Advertisement
ಚಂಡಮಾರುತದ ಸೆರಗಂತೆ ಬೀಸುತ್ತಿರುವ ಗಾಳಿಯ ಸಮ್ಮೊಹನಕ್ಕೆ ಸಿಕ್ಕು ತೂಗುತ್ತಿರುವ ತೆಂಗಿನ ತಲೆಗಳು. ಕೇವಲ ಇನ್ನೂರು ಮೀ. ದೂರದಲ್ಲಿ ಅಬ್ಬರಿಸುತ್ತಿರುವ ಅರಬಿ ಕಡಲಿನ ಸದ್ದು. ನಡು ರಾತ್ರಿಯ ಸಣ್ಣಗಿನ ಇರುಚಲು ಮಳೆಯಲ್ಲಿ ಸೈಕಲು ಹತ್ತಿ ಕಡಲ ದಡಕ್ಕೆ ಹೋಗಿ ಕೂರುತ್ತೇನೆ. ಅಂತಹ ಇರುಳಲ್ಲಿ ನಿಮಿಷಕ್ಕೊಮ್ಮೆ ಮಿನುಗುವ ದ್ವೀಪಸ್ತಂಭದ ಬೆಳಕಲ್ಲಿ ಫಳಕ್ಕನೆ ಹೊಳೆಯುವ ಕಡಲ ಅಲೆಗಳು. ಪಕ್ಕದಲ್ಲೆಲ್ಲಿಂದಲೋ ಕೇಳಿಸುವ ಪಿಸುಪಿಸು ಮಾತು. ಬಹುಶಃ ಗಂಡು-ಹೆಣ್ಣುಗಳಿಬ್ಬರ ಪ್ರೇಮದ ಪಿಸು ನುಡಿಗಳು. ನನ್ನ ಸದ್ದಿಗೆ ಬೆದರಿ ಅಲ್ಲಿಂದ ಎದ್ದು ನಡೆಯಲು ತೊಡಗಿದ್ದಾರೆ. ದ್ವೀಪಸ್ತಂಭದ ಬೆಳಕು ಅವರಿಬ್ಬರ ಆಕೃತಿಗಳ ಮೇಲೆ ನಿಮಿಷಕ್ಕೊಮ್ಮೆ ಬೀಳುತ್ತಿದೆ. ಒಂದಿಷ್ಟು ದೂರ ನಡೆದು ಅವರು ಒಬ್ಬರನ್ನೊಬ್ಬರಿಂದ ಬೀಳ್ಕೊಳ್ಳುತ್ತಿದ್ದಾರೆ. ಆತನ ಕೊರಳನ್ನು ಬಳಸಿ ಆಕೆ ಆತನ ತುಟಿಗಳನ್ನು ಚುಂಬಿಸುತ್ತಿದ್ದಾಳೆ. ಆತ ಕಲ್ಲಂತೆ ನಿಂತಿದ್ದಾನೆ. ಬಹುಶಃ ಆಕೆ ಅಲ್ಲಿಂದ ಮುಂದಕ್ಕೆ ಒಬ್ಬಳೇ ನಡೆಯುತ್ತಾಳೆ. ಯಾವ ಸುಳಿಗಾಳಿ ಕಡಲ ಅಲೆ ಅಬ್ಬರಗಳಿಗೂ ಕ್ಯಾರೆನ್ನದ ಮನುಷ್ಯ ವಾಸನೆಯ ಜಿಗುಟು ಪ್ರೇಮಕಾಮಗಳು ಎಂದು ಸಣ್ಣಗಿನ ನಿಟ್ಟುಸಿರೊಂದನ್ನು ಹೊರಬಿಟ್ಟು ನಾನೂ ಎದ್ದು ನಿಲ್ಲುತ್ತೇನೆ. ದೂರದಿಂದ ಕಡಲ ಮೇಲಾಗಿ ಸಾಗಿ ಬರುತ್ತಿರುವ ಮಹಾಮಳೆಯೊಂದರ ಹೆಜ್ಜೆಗುರುತುಗಳ ಸದ್ದು ಇರುಳ ಮರಳ ಮೇಲೆ ಟಪಟಪ ಸದ್ದು ಹೊರಡಿಸುತ್ತದೆ. ಸೈಕಲ್ಲು ಹತ್ತಿ ಯಾವುದೋ ಸ್ಥಳೀಯ ಹಾಡೊಂದನ್ನು ಗುಣುಗುಣಿಸುತ್ತ ಪೆಡಲು ತುಳಿಯತೊಡಗುತ್ತೇನೆ. ಇರುಳ ಮಳೆಯಲ್ಲಿ ಬೆಳಕಿಲ್ಲದ ದಾರಿಯಲ್ಲಿ ಒಬ್ಬನೇ ಸಾಗುತ್ತಿರುವ ನಾನು ನೋಡಿದವರಿಗೆ ದೆವ್ವದಂತೆ ಕಾಣಿಸುತ್ತಿರಬಹುದು ಎಂದನ್ನಿಸಿ ನಗು ಬರುತ್ತದೆ. ಯಾರೂ ಗೊತ್ತಿಲ್ಲದ ಹಾದಿಯಲ್ಲಿ ಒಬ್ಬನೇ ನಡೆಯುತ್ತಿರಬೇಕು ಎನ್ನುವ ನನ್ನ ಬಹಳ ಪುರಾತನ ಆಸೆಯೊಂದು ಇಲ್ಲಿ ಈ ಅಪರಿಚಿತ ದ್ವೀಪದಲ್ಲಿ ಆಗಗೊಡುತ್ತಿರುವುದು ಕಂಡು ಒಳಗೊಳಗೇ ಚಕಿತನಾಗುತ್ತೇನೆ.
Related Articles
Advertisement
“”ಸುಮಾರು ಸಾವಿರದ ಮುನ್ನೂರು ವರ್ಷಗಳ ಹಿಂದೆ ಕೇರಳದ ಕೊಡಂಗಲ್ಲೂರಿನಲ್ಲಿ ಚೇರಮಾನ್ ಎಂಬ ರಾಜನೊಬ್ಬನಿದ್ದ. ನಾವೆಲ್ಲರೂ ಆತನ ಪ್ರಜೆಗಳಾಗಿದ್ದೆವು. ಬಹಳ ಒಳ್ಳೆಯ ರಾಜ ಆತ. ಆತನ ಮಹಾರಾಣಿಯೂ ಬಹಳ ಸುಂದರಿಯಾಗಿದ್ದಳು. ಆ ರಾಜ ಅಂತಿಂತಹ ರಾಜನಲ್ಲ. ರಾಜರಿಗೆ ರಾಜ. ಆತನ ಅಂಕಿತವಿಲ್ಲದೆ ಬೇರೆ ಯಾವ ರಾಜರ ಆಜ್ಞೆಗಳೂ ಊರ್ಜಿತವಾಗುತ್ತಿರಲಿಲ್ಲ. ಆತನ ಮಹಾರಾಣಿಯೂ ಅಷ್ಟೇ. ಮಹಾರಾಜ ಆಕೆಯ ಮುಖವನ್ನಲ್ಲದೆ ಬೇರೆ ಯಾವ ಹೆಂಗಸರ ಮುಖವನ್ನೂ ನೋಡುತ್ತಿರಲಿಲ್ಲ. ಅಂತಹ ಸುಂದರಿ ಅವಳು. ಆದರೆ, ಚೆಂದದ ಹಲ್ಲುಗಳ ನಡುವೆ ಹುಳುಕು ಹಲ್ಲೊಂದಿರುವಂತೆ ಆಕೆಗೂ ಒಂದು ಹುಳುಕು ಇತ್ತು” ಎಂದು ಅವರು ರಹಸ್ಯವಾದ ನಗುವೊಂದನ್ನು ನಕ್ಕರು. ಅಂತಹ ಹುಳುಕಗಳ ಕುರಿತು ಮಹಾ ಬಲ್ಲಿದನಂತೆ ನಾನೂ ಒಂದು ನಗೆ ಚೆಲ್ಲಿದೆನು. ಅವರೂ ಅರ್ಥಗರ್ಭಿತವಾಗಿ ನನ್ನ ಹಸ್ತವನ್ನೊಮ್ಮೆ ಹಿಸುಕಿದರು. ಆಗಲೂ ಕಂಪಿಸುತ್ತಿದ್ದ ಅವರ ಕೈ ಬೆರಳುಗಳು.
