Advertisement

ಶಾಲೆಗಳ ಬಾಗಿಲು ತೆರೆಯುತ್ತಿರುವ ಹಲವು ರಾಷ್ಟ್ರಗಳ ಕಥೆ

12:54 AM Sep 12, 2020 | mahesh |

ತಮ್ಮಲ್ಲಿ ಕೋವಿಡ್‌ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಜಗತ್ತಿನ 134 ರಾಷ್ಟ್ರಗಳು ಶಾಲೆಗಳನ್ನು ಮುಚ್ಚಿಬಿಟ್ಟವು. ಇವುಗಳಲ್ಲೀಗ 105 ರಾಷ್ಟ್ರಗಳಲ್ಲಿ ಶಾಲೆಗಳು ಭಾಗಶಃ ಪುನಾರಂಭಗೊಂಡಿವೆ. ಆದರೆ, ಶಾಲೆಗಳಿಗೆ ಅನುಮತಿ ನೀಡಿರುವ ಎಲ್ಲ ದೇಶಗಳೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಿವೆ. ಜರ್ಮನಿ ಮತ್ತು ಇಸ್ರೇಲ್‌ನ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಸೋಂಕುಪತ್ತೆಯಾಗಿದ್ದಕ್ಕಾಗಿ ತರಗತಿಯ ವಿದ್ಯಾರ್ಥಿಗಳನ್ನೆಲ್ಲ ಕ್ವಾರಂಟೈನ್‌ಗೆ ಕಳುಹಿಸುತ್ತಿರುವ ಘಟನೆಗಳೂ ವರದಿಯಾಗುತ್ತಿವೆ. ವಿದ್ಯಾರ್ಥಿಗಳಿಗೆ ಕೋವಿಡ್‌ನಿಂದಾಗಿ ಅಪಾಯ ಆಗುವ ಸಾಧ್ಯತೆ ಕಡಿಮೆಯೇ ಇದೆಯಾದರೂ, ವಿದ್ಯಾರ್ಥಿಗಳು ಕೋವಿಡ್‌ನ‌ ವಾಹಕರಾಗಿ ಸೋಂಕು ಹರಡುವ ಆತಂಕ ಅಧಿಕವಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಶೈಕ್ಷಣಿಕ ರಂಗವನ್ನು ಮರು ಹಳಿಗೆ ಏರಿಸಲು ಯಾವ ರಾಷ್ಟ್ರಗಳೆಲ್ಲ ಪ್ರಯತ್ನಿಸುತ್ತಿವೆ ಎನ್ನುವ ಮಾಹಿತಿ ಇಲ್ಲಿದೆ…

Advertisement

ಅಮೆರಿಕನ್‌ ವಿದ್ಯಾರ್ಥಿಗಳಲ್ಲಿ ಹೆಚ್ಚಾಯ್ತು ಕೋವಿಡ್ ಸೋಂಕು
ಅಮೆರಿಕದಲ್ಲಿ ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ವ್ಯಾಪಕ‌ ಪ್ರತಿರೋಧ ಎದುರಾಗುತ್ತಿದೆ. ಅಮೆರಿಕನ್‌ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ವರದಿಯು, “ಕಳೆದ ನಾಲ್ಕು ವಾರದಲ್ಲಿ ಅಮೆರಿಕದಲ್ಲಿ ಕೋವಿಡ್‌ ಸೋಂಕಿತ ವಿದ್ಯಾರ್ಥಿಗಳ ಪ್ರಮಾಣ 90 ಪ್ರತಿಶತ ಅಧಿಕವಾಗಿದೆ’ ಎನ್ನುತ್ತಿದೆ. (ಆಗಸ್ಟ್‌ 2ನೇ ವಾರದ ವೇಳೆಗೆ ಸುಮಾರು 1 ಲಕ್ಷ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು). ಫ್ಲೋರಿಡಾ, ಜಾರ್ಜಿಯಾ ಮತ್ತು ಮಿಸ್ಸಿಸ್ಸಿಪಿಯ ಹಲವಾರು ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಸೋಂಕು ಹರಡಿರುವುದು ಪತ್ತೆಯಾಗಿದ್ದು, ಅಲ್ಲಿನ ವಿದ್ಯಾರ್ಥಿಗಳನ್ನೆಲ್ಲ ಕ್ವಾರಂಟೈನ್‌ ಮಾಡಲಾಗಿದೆ.

