Advertisement

ಉಪಸಮರ ಫ‌ಲಿತಾಂಶ ರಾಜ್ಯರಾಜಕೀಯ ದಿಕ್ಸೂಚಿ: ಶೆಟ್ಟರ್‌

11:33 AM Apr 30, 2019 | Team Udayavani |

ಹುಬ್ಬಳ್ಳಿ: ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆ ಮುಂದಿನ ರಾಜ್ಯ ರಾಜಕೀಯದ ದಿಕ್ಸೂಚಿಯಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.

Advertisement

ಸೋಮವಾರ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬೂತ್‌ ಮಟ್ಟದವರೆಗೆ ಬೆಳೆದಿರುವ ಕೇಡರ್‌ ಬೇಸ್ಡ್ ಪಕ್ಷ. ಈ ಹಂತದವರಿಗೆ ತಲುಪಲು ಯಾವ ಪಕ್ಷದಿಂದಲೂ ಸಾಧ್ಯವಿಲ್ಲ. ಹಣ ಹಾಗೂ ಅಧಿಕಾರ ಬಲ ನಡೆಯುವುದಿಲ್ಲ. ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷದ ಸಂಘಟನೆ ಪ್ರಬಲವಾಗಿದ್ದು, ಎರಡು ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಲೋಕಸಭೆ ಫ‌ಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಹಾಸನ, ಮಂಡ್ಯ ಹಾಗೂ ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್‌ ಸೋಲನುಭವಿಸಲಿದ್ದು, ಇದರಿಂದ ಮೈತ್ರಿ ಸರ್ಕಾರ ಬೀಳಲಿದೆ. ಕುಂದಗೋಳ ಉಪಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಆರ್‌.ಪಾಟೀಲ ಈ ಚುನಾವಣೆ ಪ್ರಾಮಾಣಿಕತೆಯಿಂದ ಮಾಡಲಿದ್ದಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಂ.ಆರ್‌. ಪಾಟೀಲ ಒಂದಿಷ್ಟು ಬೇಸರಗೊಂಡಿದ್ದರು. ಇದೀಗ ಅದೆಲ್ಲವು ಮುಗಿದ ಅಧ್ಯಾಯ. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದರು.

ಅಸಮಾಧಾನ ಸಹಜ: ಎಂ.ಆರ್‌. ಪಾಟೀಲ
ಚುನಾವಣಾ ರಾಜಕೀಯದಲ್ಲಿ ಟಿಕೆಟ್ ಕೈ ತಪ್ಪಿದಾಗ ಅಸಮಧಾನ ಸಹಜ. ಹಾಗಂತ ಪಕ್ಷಕ್ಕಿಂತ ನಾನು ದೊಡ್ಡವನಲ್ಲ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಹೆಗಲು ಕೊಟ್ಟು ದುಡಿಯುದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಆರ್‌.ಪಾಟೀಲ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರಾಮಾಣಿಕವಾಗಿ ಚುನಾವಣೆ ಮಾಡುವುದಾಗಿ ಮುಖಂಡರಿಗೆ ಹಾಗೂ ಕ್ಷೇತ್ರದ ಮತದಾರರಿಗೆ ಭರವಸೆ ನೀಡಿದ್ದೇನೆ. ನನ್ನ ಬೆಂಬಲಿಗರಲ್ಲೂ ಕೂಡ ಯಾವುದೇ ಅಸಮಾಧಾನವಿಲ್ಲ. ಬೇಸರಗೊಂಡಿರುವ ಬೆಂಬಲಿಗರನ್ನು ಒಗ್ಗೂಡಿಸಿ ಬಿಜೆಪಿ ಗೆಲವುಗೆ ಶ್ರಮಿಸುವಂತೆ ಮನವೊಲಿಸುತ್ತೇನೆ ಎಂದರು.
ಇನ್ನೇನಿದ್ದರೂ ಆಪರೇಷನ್‌ ಸಿದ್ದರಾಮಯ್ಯ

ಇನ್ನ ಮುಂದೆ ಆಪರೇಶನ್‌ ಕಮಲ ನಡೆಯೋದಿಲ್ಲ, ಇನ್ನೇನಿದ್ದರೂ ಆಪರೇಶನ್‌ ಸಿದ್ದರಾಮಯ್ಯ ಮಾತ್ರ. ಮೈತ್ರಿ ಸರ್ಕಾರ ಬೀಳಲಿಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಆಗಲಿದ್ದಾರೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈಸೂರು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಸಿದ್ದರಾಮಯ್ಯ ಅವರು ಬಹಿರಂಗವಾಗಿ ಹೇಳಿದ್ದಾರೆ. ಮೈಸೂರು ಸೇರಿದಂತೆ ಹಾಸನ, ಮಂಡ್ಯ ಹಾಗೂ ತುಮಕೂರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸೋಲುವುದು ನಿಶ್ಚಿತ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next