“”ಆ ಚೇರಮಾನ್ ರಾಜನ ಸುಂದರವತಿ ಮಹಾರಾಣಿಗೆ ರಾಜನ ವಜೀರನೊಬ್ಬನ ಮೇಲೆ ತಡೆಯಲಾರದ ಪ್ರೇಮ. ವಜೀರನಿಗಾದರೋ ರಾಜನನ್ನು ಕಂಡರೆ ನಡುಗುವಷ್ಟು ಭಯ. ಆಕೆ ಕಾಡಿದಳು. ಬೇಡಿದಳು. ಕಣ್ಣೀರು ಹಾಕಿದಳು. ಆತ ಕರಗಲಿಲ್ಲ. ಹತಾಶಳೂ, ಹಠದವಳೂ ಆದ ಆ ಮಹಾರಾಣಿ ವಜೀರನ ಮೇಲೆಯೇ ಮಹಾರಾಜನಿಗೆ ದೂರು ಹೇಳಿದಳು. “ರಾಜ ಮೃಗಯಾಯಾನಕ್ಕೆ ತೆರಳಿದ್ದಾಗ ತನ್ನ ಶೀಲದ ಮೇಲೆ ವಜೀರ ಕೈ ಹಾಕಿದನು’ ಎಂದಳು. ಕ್ರುದ್ಧನಾದ ಚೇರಮಾನ್ ರಾಜ ಮೂರು ಬೀದಿ ಸೇರುವಲ್ಲಿ ವಜೀರನ ತಲೆ ಕಡಿಯಲು ಆಜ್ಞಾಪಿಸಿದನು. ಇನ್ನೇನು ವಜೀರನ ತಲೆ ತುಂಡಾಗಿ ಬೀಳಬೇಕು ಅಷ್ಟರಲ್ಲಿ ಪಶ್ಚಿಮದ ಆಕಾಶದಲ್ಲಿ ನಕ್ಷತ್ರವೊಂದು ತುಂಡಾಗಿ ಕೆಳಗಿಳಿಯಿತು. ಆ ತುಂಡಿನ ನಡುವಿಂದ ನೂಲಿನ ಏಣಿಯೊಂದು ಕೆಳಗಿಳಿದು ಬಂದು ವಜೀರನನ್ನು ಎತ್ತಿಕೊಂಡು ಮೇಲಕ್ಕೆ ಒಯ್ದು ನಕ್ಷತ್ರಗಳ ನಡುವೆ ಕುಳ್ಳಿರಿಸಿ ಮಾಯವಾಯಿತು. ರಾಜನಿಗೆ ಅದೆಲ್ಲಿಂದಲೋ ಆ ಹೊತ್ತಲ್ಲಿ ವೈರಾಗ್ಯ ಮೂಡಿಬಿಟ್ಟಿತು. ಅದೇ ಹೊತ್ತಲ್ಲಿ ಅರಬೀ ದೇಶದಿಂದ ಬಂದ ವ್ಯಾಪಾರಿಗಳ ಹಾಯಿ ಹಡಗೊಂದು ಕಲ್ಲಿಕೋಟೆಯ ಬಂದರಿನಲ್ಲಿ ಬೀಡುಬಿಟ್ಟಿತ್ತು. ಚೇರಮಾನ್ ಮಹಾರಾಜ ತನ್ನ ಭಟರನ್ನು ರಹಸ್ಯವಾಗಿ ಕರೆದು ಆರಡಿ ಮೂರಡಿ ವಿಸ್ತೀರ್ಣದ ಮರದ ಪೆಟ್ಟಿಗೆಯೊಂದನ್ನು ಆ ಹಾಯಿ ಹಡಗೊಳಗೆ ರಹಸ್ಯವಾಗಿ ಒಯ್ದಿಡಲು ಹೇಳಿದ. ಇರುಳ ಕತ್ತಲಿನಲ್ಲಿ ಆ ಹಾಯಿ ಹಡಗನ್ನೇರಿ ಪೆಟ್ಟಿಗೆಯೊಳಗೆ ಅವಿತು ಮಲಗಿಕೊಂಡ. ಆ ಹಡಗು ಹಾಯಿ ಬಿಚ್ಚಿ ಹೊರಟಾಗ ತಾನೂ ಅದರೊಳಗಿದ್ದು ಅರಬೀ ದೇಶದ ಪವಿತ್ರ ಮಕ್ಕಾವನ್ನು ತಲುಪಿದ. ಅಲ್ಲಿ ತಲುಪಿದಾಗ ಪವಿತ್ರರಾದ ಮುಹಮ್ಮದ್ ನಬಿ ಪ್ರವಾದಿಗಳು ಅಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರ ಪಾದಗಳಿಗೆ ಬಿದ್ದ ಚೇರನ್ ಮಹಾರಾಜ ತನ್ನ ಮಹಾರಾಣಿಯ ವಂಚನೆಯ ಕಥೆಯನ್ನೂ, ಆಕಾಶದಲ್ಲಿ ನಕ್ಷತ್ರವೊಂದು ತುಂಡಾಗಿ ಕೆಳಗಿಳಿದು ಬಂದ ವೃತ್ತಾಂತವನ್ನೂ ಅವರಲ್ಲಿ ಅರುಹಿ ತನಗೆ ಮೋಕ್ಷ ಕರುಣಿಸಬೇಕೆಂದು ಬೇಡಿಕೊಂಡ”