ಇಸ್ರೇಲ್‌: ನಿರ್ಬಂಧ ಸಡಿಲಿಸಿ ಎಡವಟ್ಟು
ಆರಂಭಿಕ ಸಮಯದಲ್ಲಿ ಕೋವಿಡ್‌ ತಡೆಯಲ್ಲಿ ಯಶಸ್ಸು ಕಾಣುತ್ತಿದ್ದಂತೆಯೇ ಇಸ್ರೇಲ್‌ ಸರಕಾರ ಮೇ ತಿಂಗಳಲ್ಲೇ ಸೀಮಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುವುದಕ್ಕೆ ಅನುಮತಿ ನೀಡಿತು. ಜೂನ್‌- ಜುಲೈ ತಿಂಗಳಲ್ಲಿ ಸರ್ಕಾರ ಎಲ್ಲಾ ತರಗತಿಗಳಿಗೂ ಅನುಮತಿ ನೀಡಿದ್ದಷ್ಟೇ ಅಲ್ಲದೇ, ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಮೇಲಿದ್ದ ನಿರ್ಬಂಧಗಳನ್ನೂ ತೆಗೆದುಹಾಕಿತು. ಇದಾದ ಕೆಲವೇ ದಿನಗಳಲ್ಲಿ ಅನೇಕ ಶಾಲೆಗಳಲ್ಲಿ ಕೆಲ ವಿದ್ಯಾರ್ಥಿಗಳು ಕೋವಿಡ್‌ ಪಾಸಿಟಿವ್‌ ಎಂದು ಪತ್ತೆಯಾಯಿತು. ಈ ಕಾರಣಕ್ಕಾಗಿ ಸಾವಿರಾರು ವಿದ್ಯಾರ್ಥಿಗಳನ್ನು ಕ್ವಾರಂಟೈನ್‌ಗೆ ಕಳುಹಿಸಲಾಯಿತು. ಈಗ ಹಾಟ್‌ಸ್ಪಾಟ್‌ನಲ್ಲಿರುವ ಶಾಲೆಗಳ ಮೇಲೆ ಆರಂಭದಲ್ಲಿದ್ದ ನಿರ್ಬಂಧಗಳನ್ನೇ ಮತ್ತೆ ವಿಧಿಸಲಾಗಿದೆ.

ಜಪಾನ್‌: ನಿರ್ದೇಶನ ಪಾಲಿಸದಿದ್ದರೆ ಶಾಲೆ ಬಂದ್‌
ಜಪಾನ್‌ನಲ್ಲಿ ಹಾಟ್‌ಸ್ಪಾಟ್‌ಗಳನ್ನು ಹೊರತುಪಡಿಸಿ ಉಳಿದೆಡೆ ಶಾಲೆಗಳು ನಡೆಯುತ್ತಿವೆ. ಪೋಷಕರು ನಿತ್ಯ ತಮ್ಮ ಮಕ್ಕಳ ಉಷ್ಣಾಂಶ ಪರೀಕ್ಷಿಸಿ, ಶಾಲೆಯ ವೆಬ್‌ಸೈಟ್‌ನಲ್ಲಿ ನಮೂದಿಸಬೇಕು. ಸರಕಾರ 28 ಅಂಶಗಳ ನಿಯಮಾವಳಿ ರೂಪಿಸಿದ್ದು, ಅದನ್ನು ಪಾಲಿಸಲು ವಿಫ‌ಲವಾಗುವ ಶಾಲೆಗಳನ್ನು ಬಂದ್‌ ಮಾಡಲಾಗುತ್ತಿದೆ. ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಮೂರ್ನಾಲ್ಕು ಗುಂಪುಗಳಾಗಿ ವಿಂಗಡಿಸಿ, ಪ್ರತ್ಯೇಕ ಸಮಯಗಳಲ್ಲಿ ಪಾಠ ಮಾಡಲಾಗುತ್ತಿದೆ. ಕ್ಲಾಸ್‌ರೂಮ್‌ನಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎಲ್ಲ ಶಾಲೆಗಳಲ್ಲೂ ಮಾಸ್ಕ್ಗಳ ಸ್ಟಾಕ್‌ ಇರುವುದು ಕೂಡ ಕಡ್ಡಾಯ. ತರಗತಿಯ ಶೌಚಾಲಯಗಳನ್ನು ಎರಡು ಗಂಟೆಗೊಮ್ಮೆ ಸ್ವತ್ಛಗೊಳಿಸಬೇಕು.

