Advertisement

ಕನ್ನಡತನ ಉಳಿಸಲು ಹೋರಾಟ ಅನಿವಾರ್ಯ : ಕರ್ಕಿಕೋಡಿ

07:20 AM Jul 31, 2017 | Team Udayavani |

ಕಾಸರಗೋಡು: ಕನ್ನಡತನವನ್ನು ಉಳಿಸಿಕೊಂಡು ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಬೇಕು. ಅದಕ್ಕಾಗಿ ಹೋರಾಟ ಅನಿವಾರ್ಯ. ಕಾಸರಗೋಡು ಪ್ರದೇಶದ ಜನರಲ್ಲಿರುವ ಕನ್ನಡದ ಪ್ರೇಮ ಕರ್ನಾಟಕಕ್ಕೆ ಮಾದರಿಯಾಗಿದೆ. ಇಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ನಡೆಸುತ್ತಿರುವ ಹೋರಾಟ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದು ಉ.ಕ.ಜಿ.ಕ.ಸಾಹಿತ್ಯ ಪರಿಷತ್‌ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಹೇಳಿದರು.

Advertisement

ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಕರಂದಕ್ಕಾಡ್‌ನ‌ಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ “ಸಂಸ್ಕೃತಿ ಕುಶಲೋಪರಿ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡವನ್ನು ಕಾಪಿಡುವ ಕೆಲಸ ಮುಖ್ಯವಾಗಿ ನಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ಕಾಸರಗೋಡಿನ ಕನ್ನಡಿಗರ ಪ್ರಯತ್ನ ಶ್ಲಾಘನೀಯ ಎಂದ ಅವರು ಕಾಸರಗೋಡು ಕನ್ನಡದ ಧ್ವನಿಯಾಗಿ ರಾರಾಜಿಸುತ್ತಿದೆ. ಜೊತೆಯಲ್ಲಿ ವಿವಿಧ ಭಾಷಿಗರೂ ಕನ್ನಡಕ್ಕೆ ಮಿಡಿಯುತ್ತಿದ್ದಾರೆ. “ಸಂಸ್ಕೃತಿ ಕುಶಲೋಪರಿ’ ಅಂತಹ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಸ್ಪರ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಇಲ್ಲಿ ಮತ್ತು ನಮ್ಮಲ್ಲಿ ನಡೆಯುತ್ತಿರುವ ಕನ್ನಡದ ಕೆಲಸ ಪರಸ್ಪರ ಅರಿಯಲು ನೆರವಾಗುತ್ತದೆ.

ಭಾಷಾ ದ್ವೇಷ ಬೇಡ. ಕನ್ನಡಿಗರನ್ನು ಇಲ್ಲಿ ಉಳಿಸಿಕೊಳ್ಳುವ ಮೂಲಕ ಮಾತ್ರವೇ ಕನ್ನಡ ಶಾಶ್ವತವಾಗಿ ರಾರಾಜಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಹೊಸ ತಲೆಮಾರಿಗೆ ಕನ್ನಡವನ್ನು ಹಸ್ತಾಂತರಿಸುವ ಕೆಲಸವಾಗಬೇಕು ಎಂದರು.

ಕನ್ನಡದ ಕಳಕಳಿಯನ್ನು ದಾಟಿಸಬೇಕು. ಯುವ ತಲೆಮಾರಿಗೆ ಸಾಹಿತ್ಯ, ಕಲೆ, ಭಾಷೆ, ಸಂಸ್ಕೃತಿಯ ವಿಶಿಷ್ಟತೆಯನ್ನು ಹೇಳಿಕೊಡುವ ಮೂಲಕ ಭಾಷೆಯನ್ನು ಉಳಿಸಲು ಸಾಧ್ಯ. ಕಾಸರಗೋಡಿನ ಜನರೊಂದಿಗೆ ನಾವೂ ಇದ್ದೇವೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

Advertisement

ಖ್ಯಾತ ರಂಗಕರ್ಮಿ, ಸಾಹಿತಿ ಡಾ|ನಾ.ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ವಿ.ಭಟ್‌, ಖ್ಯಾತ ಚಿತ್ರ ಕಲಾವಿದ ಪಿ.ಎಸ್‌.ಪುಣಿಂಚಿತ್ತಾಯ ಗೌರವ ಉಪಸ್ಥಿತರಿದ್ದರು.ಉತ್ತರ ಕನ್ನಡ ಸಾಹಿತ್ಯ ಸಂಸ್ಕೃತಿ ಕುರಿತು ನಾಗರಾಜ ಹರಪನಹಳ್ಳಿ, ಕಾಸರಗೋಡು ಸಾಹಿತ್ಯ ಸಂಸ್ಕೃತಿ ಕುರಿತು ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಮಾತನಾಡಿದರು.
ಖ್ಯಾತ ಸುಗುಮ ಸಂಗೀತ ಗಾಯಕ, ಸಂತ ಶಿಶುನಾಳ ಸಾಹೇಬ ಪ್ರಶಸ್ತಿ ವಿಜೇತ ವೈ.ಕೆ.ಮುದ್ದುಕೃಷ್ಣ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ತುಳು ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾದ ಖ್ಯಾತ ಚಿತ್ರ ಕಲಾವಿದ ಪಿ.ಎಸ್‌.ಪುಣಿಂಚಿತ್ತಾಯ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅರವಿಂದ ಕರ್ಕಿಕೋಡಿ ಅವರನ್ನು ಸಮ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಂಗಚಿನ್ನಾರಿ ಕಾಸರಗೋಡು ಇದರ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಕೆ.ಸತ್ಯನಾರಾಯಣ ವಂದಿಸಿದರು. ಮನೋಹರ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾಸರಗೋಡು ಮತ್ತು ಉತ್ತರ ಕನ್ನಡ ಜಿಲ್ಲೆಯ ಸಾಹಿತಿಗಳು, ಕಲಾವಿದರು ಪರಸ್ಪರ ಸಾಹಿತ್ಯ, ಸಂಸ್ಕೃತಿ, ಕಲೆ ಮೊದಲಾದವುಗಳ ಬಗ್ಗೆ ವಿನಿಮಯ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಭಕ್ತಿ – ಭಾವ – ಜಾನಪದ ಗೀತೆ ಗಾಯನ ನಡೆಯಿತು. ಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next