Advertisement

ಊರು ಉದ್ಧಾರಕ

09:59 AM Oct 26, 2019 | Team Udayavani |

ಹಳ್ಳಿಯನ್ನು ಪ್ರಗತಿಯತ್ತ ಕೊಂಡೊಯ್ಯಬೇಕೆಂಬ ಅಂಶ ಕನ್ನಡಕ್ಕೆ ಹೊಸದಲ್ಲದಿದ್ದರೂ, ಹೊಸತನದೊಂದಿಗೆ ಹೊಸ ವಿಷಯದ ಮೂಲಕ ನೋಡುಗರನ್ನು ಗಮನಸೆಳೆಯಲು ಇಲ್ಲೊಂದು ಹೊಸತಂಡದ ಆಗಮನವಾಗಿದೆ. ಆ ಚಿತ್ರಕ್ಕೆ “ರಣಶ್ವ’ ಎಂದು ಹೆಸರಿಡಲಾಗಿದೆ. “ರಣಶ್ವ’ ಅಂದರೆ, ಯುದ್ಧದಲ್ಲಿ ಹೋರಾಡುವ ಕುದುರೆ ಎಂದರ್ಥ. ಹಾಗಂತ, ಇಲ್ಲಿ ಯಾವುದೇ ಅಶ್ವದ ಹೋರಾಟ, ಓಡಾಟ ಇರೋದಿಲ್ಲ. ಚಿತ್ರದ ನಾಯಕ ಯುದ್ಧದಲ್ಲಿ ಅಶ್ವ ಹೋರಾಡುವಂತೆಯೇ, ಅವನೂ ಕೆಲ ಸಮಸ್ಯೆಗಳ ನಿವಾರಣೆಗಾಗಿ ಹೋರಾಡುವುದರಿಂದ ಕಥೆಗೆ ಪೂರಕ ಎಂಬಂತೆ “ರಣಶ್ವ’ ಎಂಬ ಶೀರ್ಷಿಕೆ ಇಡಲಾಗಿದೆ.

Advertisement

ಅಂದಹಾಗೆ, ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ. ರಾಜ್‌ ಮನು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಮೊದಲ ಅನುಭವ. ಈ ಹಿಂದೆ ಶಿವಮಣಿ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದರು. ಆ ಅನುಭವದ ಮೇಲೆ “ರಣಶ್ವ’ ಹಿಂದೆ ನಿಂತಿದ್ದಾರೆ. ಕಥೆ ಬಗ್ಗೆ ಹೇಳುವ ಅವರು, “ದೇಶಾದ್ಯಂತ ಅದೆಷ್ಟೋ ಹಳ್ಳಿಗಳು ಅಭಿವೃದ್ಧಿಯಾಗಿವೆ. ಈಗಲೂ ಪ್ರಗತಿಯತ್ತ ದಾಪುಗಾಲು ಇಡುತ್ತಿವೆ. ಆದರೆ, ಚಿತ್ರದ ಕಥೆಯಲ್ಲಿ ಒಂದು ಹಳ್ಳಿ ಮಾತ್ರ ಯಾವುದೇ ಪ್ರಗತಿ ಕಾಣದೆ ಸೌಲಭ್ಯಗಳಿಂದ ವಂಚಿತವಾಗಿರುತ್ತೆ. ಚಿತ್ರದ ಹೀರೋ, ಅಲ್ಲಿಗೆ ಒಮ್ಮೆ ಭೇಟಿ ಕೊಟ್ಟಾಗ, ಆ ಊರಿನ ಸಮಸ್ಯೆ ಅರಿವಾಗುತ್ತೆ. ಇನ್ನಷ್ಟು ಆಳವಾಗಿ ಯಾಕೆ ಈ ಹಳ್ಳಿ ಇನ್ನೂ ಅಭಿವೃದ್ಧಿ ಹೊಂದಿಲ್ಲ ಎಂಬುದನ್ನು ತಿಳಿಯಲು ಮುಂದಾದಾಗ, ಆ ಹಳ್ಳಿ ತನ್ನದೇ ಊರು ಅನ್ನೋದು ಗೊತ್ತಾಗುತ್ತೆ. ಆಮೇಲೆ ಅವನು ಹೇಗೆ ತನ್ನ ಹಳ್ಳಿಯನ್ನು ಅಭಿವೃದ್ಧಿ ಪಡಿಸುತ್ತಾನೆ, ಕೃಷಿಯಿಂದ ಎಷ್ಟೆಲ್ಲಾ ಲಾಭ ಇದೆ ಇತ್ಯಾದಿ ವಿಷಯದ ಮೂಲಕ ಗಮನಸೆಳೆಯುವುದು ಕಥೆಯ ಸಾರಾಂಶ. ಬಹುತೇಕ ಶೇ.75ರಷ್ಟು ಗ್ರಾಮೀಣದಲ್ಲೇ ಚಿತ್ರೀಕರಣ ನಡೆಯಲಿದೆ. ರಾಮನಗರ, ಬೆಂಗಳೂರು, ಸಕಲೇಶಪುರ, ಕೊಡಗು ಇತರೆ ಕಡೆಗಳಲ್ಲಿ 35 ದಿನಗಳ ಕಾಲ ಚಿತ್ರೀಕರಿಸಲು ತಯಾರಿ ನಡೆಸಲಾಗಿದೆ’ ಎಂದು ವಿವರ ಕೊಟ್ಟರು ರಾಜ್‌ ಮನು.

