Advertisement

ಭಾರತೀಯ ಸೇನೆಯ ಹಿರಿಮೆಯ ಕಥೆ; ಇಂದು ಕಾರ್ಗಿಲ್ ವಿಜಯೋತ್ಸವ

12:30 AM Jul 26, 2018 | |

ಅರೆಕ್ಷಣ ಭಾವುಕರಾದ ಭಾರತೀಯ ಯೋಧರು, ಛೇ! ಈತ ಭಾರತೀಯ ಸೈನ್ಯದಲ್ಲಿ ಇರಬೇಕಾಗಿತ್ತು ಎಂದು ಖೇದಗೊಂಡರು. ಆದರೆ ಪಾಕಿಸ್ತಾನವು ಮಾಡಿದ್ದೇ ಬೇರೆ. ಕಾರ್ಗಿಲ್‌ ಕ್ಷೇತ್ರದಲ್ಲಿ ಪಾಕಿಸ್ತಾನಿ ಸೈನ್ಯವು ದಾಳಿ ನಡೆಸಿಯೇ ಇಲ್ಲ ಎಂದು ತನ್ನ ಮೊಂಡು ವಾದವನ್ನು ಮಂಡಿಸಿ ಹುತಾತ್ಮರಾದ ತನ್ನ ಸೈನಿಕರ ಹೆಣಗಳನ್ನು ಸ್ವೀಕರಿಸಲೂ ನಿರಾಕರಿಸಿತು. ಭಾರತೀಯ ಸೈನ್ಯವೇ, ತನ್ನ ಭವ್ಯ ಪರಂಪರೆಗನುಗುಣವಾಗಿ, ಸಕಲ ಮಿಲಿಟರಿ ಗೌರವಗಳೊಂದಿಗೆ ದಫ‌ನ ಮಾಡಿತು. 

Advertisement

ಕಾರ್ಗಿಲ್‌ ಯುದ್ಧವು ನಡೆದು ಇಂದಿಗೆ 19 ವರ್ಷ ಸಂದರೂ ಅದರ ನೆನಪು ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇದೇ ದಿವಸ ಸರಿಯಾಗಿ 19 ವರ್ಷಗಳ ಹಿಂದೆ ಅಂದರೆ 26 ಜುಲೈ, 1999ರಂದು ಭಾರತೀಯ ಸೇನೆಯು ಪಾಕಿಸ್ಥಾನದ ಹಿಡಿತದಲ್ಲಿದ್ದ ಕಾರ್ಗಿಲ್‌ನ ಎಲ್ಲಾ ಕ್ಷೇತ್ರಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಆದ್ದರಿಂದ ಪ್ರತಿ ವರ್ಷ ಜುಲೈ 26ನೇ ದಿನವನ್ನು ಕಾರ್ಗಿಲ್‌ ವಿಜಯೋತ್ಸವವೆಂದು ಆಚರಿಸುತ್ತೇವೆ. 

ಪಾಕಿಸ್ತಾನದ ಅಂದಿನ ಸೇನಾಧಿಕಾರಿಯಾಗಿದ್ದ ಜನರಲ್‌ ಪರ್ವಝ್ ಮುಶರ್ರಾಫ್ರ ದುಸ್ಸಾಹಸದ ಫ‌ಲವಾಗಿ 1999 ಮೇ ತಿಂಗಳಲ್ಲಿ ಪಾಕಿಸ್ಥಾನದ ಸೈನ್ಯವು ಯಾವುದೇ ಯುದ್ಧ ಘೋಷಣೆಯಿಲ್ಲದೆ, ಕಳ್ಳಮಾರ್ಗದಿಂದ ಕಾರ್ಗಿಲನ್ನು ವಶ ಪಡಿಸಿಕೊಂಡಿತು. ಈ ವಿಶ್ವಾಸದ್ರೋಹದಿಂದ ನೊಂದ ಭಾರತಕ್ಕೆ ಯುದ್ಧ ಮಾಡದೇ ಅನ್ಯ ಮಾರ್ಗವಿರಲಿಲ್ಲ. ಕ್ಷಿಪ್ರ ಕಾರ್ಯಾಚರಣೆಗೆ ಇಳಿದ ಭಾರತೀಯ ಸೈನ್ಯ ಮೇ 1999 ರಿಂದ ಜುಲೈ 1999ರ ವರೆಗೆ ನಡೆದ ಯುದ್ಧದಲ್ಲಿ ಪಾಕಿಸ್ಥಾನಿ ಸೈನ್ಯವನ್ನು ಬಗ್ಗುಬಡಿದು ಕಾರ್ಗಿಲ್‌ ವಿಭಾಗದ ಎಲ್ಲಾ ಆಯ ಕಟ್ಟು ಪ್ರದೇಶಗಳನ್ನು ಜುಲೈ 26, 1999ರ ಹೊತ್ತಿಗೆ ಮರಳಿ ವಶಕ್ಕೆ ತೆಗೆದುಕೊಂಡಿತು. ಈ ನಿರ್ಣಾಯಕ ಯುದ್ಧದಲ್ಲಿ ನಮಗೆ ಸರ್ವ ರೀತಿಯ ಸಹಾಯವನ್ನು ನೀಡಿದ್ದು ಇಸ್ರೇಲ್‌ ಎಂಬುದನ್ನು ಮರೆಯುವಂತಿಲ್ಲ. 