ಸ್ವೀಡನ್‌: ವಿದ್ಯಾರ್ಥಿ ಕುಟುಂಬದ ಹೆಲ್ತ್‌ ರಿಪೋರ್ಟ್‌ ಬೇಕು!
ಆರಂಭಿಕ ಸಮಯದಲ್ಲಿ ಕೋವಿಡ್‌ನಿಂದಾಗಿ ಹೆಚ್ಚು ಬಾಧೆಗೊಳಗಾದರೂ ಸ್ವೀಡನ್‌ ಕಟ್ಟುನಿಟ್ಟಾದ ನಿರ್ಬಂಧಗಳನ್ನೇನೂ ಜಾರಿಗೊಳಿಸಲಿಲ್ಲ. ಅಲ್ಲಿನ ಶಾಲೆ ಕಾಲೇಜುಗಳು ಕೂಡ ತೆರೆದೇ ಇವೆ. ಜೂನ್‌-ಜುಲೈ ತಿಂಗಳಲ್ಲಿ ಬೇಸಗೆ ರಜೆಯ ನಿಮಿತ್ತ ಶಾಲೆಗಳನ್ನು ಮುಚ್ಚಲಾಗಿತ್ತಾದರೂ, ಈಗ ಬಹುತೇಕ ತರಗತಿಗಳು ಆರಂಭವಾಗಿವೆ. ಆದರೆ ಈಗ ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿನ ಕಿಂಡರ್‌ ಗಾರ್ಡನ್‌, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ಪಾಠ ಮಾಡುವಂತೆ ಸರಕಾರ ಸಲಹೆ ನೀಡಿದೆ. ಅಲ್ಲದೇ, ತರಗತಿ ನಡೆಸುವ ಶಾಲೆಗಳಿಗೆ ಪ್ರತಿ 15 ದಿನಗಳಿಗೊಮ್ಮೆ ವಿದ್ಯಾರ್ಥಿಗಳ ಮನೆಯವರ ಹೆಲ್ತ್‌ ರಿಪೋರ್ಟ್‌ ಕೂಡ ಕಡ್ಡಾಯ ಸಲ್ಲಿಕೆಯಾಗಬೇಕು.

Advertisement

ಭಾರತದಲ್ಲಿ ಈಗಲೂ ಗೊಂದಲ
ಸೆಪ್ಟಂಬರ್‌ 21ರಿಂದ ಶಾಲೆಗಳನ್ನು ಭಾಗಶಃ ತೆರೆಯಬಹುದು ಎಂದು ಕೇಂದ್ರ ಸರಕಾರ ಅನ್‌ಲಾಕ್‌ 4.0 ನಿರ್ದೇಶನದಲ್ಲಿ ಹೇಳಿತ್ತು. ಆದರೆ, ಈ ವಿಚಾರದಲ್ಲಿ ರಾಜ್ಯಗಳ ಭಾವನೆ ಏಕರೂಪದಲ್ಲಿ ಇಲ್ಲ. ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಶಾಲೆಗಳನ್ನು ತೆರೆಯುವುದಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಹೇಳಿದ್ದಾರೆ. ಬಿಹಾರ ಹಾಗೂ ಮಧ್ಯಪ್ರದೇಶಗಳು ಕೂಡ ಸದ್ಯಕ್ಕೆ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡಿಲ್ಲ. ದಕ್ಷಿಣ ರಾಜ್ಯಗಳ ವಿಚಾರಕ್ಕೆ ಬಂದರೆ ಸುರಕ್ಷಿತವಾಗಿ ವಿದ್ಯಾರ್ಥಿಗಳಿಗೆ ಪ್ರಮುಖ ಪರೀಕ್ಷೆಗಳನ್ನು° ನಡೆಸಿ ಯಶಸ್ವಿಯಾದ ಕರ್ನಾಟಕವು ಈಗ ವಿದ್ಯಾಗಮದಂಥ ವಿನೂತನ ಹೆಜ್ಜೆಯನ್ನಿಟ್ಟಿದೆಯಾದರೂ, ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಪೋಷಕರು ಆತಂಕ ಹಾಗೂ ಗೊಂದಲದಲ್ಲಿದ್ದಾರೆ. ಅತ್ತ ತಮಿಳುನಾಡು, ಕೇರಳ ಹಾಗೂ ತೆಲಂಗಾಣ ಸಹ ಈ ವಿಚಾರದಲ್ಲಿ ಈಗಲೇ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರಲಾಗದಂಥ ಸ್ಥಿತಿಯಲ್ಲಿವೆ. ಕೇರಳ ಸರಕಾರ ಸೆಪ್ಟಂಬರ್‌ 16ಕ್ಕೆ ಈ ವಿಚಾರದಲ್ಲಿ ಚರ್ಚೆ ಮಾಡಲು ಕ್ಯಾಬಿನೆಟ್‌ ಸಭೆಯನ್ನು ಕರೆದಿದೆ. ಇನ್ನೊಂದೆಡೆ ಆಂಧ್ರ ಪ್ರದೇಶವು “ಶಾಲೆಗಳನ್ನು ಆರಂಭಿಸಿದರೆ ಎಲ್ಲ ಶಿಕ್ಷಕರೂ ಶಾಲೆಗೆ ಬರಬೇಕೋ ಅಥವಾ ನಿರ್ದಿಷ್ಟ ವಿಷಯಕ್ಕೆ, ನಿರ್ದಿಷ್ಟ ದಿನವನ್ನು ನಿಗದಿಗೊಳಿಸಬೇಕೋ’ ಎಂಬ ಚಿಂತನೆಯಲ್ಲಿದೆ. ಒಡಿಶಾ ದುರ್ಗಾ ಪೂಜೆ ಮುಗಿಯವವರೆಗೂ(ಅಕ್ಟೋಬರ್‌ 26) ಶಾಲೆಗಳನ್ನು ತೆರೆಯಬಾರದು ಎಂದು ಸ್ಪಷ್ಟವಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next