Advertisement

ದೈವದ ಕಥೆ ಯಕ್ಷ ರಂಗಕ್ಕೆ ಹೊಸತೇನಲ್ಲ; ‘ಕಾಂತಾರ’ಪ್ರಸಂಗವಾಗಲಿದೆಯೇ?

07:53 PM Oct 12, 2022 | Team Udayavani |

ಯಕ್ಷಗಾನ ರಂಗಕ್ಕೆ ಶತಮಾನಗಳ ಇತಿಹಾಸವಿದ್ದು, ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಆರಾಧನಾ ಕಲೆಗಳಲ್ಲಿ ಒಂದು. ಕಲೆ, ಕಲಾವಿದ ಎನ್ನುವ ವಿಚಾರ ಬಿಟ್ಟರೆ ಸಿನಿಮಾ, ಯಕ್ಷಗಾನ ಮತ್ತು ಭೂತಾರಾಧನೆಯಲ್ಲಿ ಅನೇಕ ವ್ಯತ್ಯಾಸಗಳಿವೆ. ಸಿನಿಮಾ ರಂಗದ ಕಥೆಗಳು ಅನಿವಾರ್ಯ ಕಾರಣಕ್ಕೆ ಯಕ್ಷಗಾನ ರಂಗಕ್ಕೆ ಬಂದಿರುವ ಹಲವು ನಿದರ್ಶನಗಳಿವೆ. ಹಾಗೆಯೇ ದೈವಾರಾಧನೆ, ಭೂತಗಳ ಮಹತ್ವ ಸಾರುವ ಅನೇಕ ಪ್ರಸಂಗಗಳು ಯಕ್ಷಗಾನ ರಂಗದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರಿಗೆ ಹತ್ತಿರವಾಗಿವೆ.

Advertisement

ಯಕ್ಷಗಾನ ರಂಗದಲ್ಲಿ ದೈವಾರಾಧನೆಯ ಮಹತ್ವ ಸಾರುವ ಅನೇಕ ಪ್ರಸಂಗಗಳು ಈಗಾಗಲೇ ಪ್ರದರ್ಶನಗೊಂಡಿವೆ. ಅನೇಕ ಸೂಪರ್ ಹಿಟ್ ಚಲನಚಿತ್ರಗಳೂ ಯಕ್ಷಗಾನ ಪ್ರಸಂಗಗಳಾಗಿ ರಂಗಮಂಚವನ್ನೇರಿವೆ. ದಶಕಗಳ ಹಿಂದೆ ಸಾಹಸಸಿಂಹ ಡಾ.ವಿಷ್ಣುವರ್ಧನ್, ಸೌಂದರ್ಯ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಆಪ್ತಮಿತ್ರ’ ಚಿತ್ರದ ಕಥೆ ‘ನಾಗವಲ್ಲಿ’ ಎಂಬ ಹೆಸರಿನಲ್ಲಿ ಪ್ರದರ್ಶನಗೊಂಡು ಅಪಾರ ಜನಮನ್ನಣೆ ಗಳಿಸಿತ್ತು.

ಸೂಪರ್ ಹಿಟ್ ಚಲನಚಿತ್ರ ‘ಬಾಹುಬಲಿ’ಯ ಕಥೆಯನ್ನೂ ಯಕ್ಷಗಾನ ಪ್ರಸಂಗವಾಗಿ ರಂಗದಲ್ಲಿ ಪ್ರದರ್ಶಿಸಲಾಗಿತ್ತು. ಇಂತಹ ಪ್ರಸಂಗಗಳ ಕುರಿತಾಗಿ ಸಂಪ್ರದಾಯ ಬದ್ದ ಪ್ರಸಂಗಗಳ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು.ಆದರೂ ಯುವ ಜನಾಂಗ ರಂಗಸ್ಥಳದ ಎದುರು ಭಾರಿ ಸಂಖ್ಯೆಯಲ್ಲಿ ಸೇರುವಂತೆ ಸಿನಿಮಾ ಕಥೆಗಳ ಪ್ರಸಂಗಗಳು ಮಾಡಿದ್ದವು. ಡೇರೆ ಮೇಳಗಳಿಗೆ ಇಂತಹ ಪ್ರಸಂಗಗಳು ಹೆಚ್ಚಿನ ಆರ್ಥಿಕ ಲಾಭವನ್ನೂ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದವು.ಬಯಲಾಟ ಮೇಳಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದವು.