ಯುದ್ಧವೆಂದ ಮೇಲೆ ಅದರಲ್ಲಿ ಹಲವಾರು ರೋಚಕ ಮಜಲುಗಳು ಇರುತ್ತವೆ. ಕಾಲದ ಪರದೆಯ ಹಿಂದೆ ಕಣ್ಮರೆಯಾದ ಅಂತಹಾ ರೋಚಕ ಘಟನೆಯ ಒಂದು ನೋಟವನ್ನು ನಾವಿಲ್ಲಿ ನೋಡೋಣ. 

ಕಾರ್ಗಿಲ್‌ ಯುದ್ಧದಲ್ಲಿ ಭಾರತೀಯ ಹಾಗೂ ಪಾಕಿಸ್ಥಾನಿ ಸೈನ್ಯಗಳಲ್ಲಿ ಅಪಾರ ಸಾವುನೋವುಗಳು ಸಂಭವಿಸಿತ್ತು. ನಮ್ಮ ಸೈನ್ಯದಿಂದ ಹಿಗ್ಗಾಮುಗ್ಗಾ ಹೊಡೆತ ತಿಂದ ಪಾಕಿಸ್ಥಾನಿ ಸೈನ್ಯವಂತೂ ಪೂರ್ತಿಯಾಗಿ ಬಸವಳಿದು ಸೋಲೊಪ್ಪಿಕೊಂಡಿತ್ತು. 

Advertisement

ಅಂತಹ ಒಂದು ಸಂದರ್ಭದಲಿ, ಅಂದು ಜುಲೈ 5, 1999. ಪಾಕಿಸ್ಥಾನಿ ಸೈನ್ಯದ ನಾರ್ದರ್ನ್ ಲೈಟ್‌ ಇನ್‌ಫೆಂಟ್ರಿಯ (ಎನ್‌.ಎಲ್‌.ಐ) ಯೋಧ ಕ್ಯಾಪ್ಟನ್‌ ಕರ್ನಲ್‌ ಶೇರ್‌ಖಾನ್‌ (ಶೇರ್‌ಖಾನ್‌ ಪಾಕಿಸ್ಥಾನಿ ಸೇನೆಯ ಓರ್ವ ಕ್ಯಾಪ್ಟನ್‌ ಆದರೆ ಸ್ಥಳೀಯ ಜನರು ಪ್ರೀತಿ ಗೌರವದಿಂದ ಆತನನ್ನು ಕರ್ನಲ್‌ ಎಂದು ಕರೆಯುತ್ತಾರೆ (Karnal Sher Khan) ಎಂಬ ಯೋಧನೊಬ್ಬ ತನ್ನ 15-20 ಸಹಚರರೊಂದಿಗೆ ಭಾರತೀಯ ಸೈನ್ಯದ ಮೇಲೆ ಪ್ರತಿದಾಳಿ ಆರಂಭಿಸಿದ. ಎಲ್ಲರಿಗೂ ಕಾಣುವಂತೆ ಹಚ್ಚ ಹಗಲು ಹೊತ್ತಿನಲ್ಲೇ ಈತ ಕಾರ್ಗಿಲ್‌ನ ಟೈಗರ್‌ ಹಿಲ್‌ ಎಂಬ ಆಯ ಕಟ್ಟಿನ ಕ್ಷೇತ್ರದಲ್ಲಿ ಭಾರತೀಯ ಸೈನ್ಯದ ಮೇಲೆ ಮುಗಿಬಿದ್ದ. 

