಪಂ ಸದಸ್ಯರು ಭಾಗವಹಿಸಿದ್ದರು. 

ಸರ್ಕಾರದ ವಿವಿಧ ಯೋಜನೆಗಳ ಅಡಿ ಫಲಾನುಭವಿಗಳ ಆಯ್ಕೆ ಕಡ್ಡಾಯವಾಗಿ ಗ್ರಾಪಂ ಮಟ್ಟದಲ್ಲಿ ನಡೆಯುವ, ನಂದೂರ(ಕೆ) ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕಾಗಿಣಾ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಗೂ ಜಲ ಸಂರಕ್ಷಣಾ ಕಾಮಗಾರಿಗೆ ಹಣಕಾಸು, ಪಂಪ್‌ ಆಪರೇಟರುಗಳಿಗೆ ಸೂಕ್ತ ತರಬೇತಿ ಮತ್ತು ವೇತನ ಹೆಚ್ಚಳ, ಅಭಿವೃದ್ಧಿ ಯೋಜನೆಗಳಲ್ಲಿ ಶೇ. 3ರಷ್ಟು ಅನುದಾನ ಅಂಗವಿಕಲರಿಗೆ ಮೀಸಲಿಸುವ ಬಗ್ಗೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಆಯೋಗದ ಗಮನಕ್ಕೆ ತಂದರು. 

Advertisement

Udayavani is now on Telegram. Click here to join our channel and stay updated with the latest news.

Next