ಸದ್ಯ ಕರಾವಳಿಯ ದೈವಾರಾಧನೆಯ ಮೂಲ ಕಥೆಯನ್ನಾಧರಿಸಿ, ದೈವಗಳ ಮಹತ್ವಿಕೆ ಸಾರಿರುವ ಬ್ಲಾಕ್ ಬಸ್ಟರ್ ಹಿಟ್ ‘ಕಾಂತಾರ’ ಚಿತ್ರ ಯಕ್ಷ ರಂಗಕ್ಕೆ ಬರಲಿದೆಯೆ ಎನ್ನುವ ಕುತೂಹಲ ಯುವ ಯಕ್ಷಾಭಿಮಾನಿಗಳಲ್ಲಿ ಮೂಡಿದೆ.

ದೈವಗಳ ವಿಚಾರ ಬಳಕೆಗೆ ವಿರೋಧ
‘ಕಾಂತಾರ’ ಸಿನಿಮಾ ಬಿಡುಗಡೆಗೂ, ಭಾರಿ ಜನಮನ್ನಣೆ ಪಡೆಯುವ ಮುನ್ನವೇ ಯಕ್ಷಗಾನ ರಂಗದಲ್ಲಿ ಅತೀ ಎನಿಸುವಂತೆ ದೈವಗಳ ಪಾತ್ರಗಳನ್ನು ರಂಗಕ್ಕೆ ತಂದಿರುವ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹಲವರು ದೈವಾರಾಧನೆಯನ್ನು ಯಕ್ಷಗಾನದಲ್ಲಿ ಬಳಕೆ ಮಾಡಬಾರದು. ಅಲ್ಲಿ ಬಳಸಲಾಗುವ ಕೆಲ ಧರ್ಮ ಸೂಕ್ಷ್ಮ ವಿಚಾರಗಳನ್ನು ಯಕ್ಷಗಾನ ರಂಗದಲ್ಲಿ ಪ್ರದರ್ಶಿಸಬಾರದು ಎಂಬ ಆಕ್ಷೇಪ ವ್ಯಕ್ತವಾಗಿತ್ತು.

Advertisement

ದಶಕಗಳಿಂದ ಪ್ರತಿವರ್ಷವೂ ದೈವಗಳ ಕುರಿತಾಗಿನ ವಿನೂತನ ಪ್ರಸಂಗಗಳು ಯಕ್ಷ ರಂಗದಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಕೆಲ ಪ್ರೇಕ್ಷಕರೂ ಅಂತಹ ಪ್ರಸಂಗಗಳಿಗಾಗಿಯೇ ಕಾದು ನಿಲ್ಲುತ್ತಿದ್ದರು. ಇನ್ನೇನು ನವೆಂಬರ್ ಮಧ್ಯ ಭಾಗದಲ್ಲಿ ಯಕ್ಷಗಾನ ಮೇಳಗಳು ತಿರುಗಾಟ ಆರಂಭಿಸಲಿದ್ದು,ಜನಮನ್ನಣೆ ಪಡೆದಿರುವ ‘ಕಾಂತಾರ’ ಚಿತ್ರ ಯಕ್ಷ ಭೂಮಿಕೆಗೆ ಹೊಂದುವಂತಹ ಕಥೆಯಾಗಿ ರಂಗಕ್ಕೆ ಬರಲಿದೆಯೇ? ಪ್ರಸಂಗಕರ್ತರು ಆ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೋ ಎನ್ನುವ ಕುರಿತು ಯಕ್ಷ ಪ್ರೇಮಿಗಳಲ್ಲಿ ಕುತೂಹಲ ಮೂಡಿದೆ.

ವಿಷ್ಣುದಾಸ್ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next