Advertisement

ಕಲ್ಲಡ್ಕದಲ್ಲಿ ಸಿದ್ಧಗೊಳ್ಳುತ್ತಿದೆ 10 ಸಾವಿರ ಗೋಮಯ ಹಣತೆ

10:01 PM Nov 08, 2020 | mahesh |

ಬಂಟ್ವಾಳ: ಪ್ರಧಾನಿಯವರ ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನೇ ತರಬೇತುಗೊಳಿಸಿ ಗೋಮಯ ಹಣತೆಗಳನ್ನು ಸಿದ್ಧಗೊಳಿಸಲಾಗುತ್ತಿದ್ದು, ಈ ಬಾರಿಯ ದೀಪಾವಳಿಗೆ ಸುಮಾರು 10 ಸಾವಿರ ಹಣತೆಗಳನ್ನು ಸಿದ್ಧಗೊಳಿಸುವ ಗುರಿಯೊಂದಿಗೆ ಈಗಾಗಲೇ ಎರಡೂವರೆ ಸಾವಿರಕ್ಕೂ ಅಧಿಕ ಹಣತೆಗಳು ಸಿದ್ಧಗೊಂಡಿದೆ.

Advertisement

ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿಗಳಾಗುವ ಜತೆಗೆ ವಿದೇಶಿ ವಸ್ತುಗಳಿಂದ ದೂರ ವಿರಬೇಕು ಎಂದು ಈ ಕಾರ್ಯವನ್ನು ಮಾಡುತ್ತಿದ್ದು, ವಿದ್ಯಾಸಂಸ್ಥೆಯ ವಸುಧಾರಾ ಗೋಶಾಲೆಯಲ್ಲಿರುವ ದೇಶೀಯ ಗೋವುಗಳ ಸೆಗಣಿ ಹಾಗೂ ಗೋಮಯವನ್ನು ಬಳಸಿಕೊಂಡು ಈ ಹಣತೆಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ವಿದ್ಯಾರ್ಥಿಗಳೆ ಸೇರಿಕೊಂಡು ಹಣತೆ ಸಿದ್ಧ ಮಾಡುತ್ತಿದ್ದು, ಸೆಗಣಿಯನ್ನು ಬೇಕಾದಷ್ಟು ಪಾಕ ಭರಿಸಿ, ಅಚ್ಚಿನಲ್ಲಿ ಒತ್ತಿ ಬಳಿಕ ಬಿಸಿಲಿನಲ್ಲಿ ಇಡಲಾಗುತ್ತದೆ. ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್‌ ಕಾಯರ್‌ಕಟ್ಟೆ ಅವರು ಈ ಕಾರ್ಯದ ಸಂಚಾಲ ಕರಾಗಿದ್ದು, ಜತೆಗೆ ಸಂಸ್ಥೆಯ ಶಿಕ್ಷಕರು, ಸಿಬಂದಿ ಸಾಥ್‌ ನೀಡುತ್ತಿದ್ದಾರೆ.

ಸುಮಾರು 50ರಷ್ಟು ವಿದ್ಯಾರ್ಥಿಗಳು
ಒಟ್ಟು 10 ಸಾವಿರ ಹಣತೆಗಳ ಗುರಿಯೊಂದಿಗೆ ಸಂಸ್ಥೆಯ ವಿದ್ಯಾರ್ಥಿ ಗಳನ್ನು ತೊಡಗಿಸಿಕೊಳ್ಳುವ ಗುರಿಯೊಂದಿಗೆ ಈ ಕಾರ್ಯ ನಡೆಯುತ್ತಿದೆ. ಪ್ರತಿ ದಿನ 50ರಷ್ಟು ವಿದ್ಯಾರ್ಥಿಗಳು, 10 ಮಂದಿ ಆಸಕ್ತ ಪೋಷಕರು, 8 ಮಂದಿ ಸಿಬಂದಿ ಈ ಕಾರ್ಯದಲ್ಲಿ ತೊಡಗುತ್ತಿದ್ದು, ಇವರನ್ನು ಎರಡು ಬ್ಯಾಚ್‌ಗಳನ್ನಾಗಿ ಮಾಡಿ ಪ್ರಾರಂಭದಲ್ಲಿ ತರಬೇತಿ ನೀಡಿ ಬಳಿಕ ಹಣತೆ ತಯಾರಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.

