Advertisement

ಎರಡು ಕಾಳುಗಳ ಕಥೆ

10:22 AM Aug 30, 2019 | sudhir |

ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಬುದ್ಧಿವಂತಿಕೆ.
ಈ ಮಾತಿಗೆ ಅರ್ಥವಿದೆ. ಸಾಮಾನ್ಯವಾಗಿ ಎರಡು ರೀತಿಯ ಜನರಿರುತ್ತಾರೆ. ಒಬ್ಬರು ಸರಿಯಾದ ಸಮಯಕ್ಕೆ ಕಾಯುತ್ತಲೇ ಇರುತ್ತಾರೆ. ಅದು ಅವರ ಸಮಯಕ್ಕೆ ಕಾಯುವುದೆಂದರ್ಥ. ಇನ್ನೊಬ್ಬರು ಬಂದ ಸಮಯವನ್ನು ತಮಗಾಗಿ ಬಳಸಿಕೊಳ್ಳುತ್ತಾರೆ ಅಥವಾ ಮಾರ್ಪಡಿಸಿಕೊಳ್ಳುತ್ತಾರೆ.
ಇದನ್ನು ಹೀಗೂ ಹೇಳಬಹುದು. ಅವಕಾಶವನ್ನು ಬಳಸಿಕೊಳ್ಳುವ ಬಗೆಯದು ಎನ್ನಬಹುದು.

Advertisement

ಎರಡು ಕಾಳುಗಳು ಮಣ್ಣಿನ ಮೇಲಿದ್ದವು. ಒಂದು ಕಾಳು ಹೇಳಿತು, ನಾನೀಗ ಮಣ್ಣಿನಡಿ ಹೋಗಿ ಆ ಹದದಲ್ಲಿ ಮೊಳಕೆಯೊಡೆಯುತ್ತೇನೆ. ನನ್ನ ಬೇರುಗಳನ್ನು ಆಳಕ್ಕೆ ಇಳಿಯಬಿಡುತ್ತೇನೆ. ನನಗೆ ಸೂರ್ಯನ ಎಳೆ ಕಿರಣ ಬಹಳ ಇಷ್ಟ. ಅದನ್ನು ನೋಡುತ್ತಾ, ಸ್ಪರ್ಶಿಸುತ್ತಾ ಬೆಳೆಯತ್ತೇನೆ. ಇನ್ನೇನು ಮಳೆ ಬರುತ್ತದೆ. ಖುಷಿಯೋ ಖುಷಿ. ಮಳೆಯ ಹನಿಗಳನ್ನು ನನ್ನ ಪಕಳೆಗಳಲ್ಲಿ ಹಿಡಿದುಕೊಳ್ಳುವೆ ಎನ್ನುತ್ತಾ ಮಣ್ಣಿನೊಳಗೆ ಹೋಯಿತು. ಕೆಲ ದಿನಗಳಲ್ಲೇ ಅದು ಮೊಳಕೆಯೊಡೆದು, ಬೆಳೆದು, ತನ್ನ ಆಸೆಯನ್ನೆಲ್ಲಾ ತೀರಿಸಿಕೊಂಡಿತು. ಅದೀಗ ಒಂದು ಸುಂದರವಾದ ಹೂವಿನ ಗಿಡ.

ಮತ್ತೂಂದು ಕಾಳಿಗೆ ಏಕೋ ಭಯ. ಇಲ್ಲಪ್ಪ, ನಾನು ಮಣ್ಣಿನಡಿ ಹೋದರೆ ನಾನಾ ಹುಳುಗಳಿರುತ್ತವೆ, ಅವು ತಿಂದು ಬಿಟ್ಟರೆ ಏನು ಮಾಡುವುದು? ಹಾಗೆಂದು ಬೇರನ್ನು ಬಿಟ್ಟು, ಮೊಳಕೆಯೊಡೆದು ದೊಡ್ಡದಾದರೂ ಬೀಸುವ ಗಾಳಿ ಕಡಿಮೆ ಜೋರಿರುತ್ತದೆಯೇ? ಅದರ ರಭಸಕ್ಕೆ ನಾನು ಸೊಂಟ ಮುರಿದು ಬೀಳಬೇಕು. ಒಂದುವೇಳೆ ಹೂವನ್ನು ಬಿಟ್ಟರೂ ಅಷ್ಟೇ. ಯಾರೋ ಬಂದು ಕಿತ್ತುಕೊಂಡು ಹಾಳು ಮಾಡುತ್ತಾರೆ. ಈ ಸೊಬಗಿಗೆ ನಾನೇಕೆ ಹೋಗಬೇಕು. ಬೇಡವೇ ಬೇಡ ಎಂದುಕೊಂಡು ಸುಮ್ಮನೆ ಇತ್ತು.

ಅಷ್ಟರಲ್ಲಿ ಕೋಳಿಯೊಂದು ಅದೇ ದಾರಿಯಲ್ಲಿ ಕಾಳನ್ನು ಹುಡುಕಿಕೊಂಡು ಬಂದಿತು. ಇದನ್ನು ಕಂಡ ಕಾಳು ಯೋಚಿಸುವಷ್ಟರಲ್ಲಿ ಕೋಳಿಯು, ಆ ಕಾಳನ್ನು ಹೆಕ್ಕಿ ತಿಂದುಬಿಟ್ಟಿತು.

ಅದಕ್ಕೇ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳುವುದು ಉತ್ತಮ. ಅದನ್ನು ಹೊರತುಪಡಿಸಿ, ಒಳ್ಳೆಯಕಾಲವೆಂದು ಕಾಯುತ್ತಿದ್ದರೆ ಕಾಲವೆಂದೂ ನಮ್ಮ ಬಳಿ ಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next