“”ಇತ್ತ ಕೊಡಂಗಲ್ಲೂರಿನ ಪ್ರಜೆಗಳು ರಾಜನಿಲ್ಲದೆ ಕಂಗಾಲಾಗಿ ಆತನನ್ನು ಹುಡುಕಿಕೊಂಡು ನೆಲಮಾರ್ಗವಾಗಿ , ಜಲಮಾರ್ಗವಾಗಿ ನಾನಾ ಕಡೆಗಳಲ್ಲಿ ಸಂಚರಿಸತೊಡಗಿದರು. ಹಾಗೆ ಅರಬಿ ಕಡಲಿನ ಮೇಲೆ ಹಾಯಿ ಹಡಗನ್ನೇರಿ ಪಶ್ಚಿಮ ದಿಕ್ಕಿಗೆ ಹೊರಟು, ದಾರಿಯಲ್ಲಿ ಸುಳಿಗಾಳಿಗೆ ಸಿಲುಕಿ, ಅನ್ನ ಆಹಾರವಿಲ್ಲದೆ ಬಳಲಿ ಕೊನೆಗೆ ಜಲಸರೋವರದ ನಡುವೆ ಈಗ ನೀನು ಓಡಾಡುತ್ತಿರುವ ಈ ದ್ವೀಪ ಸಮೂಹಕ್ಕೆ ಸಾವಿರದ ಮುನ್ನೂರು ವರ್ಷಗಳ ಹಿಂದೆ ಬಂದವರು ನಾವು” ಎಂದು ಅವರು ಕಥೆ ಮುಂದುವರಿಸಿದರು. ಅಷ್ಟರಲ್ಲಿ ಅವರ ಎರಡನೆಯ ಮಡದಿ ಕೈಯಲ್ಲಿ ಚಾ ಕಪ್ಪನ್ನೂ ಬಗೆಬಗೆಯ ತಿಂಡಿಗಳನ್ನೂ ಹಿಡಿದುಕೊಂಡು ಮುಖವನ್ನು ತಲೆವಸ್ತ್ರದಲ್ಲಿ ಬಹುತೇಕ ಮುಚ್ಚಿಕೊಂಡು ಟೇಬಲ್ಲಿನ ಮೇಲೆ ಇಟ್ಟು ಮತ್ತೆ ಕೋಣೆಯೊಳಕ್ಕೆ ಮರೆಯಾದರು. ಆ ಎರಡನೆಯ ಹೆಂಡತಿ ಬಂದು ಹೋದ ಮೇಲೆ ಅಲ್ಲಿ ಒಂದು ತರಹದ ಪರಿಮಳ ಸುಳಿದು ಇವರೂ ಒಂದು ಕ್ಷಣ ಕಣ್ಣುಮುಚ್ಚಿಕೊಂಡರು. ಒಮ್ಮೆ ಕಣ್ಣು ತೆರೆದು, “ನನ್ನನ್ನು ಜೀವದಂತೆ ನೋಡಿಕೊಳ್ಳುತ್ತಾಳೆ ಇವಳು’ ಎಂದು ಮತ್ತೂಮ್ಮೆ ಕಣ್ಣು ಮುಚ್ಚಿಕೊಂಡರು. ಎಲ್ಲರೂ ಇವರ ಕುರಿತು ಆಡುಗಳನ್ನು ಕಡಿದು ಹಣ ಎಣಿಸುವ ಮುದುಕ ಎಂದು ಆಡಿಕೊಳ್ಳುತ್ತಿದ್ದರೆ ಇವರು ಎರಡನೆಯ ಹೆಂಡತಿಯ ಪರಿಮಳಕ್ಕೆ ಕವಿಯಂತೆ ಕಣ್ಣು ಮುಚ್ಚಿಕೊಂಡು ಧ್ಯಾನಿಸುತ್ತಿದ್ದರು. ಇವರು ಮೊದಲ ಹೆಂಡತಿಯನ್ನು ತ್ಯಜಿಸಲು ಬಲವಾದ ಕಾರಣಗಳಿರಬೇಕು ಎಂದು ನಾನು ಯೋಚಿಸುವ ಮೊದಲೇ ಇವರು ಚೇರಮಾನ್ ಮಹಾರಾಜನ ಕಥೆಯನ್ನು ಹೇಳಿ ನನ್ನ ಬಾಯಿ ಮುಚ್ಚಿಸಿದ್ದರು.