ಆ ಕ್ಷೇತ್ರದ ರಕ್ಷಣೆಗೆ ಇದ್ದದ್ದು ಭಾರತೀಯ ಸೈನ್ಯದ ಬಲಿಷ್ಠ ಸೇನಾ ಪಡೆಯಾದ 8ನೇ ಸಿಖ್‌ ಹಾಗೂ 18ನೇ ಗ್ರೇನೇಡಿಯರ್. ಪ್ರತಿದಾಳಿಯ ತೀರ್ವತೆ ಎಷ್ಟಿತೆಂದರೆ ಶೇರ್‌ ಖಾನ್‌ ಮತ್ತು ಅವನ ಸಹಚರರನ್ನು ಮಟ್ಟಹಾಕಲು 18ನೇ ಗ್ರೇನೇಡಿಯರ್ನ ಇನ್ನೂ ಒಂದು ಪ್ಲೆಟೂನನ್ನು ತರಿಸಿಕೊಳ್ಳುವ ಅನಿವಾರ್ಯತೆ ಭಾರತೀಯ ಸೈನ್ಯಕ್ಕೆ ಬಂತು. ಅತ್ಯಂತ ವೀರಾವೇಶದಿಂದ ಕಾದಾಡಿದ ಶೇರ್‌ಖಾನ್‌ ಕೊನೆಗೂ ಧರಾಶಾಯಿಯಾಗಿ ವೀರ ಮರಣವನ್ನಪ್ಪಿದ. ಆತನ ಎಲ್ಲಾ ಸಹಚ ರರನ್ನೂ ಹೊಡೆದುರುಳಿಸಲಾಯಿತು. ವೈರಿಗಳೂ ಮೆಚ್ಚುವಂತಹ ರೀತಿ ಪ್ರತಿರೋಧವನ್ನು ನೀಡಿ ಕೊನೆಗೂ ವೀರಮರಣವನ್ನು ಹೊಂದಿದ ಶೇರ್‌ಖಾನನ ಬಲಗೈ ಬೆರಳುಗಳು ರೈಫ‌ಲ್‌ನ ಟ್ರಿಗರ್‌ ಮೇಲೆಯೇ ಸುತ್ತಿಕೊಂಡಿದ್ದವು.  ತನ್ನ ದೇಶ (ಪಾಕಿಸ್ಥಾನ)ಕ್ಕೋಸ್ಕರ ಹುತಾತ್ಮನಾದ ಈ ವೀರ ಯೋಧನ ಸಾಹಸವನ್ನು ನೋಡಿ ಬೆರಗಾದ ಭಾರತೀಯ ಸೈನಿ ಕರು ಲೇ|ಜ| ಮೊಹಿಂದರ್‌ ಪುರಿಯವರ ನೇತೃತ್ವದಲ್ಲಿ  ಗಡಿದಾಟಿ ಬಂದು ಶೇರ್‌ ಖಾನನ ಪಾರ್ಥಿವ ಶರೀರಕ್ಕೆ ಭಾರತೀಯ ಸೈನ್ಯದ ಶ್ರೇಷ್ಠ ಪರಂಪರೆಗನುಗುಣವಾಗಿ ಗೌರವ ವಂದನೆಯನ್ನು ಸಲ್ಲಿಸಿದರು. 

ಅರೆಕ್ಷಣ ಭಾವುಕರಾದ ಭಾರತೀಯ ಯೋಧರು, ಛೇ! ಈತ ಭಾರತೀಯ ಸೈನ್ಯದಲ್ಲಿ ಇರಬೇಕಾಗಿತ್ತು ಎಂದು ಖೇದಗೊಂಡರು. ಆದರೆ ಹೇಡಿ ಪಾಕಿಸ್ತಾನವು ಮಾಡಿದ್ದೇ ಬೇರೆ. ಕಾರ್ಗಿಲ್‌ ಕ್ಷೇತ್ರದಲ್ಲಿ ಪಾಕಿಸ್ತಾನಿ ಸೈನ್ಯವು ದಾಳಿ ನಡೆಸಿಯೇ ಇಲ್ಲ ಎಂದು ತನ್ನ ಮೊಂಡು ವಾದವನ್ನು ಮಂಡಿಸಿ ಹುತಾತ್ಮರಾದ ತನ್ನ ಸೈನಿಕರ ಹೆಣಗಳನ್ನು ಸ್ವೀಕರಿಸಲೂ ನಿರಾಕರಿಸಿತು. ಯುದ್ಧದಲ್ಲಿ ಮಡಿದ ಎಲ್ಲಾ ಪಾಕಿಸ್ಥಾನಿ ಸೈನಿಕರ ಹೆಣಗಳನ್ನು ಭಾರತೀಯ ಸೈನ್ಯವೇ, ತನ್ನ ಭವ್ಯ ಪರಂಪರೆಗನುಗುಣವಾಗಿ, ಸಕಲ ಮಿಲಿಟರಿ ಗೌರವಗಳೊಂದಿಗೆ ದಫ‌ನ ಮಾಡಿತು. 

