ನನ್ನ ತಾಯಿಗೆ ಅತೀವ ತಾಳ್ಮೆ. ನನ್ನ ತಂದೆಯ ಯಾವ ಮಾತಿಗೂ ಮರು ಮಾತನಾಡುತ್ತಿರಲಿಲ್ಲ. ತನ್ನಷ್ಟಕ್ಕೇ ಕೆಲಸದಲ್ಲಿ ಬ್ಯುಸಿಯಾಗಿರುತ್ತಿದ್ದಳು, ಕೆಲವೊಮ್ಮೆ ಅಮ್ಮನನ್ನು ಮತ್ತೂಬ್ಬರ ಎದುರು ಅಪಹಾಸ್ಯ ಮಾಡುತ್ತಿದ್ದ ಪ್ರಸಂಗಗಳೂ ಇದ್ದವು. ಅಂಥ ಸಂದರ್ಭದಲ್ಲೆಲ್ಲ ನನ್ನ ಕೋಪವನ್ನು ಅಮ್ಮನ ಬಳಿಯೇ ತೋರಿಸಿಕೊಳ್ಳುತ್ತಿದ್ದೆ. ಪ್ರತಿಯೊಂದಕ್ಕೂ ಸುಮ್ಮನಿರುವುದರಿಂದಲೇ ಹೀಗೆ ಎಂದು ಬುದ್ಧಿ ಹೇಳಲು ಹೋಗುತ್ತಿದ್ದೆ. ಆಗೆಲ್ಲ ಅಮ್ಮ ಮುಗುಳ್ನಗು ಬೀರಿ, ಏನಾದರೂ ತಿನ್ನಲಿಕ್ಕೆ ಕೈಗೆ ಕೊಟ್ಟು ವಿಷಯ ಮರೆಸುತ್ತಿದ್ದಳು.
ಒಮ್ಮೆ ನನ್ನ ಮನೆಯಲ್ಲಿ ಇಂಥದ್ದೇ ಒಂದು ಸಂದರ್ಭ ಬಂದು ಪತಿಯೊಂದಿಗೆ ಜಗಳವಾಡಿದೆ. ನನಗೆ ತೀರಾ ಬೇಸರವೆನಿಸಿತು. ಏನು ಮಾಡುವುದೆಂದೇ ತೋಚಲಿಲ್ಲ, ನೇರವಾಗಿ ಅಮ್ಮನ ಮನೆಗೆ ಹೋದೆ. ಅಮ್ಮ ಎಂದಿನಂತೆ ಮುಗುಳ್ನಗೆಯಿಂದ ಸ್ವಾಗತಿಸಿದಳು. ನಾನು ಎಲ್ಲವನ್ನೂ ಹೇಳಿಕೊಂಡೆ. ಆಗಲೂ ಅಮ್ಮನ ಮುಖ ದಲ್ಲಿನ ಚಹರೆ ಬದಲಾಗಲಿಲ್ಲ. ಒಂದು ಒಳ್ಳೆಯ ಕಾಫಿ ಮಾಡಿಕೊಟ್ಟಳು. ನಾನು ಅದನ್ನು ಕುಡಿಯುವಾಗ, ಹೇಗಿದೆ ಕಾಫಿ? ಅದರ ಪರಿಮಳ? ಎಂದು ಕೇಳಿದಳು.
ಆಗಲೇ ಕಾಫಿಯ ಕೊನೆಯಲ್ಲಿದ್ದೆ. ಕೆಳಗೆ ಉಳಿದಿದ್ದ ಚರಟವನ್ನು ಬಿಟ್ಟು, ಚೆನ್ನಾಗಿದೆ ಎಂದೆ. ಅದಕ್ಕೆ ಕಾಫಿ ಚೆನ್ನಾಗಿದೆ, ಪರಿಮಳ? ಎಂದು ಮತ್ತೆ ಪ್ರಶ್ನೆ ಕೇಳಿದಳು. ನನಗೆ ವಿಚಿತ್ರವೆನಿಸಿದರೂ ಎರಡೂ ಚೆನ್ನಾಗಿದೆ ಎಂದೆ. ಅದಕ್ಕೆ ಪ್ರತಿಯಾಗಿ ಅಮ್ಮ, “ಪುಟ್ಟಿ, ಕಾಫಿಯ ಸೌಂದರ್ಯ ಎರಡರಲ್ಲಿದೆ. ಅದನ್ನು ಅನುಭವಿಸುವುದರಲ್ಲಿ ಮತ್ತು ಅದನ್ನು ಆಸ್ವಾದಿಸುವುದಲ್ಲಿ. ಕಾಫಿಯ ರುಚಿ ಆಸ್ವಾದನೆಯಲ್ಲಿದೆ, ಪರಿಮಳದ ಸೊಬಗು ಅನುಭವಿಸುವುದರಲ್ಲಿದೆ. ಪರಿಮಳವನ್ನು ಅನುಭವಿಸಲು ಆಸ್ವಾದನೆಗಿಂತ ಹೆಚ್ಚು ತಾಳ್ಮೆಯ ಅಗತ್ಯವಿದೆ’ ಎಂದಳು.
ಅವಳ ಮಾತುಗಳನ್ನು ಕೇಳಿ ಒಬ್ಬ ಸಂತ ನುಡಿಯುತ್ತಿದ್ದಂತೆ ಎನಿಸಿತು. ಮರುದಿನವೇ ಸಂತೋಷದಿಂದ ನನ್ನ ಮನೆಗೆ ವಾಪಸು ಹೋದೆ. ಅಮ್ಮನ ತಾಳ್ಮೆಯ ಶಕ್ತಿ ತಿಳಿದದ್ದೇ ಆಗ.
-ಸುಧಾ, ಸಾಲಿಗ್ರಾಮ