ಹುಟ್ಟುತ್ತಾ ಪ್ರದೀಪ್ ಕುಮಾರ್ ಆಗಿದ್ದವನು ಬೆಳೆಯುತ್ತಾ ಪ್ರೀತಿಕಾ ಆಗಿದ್ದು ಸುಲಭವೇನಾಗಿರಲಿಲ್ಲ. ಪ್ರೀತಿಕಾ ತಮಿಳುನಾಡಿನ ಸೇಲಂನಲ್ಲಿ ಚಾಲಕ ಮತ್ತು ದರ್ಜಿ ದಂಪತಿಗೆ ಮಗನಾಗಿ ಜನಿಸಿದಳು.
ಕಷ್ಟದ ಬಾಲ್ಯವನ್ನು ಕಂಡ ಆಕೆ ತನ್ನಗಾಗುತ್ತಿದ್ದ ಬದಲಾವಣೆ ಅರಿಯದೇ ಬೇಸತ್ತಿದ್ದಳು. ಆಕೆಯ ಕಷ್ಟ ನೋಡಲಾಗದ ತಂದೆ ತಾಯಿ ಕಂಡ ಕಂಡ ದೇವಾಲಯ, ವೈದ್ಯರು, ಜೋತಿಷಿಗಳ ಬಳಿ ಕರೆದುಕೊಂಡು ಹೋದರು, ಆದರೆ ಯಾವುದೂ ಪ್ರಯೋಜನವಾಗಲಿಲ್ಲ.
ಅನಂತರ ಆಕೆ ಒಂಬತ್ತನೇ ತರಗತಿಯಲ್ಲಿರುವಾಗ ದೇಹದಲ್ಲಿ ಬದಲಾವಣೆ ಕಾಣಲಾರಂಭಿಸಿತು. ಆಕೆಗೆ ತನ್ನಲ್ಲಿ ಆಗುತ್ತಿದ್ದ ಬದಲಾವಣೆಗಳು ಒಂದೋಂದಾಗಿ ಗಮನಕ್ಕೆ ಬರಲಾರಂಭಿಸಿದ್ದವು. ಯಾರಲ್ಲೂ ಹೇಳಿಕೊಳ್ಳಲಾಗದ ಭಾವನೆ ಜತೆಗೆ ಜನರ ಒರಟು ಮಾತು ಇವೆಲ್ಲವೂ ದಿನನಿತ್ಯ ಸುಪ್ರಭಾತದಂತಾಗಿದ್ದವು. ಬದಲಾಯಿಸಲು ಯಾವುದು ಇವಳ ಕೈಯಲ್ಲಿರಲಿಲ್ಲ, ಆದರೆ ಭವಿಷ್ಯದ ನಿರ್ಧಾರ ಆಕೆಯ ಕೈಮೀರಿ ಹೋಗಿರಲಿಲ್ಲ.
ಇದನ್ನರಿತ ಪ್ರೀತಿಕಾ ಯಾರ ಮಾತಿಗೂ ಕಿವಿಗೊಡದೆ ಓದುವುದನ್ನು ನೆಚ್ಚಿಕೊಂಡಳು. ಅವಳ ನಂಬಿಕೆ ಅವಳಿಗೆ ಮೋಸ ಮಾಡಲಿಲ್ಲ. ಛಲ ಬಿಡದೆ, ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಅನಂತರ ಅವರು ಚೆನ್ನೈನಲ್ಲಿರುವ ಹಾಸ್ಟೆಲ್‌ನಲ್ಲಿ ವಾರ್ಡನ್ ಆಗಿ ವೃತ್ತಿ ಜೀವನ ಆರಂಭಿಸಿದರು. ಅದಾದ ಬಳಿಕ ನಡೆದದ್ದು ಅವರ ಪರಿಶ್ರಮದ ಪರಿಣಾಮ ಎಂದರೆ ತಪ್ಪಾಗಲಾರದು. ತಮಿಳುನಾಡಿನ ಏಕರೂಪದ ಸೇವೆಗಳ ನೇಮಕಾತಿ ಮಂಡಳಿಗೆ ಪ್ರೀತಿಕಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದರು. ಆದರೆ ಆಕೆ ಟ್ರಾನ್ಸ್‌ವುಮೆನ್ ಎನ್ನುವ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕರಿಸಲಾಯಿತು.
ಆದರೂ ಪಟ್ಟು ಬಿಡದೆ ಹೈಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಇದನ್ನು ಪ್ರಶ್ನಿಸಿದಳು. ಅದರಂತೆ ಮದ್ರಾಸ್ ಹೈಕೋರ್ಟ್ ಆಕೆಗಾಗಿ ಲಿಖೀತ ಪರೀಕ್ಷೆ ನಡೆಸಲು ಆದೇಶಿಸಿತು. ಇದನ್ನು ಸದುಪಯೋಗಿಸಿಕೊಂಡ ಪ್ರೀತಿಕಾ ಎಲ್ಲ ಪರೀಕ್ಷೆಗಳಲ್ಲಿಯೂ ಸೈ ಎನಿಸಿಕೊಂಡು ಯಶಸ್ವಿಯಾದರು.
2015 ನ. 6ರ ಮದ್ರಾಸ್ ಹೈಕೋರ್ಟ್ ತೀರ್ಪಿನ ಪ್ರಕಾರ ಪ್ರೀತಿಕಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡರು. ಎ. 2 2017ರಂದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡರು. ಆಕೆ ತನ್ನಿಂದ ಆಗುವುದಿಲ್ಲ ಎಂದು ಕುಳಿತಿದ್ದರೆ ಭಾರತದ ಮೊದಲ ಟ್ರಾನ್ಸ್‌ವುಮೆನ್ ಸಬ್‌ಇನ್‌ಸ್ಪೆಕ್ಟರ್ ಆಗಲು ಸಾಧ್ಯವೇ ಆಗುತ್ತಿರಲಿಲ್ಲ.
ಪ್ರೀತಿ ಭಟ್, ಗುಣವಂತೆ