ವಯೋವೃದ್ಧನೊಬ್ಬ ಒಮ್ಮೆ ಸಮಯದ ಜತೆ ಜಗಳಕ್ಕೆ ಬಿದ್ದ. ಬದುಕಿನಲ್ಲಿ ಸಾಕಷ್ಟು ಸುಖ ದುಃಖ ನೋಡಿ ಬಂದವನು, ಮಾಗಿದ ಮನಸ್ಸಿನವನೂ ಆಗಿದ್ದ ಆ ವೃದ್ಧ. ಹಲವು ವರ್ಷ ಗಳಿಂದ ಸಮಯವನ್ನು ಹುಡುಕುತ್ತಿದ್ದ.
ಹೇಯ್, ಸಮಯ..ನಿನಗೇಕೆ ಅಷ್ಟೊಂದು ಧಾವಂತ? ಎಂದು ಪ್ರಶ್ನಿಸಿದ ವೃದ್ಧ. ಅದಕ್ಕೆ, ಸಮಯವು, “ನಾನೇನೂ ಓಡುತ್ತಿಲ್ಲ, ಅದು ನಿನ್ನ ಭ್ರಮೆ. ನೀನೇ ನನ್ನ ಹಿಂದೆ ಓಡಿ ಬರುತ್ತಿದ್ದೆ’ ಎಂದಿತು.ಇದನ್ನು ಕೇಳಿ ಮತ್ತೂ ಸಿಟ್ಟು ಬಂದಿತು ವೃದ್ಧನಿಗೆ. “ನೀನು ಸುಳ್ಳುಹೇಳುತ್ತಿದ್ದಿ. ಒಂದು ಕ್ಷಣವೂ ನನ್ನ ದೆಂದು ಉಳಿಸಿಕೊಳ್ಳಲಾಗುತ್ತಿಲ್ಲ. ಎಲ್ಲವನ್ನೂ ನೀನೇ ಕಿತ್ತುಕೊಳ್ಳು ತ್ತಿದ್ದೀಯಾ’ ಎಂದು ಗುಡುಗಿದ.
ಅದಕ್ಕೆ ಸಮಯವು, ಅದೂ ನಿನ್ನ ಭ್ರಮೆ. ನಾನೇನು ಕಿತ್ತುಕೊಳ್ಳುತ್ತಿಲ್ಲ. ನೀನೇ ಕಳೆದುಕೊಳ್ಳುತ್ತಿದ್ದೀಯಾ ಎಂದು ಹೇಳಿತು. ಯಾಕೋ ವೃದ್ಧನಿಗೆ ಸಂಶಯ ವ್ಯಕ್ತವಾಯಿತು. ವೃಥಾ ನಿನ್ನ ತಪ್ಪಿಗೆ ನನ್ನ ಮೇಲೆ ಆರೋಪ ಹೊರಿಸುತ್ತಿದ್ದೀ ಎಂದು ಹೇಳಿದ ವೃದ್ಧ. ಅದಕ್ಕೆ ಪ್ರತಿಯಾಗಿ ಸಮಯವು, ಹಾಗೇನೂ ಇಲ್ಲ. ನಾನು ಯಾರ ಮೇಲೂ ಆರೋಪಿಸುವುದಿಲ್ಲ, ನಾನು ತಟಸ್ಥ ಎಂದಿತು.
ವೃದ್ಧ ತನ್ನ ಬದುಕಿನ ಹಲವು ಪ್ರಸಂಗಗಳನ್ನು ಹೇಳಿ, ನೀನು ಹೇಳು. ಒಂದನ್ನೂ ಅನುಭವಿಸಲು ಬಿಡದೇ ಕಿತ್ತುಕೊಂಡವನು ನೀನೇ ತಾನೇ ಎಂದು ಆರೋಪಗಳ ಸುರಿಮಳೆಗರೆದ. ಆಗಲೂ ಸಮಯವು ತಾಳ್ಮೆಯಿಂದ, ಒಂದು ಕೆಲಸ ಮಾಡುವ. ಒಂದು ಬೊಗಸೆ ತುಂಬಾ ನೀರು ತೆಗೆದುಕೊಂಡು ಬಾ ಎಂದು ಸೂಚಿಸಿತು.