ನಾನು ಇವರ ಬಳಿ ಬಂದ ಕಾರಣ ಬೇರೆಯೇ ಇತ್ತು. ಮಣಿಸರಕು ಸಾಮಗ್ರಿಗಳ ಹಾಯಿದೋಣಿಯ ವ್ಯಾಪಾರಿಯಾಗಿದ್ದ ಇವರು ಸುಮಾರು ಅರವತ್ತು ವರ್ಷಗಳ ಹಿಂದೆ ಹಾಯಿದೋಣಿಯೊಂದರಲ್ಲಿ ಮಂಗಳೂರಿನ ಹಳೆಯ ಬಂದರಿಗೂ ಬಂದಿದ್ದರಂತೆ. ಹಾಗೆ ಬಂದವರ ಹಾಯಿದೋಣಿ ಇದೇ ತರಹದ ಸುಳಿಗಾಳಿಯೊಂದಕ್ಕೆ ಸಿಲುಕಿ ದಿಕ್ಕುಪಾಲಾಗಿ ಕಡಲ ನಡುವೆ ದಿಕ್ಕುದೆಸೆಯಿಲ್ಲದೆಯೇ ತಿಂಗಳುಗಳ ಕಾಲ ಅಲೆದು ಕೊನೆಗೆ ಬೇಪೂರಿನ ಬಂದರು ತಲುಪಿತ್ತಂತೆ. ಅದು ತಲುಪುವ ಮೊದಲೇ ಹಸಿವು ತಾಳಲಾರದೆ ಹಲವರು ಸಹವ್ಯಾಪಾರಿಗಳು ಹಾಯಿದೋಣಿಯನ್ನು ತೊರೆದು ಹಲಗೆಗಳನ್ನು ಹಿಡಿದು ಕಡಲಿಗೆ ಜಿಗಿದು ಈಜಿ ದಡ ಸೇರಿ ದಿಕ್ಕಾಪಾಲಾಗಿ ಮಾಯವಾಗಿದ್ದರು. ಹಾಗೆ ಮಾಯವಾದವರಲ್ಲಿ ನಾನು ಹುಡುಕುತ್ತಿರುವ ಪಿಂಗಾಣಿ ಬಟ್ಟಲಿನ ಮಹಾನುಭಾವರೂ ಇದ್ದಿರಬಹುದು ಎಂಬುದು ನನ್ನ ಊಹೆಯಾಗಿತ್ತು. ಆ ಅರವತ್ತು ವರ್ಷಗಳ ಹಿಂದಿನ ಘಟನೆಗೂ ನನ್ನ ಬಾಲ್ಯದ ಮಹಾನುಭಾವರ ಜೀವಿತ ಕಥೆಗೂ ಎಲ್ಲೋ ತಾಳೆ ಹೊಂದುತ್ತಿದೆ ಅನ್ನಿಸಿ ನಾನು ಇವರ ಬೆನ್ನು ಹತ್ತಿದ್ದೆ. ಅದು ಯಾವುದರ ಸುಳಿವೂ ಗೊತ್ತಿಲ್ಲದ ಇವರು ನನ್ನೊಡನೆ ತಮ್ಮ ಜೀವಿತ ಕಥೆಯನ್ನೂ ಚೇರಮಾನ್ ಮಹಾರಾಜನ ವೃತ್ತಾಂತವನ್ನೂ ಅರುಹಿದ್ದರು. ಅದಾದ ಮೇಲೆ ಏನಾಯಿತು ಅನ್ನುವುದು ಮುಂದಿನ ವಾರ.
ಅಬ್ದುಲ್ ರಶೀದ್