ನಾಲ್ಕು ದಿನದ ರಜೆ ಮುಗಿಸಿ ಮನೆಯಿಂದ ಆಫೀಸಿಗೆ ಹೊರಟಿದ್ದೆ. ಕಸಿನ್‌ನ ಮದುವೆ ಇದ್ದ ಕಾರಣ ಮೂರು ದಿನದಿಂದ ಸರಿಯಾಗಿ ನಿದ್ದೆ ಇರಲಿಲ್ಲ. ಕಾಸರಗೋಡಿನಿಂದ ಬಸ್ ಹತ್ತಿದವನೇ ಮಂಗಳೂರಿಗೆ ಟಿಕೆಟ್ ಮಾಡಿ ಸೀಟಿಗೊರಗಿದೆ. ಅಲ್ಲೇ ಜೊಂಪು ಹತ್ತಿತು.
‘ಜ್ಯೋತಿ…ಯಾರಾದ್ರೂ ಜ್ಯೋತಿಯಲ್ಲಿ ಇಳಿತೀರಾ?’ ಕಂಡೆಕ್ಟರ್ ಬೊಬ್ಬೆ ಹೊಡೆದಾಗಲೇ ಎಚ್ಚರವಾಗಿದ್ದು. ಕಣ್ಣುಜ್ಜಿಕೊಂಡು ಬ್ಯಾಗ್ ಹೆಗಲಿಗೇರಿಸಿ ಎದ್ದೆ. ಬಂಟ್ಸ್ ಹಾಸ್ಟೆಲ್ನಲ್ಲಿ ಬಸ್‌ನಿಂದ ಇಳಿದೆ. ನಿದ್ದೆ ಬಿಟ್ಟಿರಲಿಲ್ಲ. ಉಡುಪಿ ಬಸ್‌ಗೆ ಕಾಯುತ್ತಿದ್ದೆ. ಅಭ್ಯಾಸ ಬಲದಿಂದ ಮೊಬೈಲ್ ತೆಗೆದುಕೊಳ್ಳಲು ಜೇಬಿಗೆ ಕೈ ಹಾಕಿದೆ. ಫೋನ್ ಇರಲಿಲ್ಲ. ಎರಡೆರಡು ಸಲ ಹುಡುಕಾಡಿದೆ. ಊಹುಂ ಮೊಬೈಲ್ ಇಲ್ಲ. ಆಗಲೇ ನಿದ್ದೆ ಹಾರಿ ಹೋಗಿತ್ತು.
ಹೊರಡುವ ಗಡಿಬಿಡಿಯಲ್ಲಿ ಮನೆಯಲ್ಲಿಯೇ ಬಿಟ್ಟು ಬಂದಿರಬೇಕು ಎನಿಸಿತು. ಆಫೀಸ್‌ಗೆ ಬೇರೆ ಹೊತ್ತಾಗಿತ್ತು. ಮನೆಗೆ ಹೋಗಿ ತರುವ ಹಾಗೆಯೂ ಇರಲಿಲ್ಲ. ಏನು ಮಾಡೊದು ಈಗ ಅಂದುಕೊಂಡು ಅಲ್ಲೇ ಪಕ್ಕದಲ್ಲಿ ನಿಂತಿದ್ದವರ ಮೊಬೈಲ್ ತಗೊಂಡು ಮನೆಗೆ ಕರೆ ಮಾಡಿದೆ. ಅಮ್ಮ ಕಾಲ್ ರಿಸೀವ್ ಮಾಡಿ ಹುಡುಕಿ ತಿಳಿಸುವುದಾಗಿ ಹೇಳಿದರು. 10 ನಿಮಿಷ ಬಿಟ್ಟು ಮನೆಯಿಂದ ಕರೆ ಬಂತು. ‘ನಿನ್ನ ಫೋನ್ ಸೀಟ್ ಕೆಳಗೆ ಬಿದ್ದಿತ್ತಂತೆ. ಅಲ್ಲಿ ಕುಳಿತ್ತಿದ್ದ ವಿದ್ಯಾರ್ಥಿಯೊಬ್ಬ ತಗೊಂಡಿದ್ದಾನೆ. ನೀನು ಬಸ್ ಇಳಿದ ಮೇಲೆ ಗೊತ್ತಾಯಿತಂತೆ. ಸ್ಟೇಟ್ ಬ್ಯಾಂಕ್ ಬಸ್ ಸ್ಟಾಂಡ್‌ನಲ್ಲಿರುತ್ತೇನೆ. ಅಲ್ಲಿಗೆ ಬಂದು ತೆಗೆದುಕೊಳ್ಳಲು ಹೇಳಿಎಂದಿದ್ದಾನೆ’ಎಂದರು
ಅಪ್ಪ. ಫೋನ್ ಹುಡುಕಲು ರಿಂಗ್ ಮಾಡಿದಾಗ ಮೊಬೈಲ್ ಸಿಕ್ಕಿದ ವ್ಯಕ್ತಿ ಮಾತನಾಡಿದ್ದನಂತೆ. ಕೂಡಲೇ ನಾನು ಕರೆ ಮಾಡಿದೆ. ‘ಸರ್ ಕಾಯ್ತಾ ಇದ್ದೇವೆ. ಬೇಗ ಬನ್ನಿ. ಕಾಲೇಜಿಗೆ ಹೊತ್ತಾಗುತ್ತೆ’ ಎಂದ. ನಾನು ಸ್ಟೇಟ್ ಬ್ಯಾಂಕ್ ಬಸ್ ಸ್ಟಾ ್ಯಂಡ್ ತಲುಪಿದಾಗ ಯುವಕನೊಬ್ಬ ನನ್ನ ದಾರಿ ನೋಡುತ್ತಿದ್ದ.
‘ನಿಮ್ಮ ಸೀಟ್‌ನ ಕೆಳಗೆ ಬಿದ್ದಿತ್ತು. ಪಾಸ್‌ವರ್ಡ್ ಇದ್ದ ಕಾರಣ ಓಪನ್ ಮಾಡ್ಲಿಕ್ಕೆ ಆಗಿರಲಿಲ್ಲ. ಯಾರದ್ದಾದರೂ ಕರೆ ಬರುತ್ತಾ ಅಂತ ಕಾಯ್ತಾ ಇದ್ದೆ’ ಎಂದು ಫೋನ್ ನನ್ನ ಕೈಗಿತ್ತು ಹೊರಟು ಹೋದ. ಮೊಬೈಲ್ ಅಪಹರಿಸುವವರ ಮಧ್ಯೆ ಸಿಕ್ಕ ಮೊಬೈಲ್ ಅನ್ನು ಹಿಂತಿರುಗಿಸಿದ ಅವನ ಪ್ರಾಮಾಣಿಕತೆಗೆ ನಾನು ಕರಗಿ ಹೋದೆ.
•ರಮೇಶ್ ಬಳ್ಳಮೂಲೆ