ಆಯಿತೆಂದು ವೃದ್ಧ ಹತ್ತಿರದಲ್ಲೇ ಇದ್ದ ಕೊಳದಿಂದ ಒಂದು ಬೊಗಸೆ ನೀರನ್ನು ತೆಗೆದುಕೊಂಡು ಬಂದ. ಹತ್ತು ಹೆಜ್ಜೆ ಇಟ್ಟು ಸಮಯದ ಬಳಿ ಬರುವಲ್ಲಿ ಬೊಗಸೆ ಪೂರ್ತಿ ಇದ್ದ ನೀರು ಅರ್ಧದಷ್ಟು ಖಾಲಿಯಾಗಿತ್ತು. ಸಮಯವು ಇದನ್ನು ಕಂಡು, ನಿನಗೆ ನಾನು ಹೇಳಿದ್ದು ಒಂದು ಬೊಗಸೆ ತುಂಬಾ ನೀರು ತಾ ಎಂದಿದ್ದೆ. ಆದರೆ ನೀನು ಅರ್ಧ ತಂದಿದ್ದೆ ಎಂದಿತು. ಅದಕ್ಕೆ ವೃದ್ಧ, “ಇಲ್ಲ. ನಾನು ತರುವಾಗ ತುಂಬಾ ಇತ್ತು. ಈಗ ಅರ್ಧ ಆಗಿರಬಹುದು’ ಎಂದ. ಸಮಯವು, “ಅದು ಸರಿ. ನೀನು ಹೋಗಿ ಆ ಆರ್ಧ ಬೊಗಸೆಯನ್ನು ತಾ’ ಎಂದಿತು. ಅದಕ್ಕೆ ವೃದ್ಧ, “ಅದು ಹೇಗೆ ಸಾಧ್ಯ? ಅದು ಭೂಮಿಯಲ್ಲಿ ಇಂಗಿದೆ’ ಎಂದ. ಅದಕ್ಕೆ ಸಮಯವು, ನನ್ನದೇನು ತಪ್ಪಿದೆ. ನೀನು ಬರುವಾಗ ಯಾಕೆ ಅದು ಗಮನಿಸಲಿಲ್ಲ ಎಂದು ಪ್ರಶ್ನಿಸಿತು. ಆ ವೃದ್ಧ, ಸೋರಿ ಹೋಗುವುದಕ್ಕೆ ನನ್ನಿಂದೇನು ಮಾಡಲು ಸಾಧ್ಯ ಎಂದು ಕೇಳಿದ. ಅದಕ್ಕೆ ಸಮಯವು, “ನೀನು ಸೋರುವ ಸಾಧ್ಯತೆ ಗೊತ್ತಿದ್ದೂ ಸೋರದಂತೆ ಉಪಾಯ ಹುಡುಕಿ, ಸಮರ್ಥವಾಗಿ ನಿರ್ವಹಿಸಿದ್ದರೆ ಸೋರಿಕೆಯನ್ನು ತಡೆಯಬಹುದಿತ್ತಲ್ಲವೇ?’ ಎಂದು ಕೇಳಿತು. ವೃದ್ಧನಿಗೆ ಏನೂ ಹೇಳಲಾಗಲಿಲ್ಲ, ಸುಮ್ಮನೆ ತಲೆ ತಗ್ಗಿಸಿದ.
ನಾವೂ ಹಾಗೆಯೇ, ಸಮಯ ಸೋರಿಕೆಯನ್ನು° ಕಂಡೂ ಸುಮ್ಮನಿರುತ್ತೇವೆ. ಅದನ್ನು ತಡೆಗಟ್ಟಲು ಪ್ರಯತ್ನಿಸಬೇಕು.
-ಟೈಮ್ ಸ್ವಾಮಿ