ನಮ್ಮದೋ ಸುಮಾರು ಮೂರು ತಿಂಗಳ ಹೋರಾಟ. ನಮ್ಮ ಈ ಹೋರಾಟವನ್ನು ಪುರಾಣದ ಭಗೀರಥನ ಪ್ರಯತ್ನಕ್ಕೆ ಹೋಲಿಸಬಹುದು. ಅಂತೂ ಇಂತೂ ಮಾರ್ಚ್ 29ಕ್ಕೆ ಟೂರ್‌ಗೆ ಹೋಗಲು ನಮ್ಮ ಪ್ರಾಂಶುಪಾಲರ ಅನುಮತಿ ಸಿಕ್ಕಿತು. ಅಬ್ಟಾ! ಟೂರ್‌ಗೆ ಹೋಗಲು ಅನುಮತಿ ಸಿಕ್ಕಿತಲ್ಲ ಎಂದು ನಾವೆಲ್ಲ ನಿಟ್ಟುಸಿರು ಬಿಟ್ಟೆವು. ತದ ನಂತರ ನನ್ನ ಗೆಳೆಯನೊಬ್ಬ “ಟೂರ್‌ಗೆ ಯಾರೆಲ್ಲ ಬರುತ್ತೀರಿ?’ ಎಂದು ಕೇಳಿ ಅವರ ಹೆಸರುಗಳನ್ನು ಪಟ್ಟಿ ಮಾಡತೊಡಗಿದ. ಟೂರ್‌ಗೆ ಹೊರಡಲು ಇನ್ನೇನು ಎರಡು ದಿವಸ ಮಾತ್ರ ಇದೆ ಎನ್ನುವಾಗ ಈಗಾಗಲೇ ಹೆಸರು ಕೊಟ್ಟಿದ್ದವರಲ್ಲಿ ಒಬ್ಬೊಬ್ಬರಾಗಿ ಯಾವುದೋ ಕಾರಣ (ಸುಳ್ಳು ನೆಪ)ಗಳನ್ನು ಕೊಟ್ಟು ತಮ್ಮ ಹೆಸರುಗಳನ್ನು ಹಿಂದೆಗೆದುಕೊಳ್ಳಲಾರಂಭಿಸಿದರು. ಇದರಲ್ಲಿ ನಾನೂ ಒಬ್ಬ! ಅತ್ತ ನನ್ನ ಗೆಳೆಯನೋ ಟೂರ್ ಹೋಗುವ ತರಾತುರಿಯಲ್ಲಿ ಬಸ್ ಬೇರೆ ಅರೇಂಜ್ ಮಾಡಿದ್ದ ಮಾತ್ರವಲ್ಲದೆ ಬಸ್ ಮಾಲಿಕರಿಗೆ ಅಡ್ವಾನ್ಸ್ ಈಗಾಗಲೇ ನೀಡಿದ್ದ.
ಹೀಗೆ, ಒಬ್ಬೊಬ್ಬರು ತಮ್ಮ ಹೆಸರುಗಳನ್ನು ಹಿಂದೆಗೆದು ಕೊಳ್ಳುವಾಗ ನನ್ನ ಗೆಳೆಯನಿಗೆ ತಲೆಬಿಸಿಯಾಗಲಾರಂಭಿಸಿತು. ಜತೆಗೆ ಅವನಿಗೆ ಬಹಳ ಆತಂಕವೂ ಆಯಿತೆ, ಏಕೆಂದರೆ, ಇಷ್ಟೆಲ್ಲಾ ಹೋರಾಟ ಮಾಡಿ ಮಿತ್ರರೆಲ್ಲ ಕೊನೆ ಗಳಿಗೆ ಕೈಕೊಡಲಾರಂಭಿಸಿದರಲ್ಲ ಎಂದು! ಒಂದು ಹಂತದಲ್ಲಂತೂ “ಇವೆಲ್ಲ ನನಗೆ ಬೇಕಿತ್ತಾ?’ ಅನ್ನುವಷ್ಟರ ಮಟ್ಟಿಗೆ ಅವನು ಒತ್ತಡದಲ್ಲಿದ್ದ.
ಈಗಾಗಲೇ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಾಗಿತ್ತು. ಟೂರ್ ಕ್ಯಾನ್ಸಲ್ ಮಾಡುವಂತಿಲ್ಲ. ಈಗ ಉಳಿದಿರುವುದು ಒಂದೇ ದಾರಿ- ತಮ್ಮ ಹೆಸರುಗಳನ್ನು ಹಿಂದೆಗೆದು ಕೊಂಡವರ ಮನವೊಲಿಸುವುದು. ಕೊನೆಗೂ ಬಗೆ ಬಗೆಯ ಸರ್ಕಸ್‌ಗಳನ್ನು ಮಾಡಿ ಎಲ್ಲರೂ ಟೂರ್‌ಗೆ ಬರಲು ಒಪ್ಪಿಕೊಂಡಾಗ ಅವನಿಗಾದ ಸಂತೋಷದ ಅಷ್ಟಿಷ್ಟಲ್ಲ. ಅಂತೂ ಮಡಿಕೇರಿ-ಮೈಸೂರಿಗೆ ಅಂತಿಮ ವರ್ಷದ ಅಂತಿಮ ಟೂರ್‌ಗೆ ಹೋಗಲು ಸಜ್ಜಾದೆವು.
ಮಂಜುನಾಥ ಬಿ. ವಿ.
ತೃತೀಯ ಬಿ. ಎ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