ಶೇರ್‌ ಖಾನನ ಬಲಿದಾನ ವ್ಯರ್ಥವಾಗಬಾರದು ಎಂದು ತಿಳಿದ ಭಾರತೀಯ ಸೈನಿಕರು ಈತನ ಸಾಹಸ ಗಾಥೆಯ ಬಗ್ಗೆ ಅಲ್ಲೇ ಒಂದು ಟಿಪ್ಪಣಿಯನ್ನು ಬರೆದು ಆತನಿಗೆ ಮರಣೋತ್ತರ ಪುರಸ್ಕಾರಕ್ಕೆ ಪಾಕಿಸ್ತಾನಕ್ಕೆ ಶಿಫಾರಸನ್ನೂ ಮಾಡಿದರು. ಕೊನೆಗೂ, 2010ರಲ್ಲಿ ಕ್ಯಾಪ್ಟನ್‌ ಶೇರ್‌ ಖಾನ್‌ನಿಗೆ ಪಾಕಿಸ್ತಾನ ತನ್ನ ಅತ್ಯುತ್ಛ ಮಿಲಿಟರಿ ಗೌರವವಾದ ನಿಶಾನ್‌ ಎ. ಹೈದರ್‌ ಪ್ರಶಸ್ತಿಯನ್ನು ನೀಡಿತು. 

1947ರಿಂದ 2018 ವರೆಗಿನ 71 ವರ್ಷಗಳ ಮಿಲಿಟರಿ ಇತಿಹಾಸದಲ್ಲಿ ಪಾಕಿಸ್ಥಾನವು ಇದುವರೆಗೂ ಕೇವಲ 10 ಮಂದಿ ವೀರಯೋಧರಿಗೆ ಮಾತ್ರ ನಿಶಾನ್‌-ಎ-ಹೈದರ್‌ ಪ್ರಶಸ್ತಿ ನೀಡಿದೆ ಅದೂ ಮರಣೋತ್ತರವಾಗಿ ಎಂಬುದರಿಂದ ಈ ಶೌರ್ಯ ಪುರಸ್ಕಾರದ ಮಹತ್ವ ಏನೆಂದು ತಿಳಿಯುತ್ತದೆ. 
ಜನರಲ್‌ ಪರ್ವೆಜ್‌ ಮುಶರ್ರಫ್ ಅವರು ತಮ್ಮ 2007ರಲ್ಲಿ ಬಿಡುಗಡೆಯಾದ ಪುಸ್ತಕ. “In The Line of Fire’ ನಲ್ಲಿ ಕಾರ್ಗಿಲ್‌ ಯುದ್ಧದಲ್ಲಿ 357 ಪಾಕಿಸ್ತಾನಿ ಸೈನಿಕರು ಹುತಾತ್ಮರಾದರು ಮತ್ತು 665 ಸೈನಿಕರು ಗಾಯಾಳುಗಳಾದರು ಎಂದು ಒಪ್ಪಿಕೊಂಡರು. ಆದರೇ ಹೇಡಿ ಪಾಕಿಸ್ಥಾನ ಮಾತ್ರ ಯಾವತ್ತೂ ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. 

CNN-IBNಗೆ ನೀಡಿದ ವಿಡಿಯೋ ಸಂದರ್ಶನವೊಂದರಲ್ಲಿ, ಕ್ಯಾಪ್ಟನ್‌ ಶೇರ್‌ಖಾನನ ಸಹೋದರನಾದ ಸಿಕಂದರ್‌ ಶೇಖ್‌ ಹೇಳಿದ ಮಾತು ಎಷ್ಟು ಮಾರ್ಮಿಕವಾಗಿತ್ತು ಎಂಬುದನ್ನು ಗಮನಿಸಿ “ಅಲ್ಲಾಹುವಿನ ಕೃಪೆಯಿಂದ ಭಾರತೀಯ ಸೇನೆ ಹೇಡಿಯಲ್ಲ ಎಂದು ಸಾಬೀತು ಪಡಿಸಿದರು. ಯಾರಾದರೂ ಭಾರತೀಯ ಸೈನ್ಯವು ಹೇಡಿ ಎಂದರೆ ನಾನು ಮಾತ್ರ ಒಪ್ಪಿಕೊಳ್ಳುವುದಿಲ್ಲ.’ 
ಹೆಮ್ಮೆ ಪಡಬೇಕು ನಾವು ಭಾರತೀಯ ಸೇನೆ ಮತ್ತು ಅದರ ಭವ್ಯ ಪರಂಪರೆಯ ಬಗ್ಗೆ. 

ರಮೇಶ್‌ ಯು.

Advertisement

Udayavani is now on Telegram. Click here to join our channel and stay updated with the latest news.

Next