ವಿಜಯ್‌ ದೇವ್‌ ಚಿತ್ರದ ನಾಯಕ. ಅವರಿಗೆ ಇದು ಎರಡನೇ ಸಿನಿಮಾ. ಚಿತ್ರದ ಕಥೆ, ಪಾತ್ರದಲ್ಲಿ ಗಟ್ಟಿತನವಿದೆ. ಹಳ್ಳಿಯೊಂದಕ್ಕೆ ಕಾಲಿಡುವ ಹೀರೋ, ಅಲ್ಲಿರುವ ಹಲವು ಸಮಸ್ಯೆಗಳನ್ನು ನಿವಾರಿಸಿ, ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾನೆ ಎಂಬ ಪಾತ್ರವನ್ನು ನಿರ್ದೇಶಕರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಹೇಳಿಕೊಂಡರು ವಿಜಯ್‌ ದೇವ್‌.

ಇನ್ನು, ನಾಯಕಿಯಾಗಿ ದ್ರಾವ್ಯಶೆಟ್ಟಿ ಅವರಿಗೆ ಇಲ್ಲಿ ಮುಗ್ಧ ಹುಡಗಿಯ ಪಾತ್ರ ಸಿಕ್ಕಿದೆಯಂತೆ. ದೀಪಕ್‌ ಶೆಟ್ಟಿ ಅವರಿಗಿಲ್ಲಿ ಖಳಟನಟನ ಪಾತ್ರವಿದೆ. ಚಿತ್ರಕ್ಕೆ ಸುರೇಶ್‌ ಸಂಗೀತವಿದೆ. ಹರೀಶ್‌ ಗೌಡ ಸಾಹಿತ್ಯವಿದೆ. ರಂಗಸ್ವಾಮಿ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಲಯೇಂದ್ರ, “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗೋವಿಂದೇಗೌಡ, “ಮಜಾ ಭಾರತ’ ಕಲಾವಿದರಾದ ಮಂಜು ಪಾವಗಡ, ರಾಘವೇಂದ್ರ, ಹಿರಿಯ ಕಲಾವಿದ ಹೊನ್ನವಳ್ಳಿ ಕೃಷ್ಣ ಇತರರು ನಟಿಸುತ್ತಿದ್ದಾರೆ. ಎಂ.ನಾಗರಾಜ್‌ ಜೈ ದೇವರಾಜ್‌ ಫಿಲಂಸ್‌ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next