ಕನ್ನಡದಲ್ಲಿ ಈಗಾಗಲೇ “ರಂಗ ಎಸ್‌ಎಸ್‌ಎಲ್‌ಸಿ’, “ರಂಗನ್ ಸ್ಟೈಲ್’ ಚಿತ್ರಗಳು ಬಂದಿರುವುದು ಗೊತ್ತು. ಈಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೂಂದು “ರಂಗ’ನ ಕುರಿತ ಚಿತ್ರ ಬರುತ್ತಿದೆ ಅದರ ಹೆಸರು “ರಂಗ ಬಿ.ಇ, ಎಂ.ಟೆಕ್’. ಅಂದಹಾಗೆ, ಈಗ ಬರುತ್ತಿರುವ “ರಂಗ’ನಿಗೂ ಹಿಂದೆ ಬಂದಿದ್ದ “ರಂಗ’ನಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಮಾಸ್ ನೇಮ್ ಆಗಿರುವುದರಿಂದ ಚಿತ್ರದ ಕಥೆಗೆ ಹೊಂದಾಣಿಕೆ ಆಗುತ್ತದೆ ಎನ್ನುವ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ ಇಂಥದ್ದೊಂದು ಮಾಸ್ ಟೈಟಲ್ ಇಟ್ಟಿದೆ.
ಇನ್ನು ಈ “ರಂಗ’ನ ರಂಗು ರಂಗಿನ ಕಥೆಯನ್ನು ಮೆಚ್ಚಿ ಅದನ್ನು ಚಿತ್ರವಾಗಿಸಲು ಹಣ ಹೂಡುತ್ತಿರುವವರು ನಿರ್ಮಾಪಕ ಟಿ.ಆರ್ ಚಂದ್ರಶೇಖರ್. ಈಗಾಗಲೇ “ಚಮಕ್’ ಹಾಗೂ “ಅಯೋಗ್ಯ’ ಚಿತ್ರಗಳನ್ನು ನಿರ್ಮಾಣ ಮಾಡಿರುವ ಚಂದ್ರಶೇಖರ್, ತಮ್ಮ “ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್‌ನಲ್ಲಿ “ರಂಗ ಬಿ.ಇ, ಎಂ.ಟೆಕ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ನೀನಾಸಂ ಸತೀಶ್ ಕ್ಲಾಪ್ ಮಾಡಿ, ಶುಭ ಹಾರೈಸಿದ್ದು ವಿಶೇಷ. ಇಂದಿನ ಜನರೇಷನ್‌ನ ಹೈಟೆಕ್ ಸಸ್ಪೆನ್ಸ್ ಲವ್ ಸ್ಟೋರಿ ಈ ಚಿತ್ರದಲ್ಲಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯುಲಿದೆ.
“ಕೆಂಡಸಂಪಿಗೆ’ ಹಾಗು “ಕಾಲೇಜ್ ಕುಮಾರ’ ಚಿತ್ರಗಳಲ್ಲಿ ನಾಯಕನಾಗಿದ್ದ ವಿಕ್ಕಿ ವರುಣ್ ಈ ಚಿತ್ರದಲ್ಲಿ ರಂಗನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ರಂಗನಿಗೆ ನಾಯಕಿಯಾಗಿ “ಮುಂಗಾರು ಮಳೆ-2′ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶಿಲ್ಪಾ ಮಂಜುನಾಥ್ ಜೋಡಿಯಾಗುತ್ತಿದ್ದಾರೆ. ಇನ್ನು ಅನೇಕ ಹಿರಿಯ, ಕಿರಿಯ ಕಲಾವಿದರ ತಾರಾಗಣ ಈ “ರಂಗ’ನ ಬಳಗದಲ್ಲಿದೆ.
ಸುಮಾರು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಸುಮಾರು 25ಕ್ಕೂ ಹೆಚ್ಚಿನ ಚಿತ್ರಗಳಿಗೆ ಕೆಲಸ ಮಾಡಿರುವ ನಾಗೇಶ್ ಕಾರ್ತಿಕ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಚೊಚ್ಚಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿ. ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ. “ರಂಗ’ನ ರಂಗಿನ ದೃಶ್ಯಗಳನ್ನು ಭರತ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲಿದ್ದಾರೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಿದ್ದು, ಜನವರಿ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿದೆ.