ಅದು 2004. ಬಯೋಕಾನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವಿಶಾಲ್ ಪುಟ್ಟಣ್ಣ ಹೊರಗೆ ಬಂದು “ಅಗಮ್ಯ’ ಎಂಬ ಸಿನಿಮಾ ನಿರ್ದೇಶಿಸಿ, ಮರೆಯಾಗಿದ್ದರು. ಪುನಃ 2013 ರಲ್ಲಿ ಮತ್ತದೇ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲೊಬ್ಬ ಗೆಳೆಯ ಸಾಥ್ ಕೊಟ್ಟಿದ್ದರಿಂದ ಮತ್ತೆ ಗಾಂಧಿನಗರಕ್ಕೆ ಬಂದು “ಮೇಘ ಅಲಿಯಾಸ್ ಮ್ಯಾಗಿ’ ಅನ್ನೋ ಸಿನಿಮಾ ಮಾಡಿ, ಇದೀಗ ಬಿಡುಗಡೆಗೆ ಅಣಿಯಾಗಿದ್ದಾರೆ. ವಿಶಾಲ್ ಪುಟ್ಟಣ್ಣ ಮತ್ತೆ ನಿರ್ದೇಶಕ ಆಗೋಕೆ ಕಾರಣ ಆಗಿರೋದು ನಿರ್ಮಾಪಕ ವಿನಯ್‌ಕುಮಾರ್. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶಾಸಕ ಅಶ್ವತ್ಥ್ನಾರಾಯಣ್ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭ ಹಾರೈಸಿದರು.
“ಮೇಘ ಅಲಿಯಾಸ್ ಮ್ಯಾಗಿ’ ಮಹಿಳೆಗೆ ಸಂಬಂಧಿಸಿದ ಚಿತ್ರವಾದ್ದರಿಂದ ಅಂದು ನಿರ್ದೇಶಕ ವಿಶಾಲ್ ಪುಟ್ಟಣ್ಣ , ರಾಜ್ಯದ ಚಿತ್ರದುರ್ಗ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಮಹಿಳಾ ಸಾಧಕರಾದ ಡಾ.ರಮ್ಯ, ಪ್ರೀತಿ, ಪದ್ಮಶ್ರೀ ಹಾಗೂ ರಂಜನಾ ಅವರನ್ನು ಆಹ್ವಾನಿಸಿ, ಸನ್ಮಾನಿಸಿದರು. ನಂತರ ಮಾತಿಗಿಳಿದ ವಿಶಾಲ್, “ಇದು ಹೆಣ್ಣಿನ ಮನಸ್ಸಿನ ಭಾವೋದ್ವೇಗ, ಅವಳು ತನ್ನ ಇರುವಿಕೆಯನ್ನು ಈ ಜಗತ್ತಿಗೆ ತೋರಿಸಲು ಪಡುವ ಕಷ್ಟ, ಅವಳ ಮನಸ್ಸಿನ ಅತಿರೇಖ ಭಾವನೆಗಳನ್ನು ಇಲ್ಲಿ ತೋರಿಸಲಾಗುತ್ತಿದೆ’ ಎಂದು ಹೇಳಿಕೊಂಡರು ನಿರ್ದೇಶಕರು.
ನಿರ್ಮಾಪಕ ವಿನಯ್‌ಕುಮಾರ್‌ಗೆ ಒಂದು ರಾತ್ರಿ ನಿರ್ದೇಶಕರು, ಈ ಕಥೆಯ ಒನ್‌ಲೈನ್ ಹೇಳಿದಾಗ, ಆಗಲೇ ಈ ಸಿನಿಮಾ ಮಾಡಬೇಕು ಅನಿಸಿತಂತೆ. ಚಿತ್ರಕ್ಕೆ ತೇಜ್‌ಗೌಡ ಹೀರೋ. ಇವರಿಗೆ ಇಲ್ಲಿ ಒಳ್ಳೇ ಪಾತ್ರ ಸಿಕ್ಕಿದೆಯಂತೆ. ಕೇರಳ ಬೆಡಗಿ ನೀತು ಬಾಲ ಚಿತ್ರದ ನಾಯಕಿ. ಒಂದು ವರ್ಷದಿಂದಲೂ ಈ ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ನಾವು ಅಂದುಕೊಂಡಂತೆಯೇ ಸಿನಿಮಾ ಮೂಡಿಬಂದಿದೆ. ಇಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಚಿತ್ರ ಗೆಲುವು ಕೊಡಲಿದೆ ಅಂದರು ನೀತು.
ಇನ್ನು, ಸುಕೃತಾ ವಾಗ್ಲೆ ಇಲ್ಲಿ ಟಾಮ್‌ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅಂದಹಾಗೆ, ಅವರಿಗೆ ಇಲ್ಲಿ ಮೊದಲ ಬಾರಿಗೆ ಸೋಲೋ ಸಾಂಗ್‌ನಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗಿದೆಯಂತೆ. ಸಿಂಗರ್ ಆಗಿದ್ದ ಅತೀಶಯ ಜೈನ್‌ಗೆ ಈ ಚಿತ್ರ ಸಂಗೀತ ನಿರ್ದೇಶಕನ ಪಟ್ಟ ಕೊಟ್ಟಿದೆಯಂತೆ. ಅವರಿಲ್ಲಿ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರಂತೆ.
ಅಂದು ಅಶ್ವತ್ಥ್ ನಾರಾಯಣ್ ಚಿತ್ರತಂಡಕ್ಕೆ ಶುಭಕೋರಿದರು. ಸಾಯಿ ಆಡಿಯೋದ ದೀಪಾ ಇತರರು ಇದ್ದರು.