ಒಂದು ಹಣತೆಗೆ 5 ರೂ.
ಹಣತೆಯ ತಯಾರಿಗೆ ವ್ಯಯಿಸಲಾದ ಖರ್ಚನ್ನು ಸರಿದೂಗಿಸುವ ನಿಟ್ಟಿನಲ್ಲಿ ಒಂದು ಹಣತೆಯನ್ನು 5 ರೂ.ಗಳಂತೆ ಮಾರಾಟಕ್ಕೂ ಯೋಜನೆ ಹಾಕಿಕೊಳ್ಳಲಾಗಿದ್ದು, ಅದಕ್ಕಾಗಿ ಕಾಮರ್ಸ್‌ನ ವಿದ್ಯಾರ್ಥಿಗಳ ಮೂಲಕ ಇ-ಮಾರ್ಕೆಟಿಂಗ್‌ ಮೂಲಕ ಗೂಗಲ್‌ನಲ್ಲಿ ಮುಂಗಡ ಬುಕ್ಕಿಂಗ್‌ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

Advertisement

ಹಣತೆ ಉರಿದರೂ ಉತ್ತಮ
ವಿದ್ಯಾಸಂಸ್ಥೆಯ ಗೋಶಾಲೆಯ ಗೋವುಗಳ ಸೆಗಣಿಯಿಂದ ಹಣತೆ ತಯಾರಿ ನಡೆಯುತ್ತಿದ್ದು, ಇದರ ಜತೆಗೆ 500ರಷ್ಟು ಮಣ್ಣಿನ ಹಣತೆಗಳನ್ನೂ ತಯಾರಿಸಲಾಗಿದೆ. ಗೋಮಯ ಹಣತೆಗೆ ಎಣ್ಣೆ, ತುಪ್ಪ ಹಾಕಿ ಉರಿಸಬೇಕಿದೆ. ಒಟ್ಟು ಹಣತೆಯೇ ಉರಿದರೂ ಯಾವುದೇ ತೊಂದರೆ ಇರುವುದಿಲ್ಲ ಎಂದು ಸಂಘಟಕರು ಹೇಳುತ್ತಾರೆ.

ದೀಪಾವಳಿವರೆಗೆ ತಯಾರಿಯ ಯೋಚನೆ
ಪ್ರಧಾನಿಯವರ ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ವಿದ್ಯಾರ್ಥಿಗಳ ಮೂಲಕ ಗೋಮಯ ಹಣತೆ ಗಳನ್ನು ತಯಾರು ಮಾಡಲಾಗುತ್ತಿದ್ದು, ದೇಸೀಯ ಹಸುಗಳ ಸೆಗಣಿಯನ್ನೇ ಬಳಸಿ ಹಣತೆ ತಯಾರಿಸಲಾಗುತ್ತದೆ. ನ. 4ಕ್ಕೆ ಈ ಕಾರ್ಯ ಆರಂಭಿಸಲಾಗಿದ್ದು, ದೀಪಾವಳಿ ಪ್ರಾರಂಭದವರೆಗೂ ಮುಂದುವರಿಸುವ ಯೋಚನೆ ಇದೆ. ಒಟ್ಟು 10 ಸಾವಿರ ಹಣತೆಗಳನ್ನು ತಯಾರಿಸುವ ಗುರಿ ಹೊಂದಲಾಗಿದ್ದು, ದಿನಕ್ಕೆ 2 ಬ್ಯಾಚ್‌ಗಳ ಮೂಲಕ ತಯಾರಿ ಕಾರ್ಯ ನಡೆಯುತ್ತಿದೆ.
-ಕೃಷ್ಣಪ್ರಸಾದ್‌ ಕಾಯರ್‌ಕಟ್ಟೆ, ಪ್ರಾಂಶುಪಾಲರು, ಶ್ರೀರಾಮ ಪದವಿ ಕಾಲೇಜು, ಕಲ್ಲಡ್ಕ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next