ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಶಾಕ್ ನೀಡಲು ಸಚಿವ ಡಿ.ಕೆ.ಶಿವಕುಮಾರ್ ಮಹತ್ವದ ಕಾರ್ಯತಂತ್ರ ರೂಪಿಸಿದ್ದಾರೆಯೇ?
-‘ಕಾಂಗ್ರೆಸ್‌ಗೆ ಬರುವವರಿಗೆ ಮುಕ್ತ ಆಹ್ವಾನ’ ಎಂಬ ಅವರ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ರಾಜಕೀಯ ಸಂಚಲನ ಮೂಡಿಸಿದೆ.
ಕುಂದಗೋಳ ಕ್ಷೇತ್ರದ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಉಸ್ತುವಾರಿ ಹೊತ್ತ ಡಿ.ಕೆ.ಶಿವಕುಮಾರ್ ಮಂಗಳವಾರದಿಂದ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲುವಿಗೆ ಕಾರ್ಯತಂತ್ರದ ಅನುಷ್ಠಾನಕ್ಕೆ ಶ್ರೀಕಾರ ಹಾಕಿದ್ದಾರೆ. ಏನೆಲ್ಲಾ ಸಾಧ್ಯವೋ ಆ ಯತ್ನಗಳಿಗೆ ಕಾಂಗ್ರೆಸ್-ಜೆಡಿಎಸ್ ಮುಂದಾಗಿವೆ.
ಕ್ಷೇತ್ರವಾರು ಪ್ರಭಾವ: ಮೈತ್ರಿಕೂಟದ ಅಭ್ಯರ್ಥಿ ಗೆಲ್ಲಲೇಬೇಕೆಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಕ್ಷೇತ್ರವಾರು ಪ್ರಭಾವ ಬೀರುವ ನಿಟ್ಟಿನಲ್ಲಿ ಹಲವು ಕಾರ್ಯಗಳನ್ನು ಕೈಗೊಂಡಿದ್ದಾರೆ. ಆರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ತಲಾ ಒಬ್ಬರು ಸಚಿವರನ್ನು ಉಸ್ತವಾರಿಯನ್ನಾಗಿ ನಿಯೋಜಿಸಲಾಗಿದೆ. ಯಾವ ಕ್ಷೇತ್ರದಲ್ಲಿ ಯಾವ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಅಂತಹ ಸಮಾಜದ ಸಚಿವರಿಗೆ ಆ ಕ್ಷೇತ್ರದ ಜವಾಬ್ದಾರಿ ನೀಡಲಾಗಿದೆ.
ಯಲಿವಾಳ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಹಾಗೂ ಶಾಸಕಿ ಸೌಮ್ಯಾರೆಡ್ಡಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದಾರೆ. ಅದೇ ರೀತಿ ಕ್ಷೇತ್ರದ ಸುಮಾರು 40 ಗ್ರಾಮ ಪಂಚಾಯತ್‌ಗಳಿಗೆ ಪ್ರತಿ ಗ್ರಾಪಂಗೆ ಒಬ್ಬರು ಶಾಸಕರನ್ನು ನೇಮಕ ಮಾಡಲಾಗಿದೆ. ಯಾವ ಸಚಿವರಿಗೆ ಯಾವ ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ಯಾವ ಶಾಸಕರಿಗೆ ಗ್ರಾಪಂ ಎಂಬುದರ ಕುರಿತು ಕಾಂಗ್ರೆಸ್ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿಗೆ ಅಂತಿಮ ರೂಪ ನೀಡಿ, ಬುಧವಾರದಿಂದ ತಂಡಗಳ ಕಾರ್ಯವನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್‌ನ ಶಾಸಕರು ಹಾಗೂ ಮುಖಂಡರನ್ನು ಸಹ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದ್ದು, ಈ ತಂಡಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಟಾಸ್ಕ್ ನೀಡಿದ ಡಿಕೆಶಿ: ತಂತ್ರಗಾರಿಕೆಯಲ್ಲಿ ತಮ್ಮದೇ ನೈಪುಣ್ಯತೆ ಹೊಂದಿರುವ ಶಿವಕುಮಾರ್, ಮೈತ್ರಿ ಪಕ್ಷದ ಅಭ್ಯರ್ಥಿ ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ಪ್ರಚಾರ ಹಾಗೂ ಮತದಾರರ ಮನವೊಲಿಕೆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ಹಲವು ಟಾಸ್ಕ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮನೆ ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುವುದೂ ಸೇರಿ ವಿರೋಧಿ ಪಕ್ಷವನ್ನು ಬೆಂಬಲಿಸುವ ಮತದಾರರ ಓಲೈಕೆಗೆ ಆದ್ಯತೆ ನೀಡುವಂತೆ ಸೂಚಿಸಿರುವ ಜತೆಗೆ ಕಾರ್ಯಕರ್ತರ ಕಾರ್ಯನೈಪುಣ್ಯತೆ, ಪರಿಶ್ರಮ, ಪ್ರಾಮಾಣಿಕತೆ ಮೇಲೆಯೂ ತಮ್ಮದೇ ರೀತಿಯ ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಷೇತ್ರದಲ್ಲಿ ನಿತ್ಯ ನಡೆಯುವ ವಿದ್ಯಮಾನ, ಪ್ರಚಾರ, ಮತದಾರರ ಮನವೊಲಿಕೆ, ವಿರೋಧಿಗಳಿಗೆ ನೆರವಾಗಬಹುದಾದ ಸಾಧ್ಯತೆ ಈ ಎಲ್ಲ ವಿಷಯಗಳ ಕುರಿತು ನಿತ್ಯವೂ ಮಾಹಿತಿ ಸಂಗ್ರಹ ಜಾಲವನ್ನು ರೂಪಿಸಿದ್ದಾರೆ ಎನ್ನಲಾಗಿದೆ.
.ಅಮರೇಗೌಡ ಗೋನವಾರ