Advertisement
ಆ ವಿಷ್ಣುವು ಮೊದಲು ತುಂಬಾ ಶುದ್ಧನೂ, ಪಕ್ಷಪಾತರಹಿತನೂ ಆಗಿದ್ದನು ಆದರೆ ಈಗ ಮಾಯಾರೂಪಗಳನ್ನು ಧರಿಸುತ್ತಾ ತನ್ನ ಸ್ವಭಾವದಿಂದ ಚ್ಯುತನಾಗಿ ತನ್ನ ಸೇವೆ ಮಾಡಿದವರ ಕಡೆಗೆ ಹೋಗುತ್ತಿದ್ದಾನೆ. ಅವನನ್ನು ನನ್ನ ಈ ಶೂಲದಿಂದ ಕತ್ತರಿಸಿ ಅವನ ರಕ್ತ ಧಾರೆಯಿಂದ ರುಧಿರ ಪ್ರೇಮಿಯಾದ ನನ್ನ ತಮ್ಮನಿಗೆ ತರ್ಪಣವನ್ನು ಕೊಡುವೆನು. ಹಾಗೆ ಮಾಡಿದರೆ ಮಾತ್ರ ನನ್ನ ಹೃದಯದ ವ್ಯಥೆಯೂ ಶಾಂತವಾಗಿ ನನ್ನ ತಮ್ಮನಿಗೆ ಆತ್ಮ ಶಾಂತಿ ಉಂಟಾದೀತು .
Related Articles
Advertisement
ಇದರಿಂದ ಗಾಬರಿಗೊಂಡ ದೇವತೆಗಳು ಸ್ವರ್ಗದಿಂದ ಬ್ರಹ್ಮಲೋಕಕ್ಕೆ ಹೋಗಿ ಬ್ರಹ್ಮದೇವರಲ್ಲಿ ತಮಗೆ ಬಂದ ಸಂಕಷ್ಟವನ್ನು ನಿವೇದಿಸಿ ಪರಿಹಾರಕ್ಕಾಗಿ ಪ್ರಾರ್ಥಿಸುತ್ತಾ, ಹಿರಣ್ಯಕಶಿಪು ಬ್ರಹ್ಮ ಪದವಿಯ ಪ್ರಾಪ್ತಿ ಹಾಗೂ ಪಾಪ-ಪುಣ್ಯಗಳ ನಿಯಮಗಳನ್ನು ಬದಲಾವಣೆ ಮಾಡುವುದೇ ಮೊದಲಾದ ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನಾಚರಿಸುವ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸಿದರು.
ನಂತರ ಬ್ರಹ್ಮದೇವರು ಭೃಗು ,ದಕ್ಷ ಮುಂತಾದವರನ್ನು ಕೂಡಿಕೊಂಡು ಹಿರಣ್ಯಕಶಿಪುವಿನ ತಪೋಭೂಮಿಗೆ ಹೋದರು. ಅಲ್ಲಿ ಹುತ್ತದಿಂದ ಮತ್ತು ಹುಲ್ಲು ಬಿದಿರುಗಳಿಂದ ಹಿರಣ್ಯಕಶಿಪುವಿನ ದೇಹವು ಮುಚ್ಚಿಹೋಗಿತ್ತು. ಅವನ ದೇಹದ ಚರ್ಮ ,ಮೇಧಸ್ಸು, ಮಾಂಸ ,ರಕ್ತ ಇವೆಲ್ಲವನ್ನೂ ಇರುವೆಗಳು ಹಾಗು ಹುಳಗಳು ತಿಂದುಬಿಟ್ಟಿದ್ದವು. ಮೋಡಗಳಿಂದ ಮುಚ್ಚಲ್ಪಟ್ಟ ಸೂರ್ಯನಂತಿರುವ ಕಶ್ಯಪ ಸಂಭೂತನು ತನ್ನ ತಪೋ ತೇಜದಿಂದ ಲೋಕಗಳನ್ನು ಸುಡುತ್ತಿದ್ದನು. ಅವನನ್ನು ನೋಡಿ ಬ್ರಹ್ಮ ದೇವರು ಕೂಡ ಒಂದು ಕ್ಷಣ ಮೂಕವಿಸ್ಮಿತರಾಗಿ ನಗುತ್ತಾ, ” ವತ್ಸ ಏಳು; ಎದ್ದೇಳು! ನಿನಗೆ ಮಂಗಳವಾಗಲಿ… ನಿನ್ನ ತಪಸ್ಸು ಸಿದ್ಧಿಸಿತು. ನಿನಗೆ ವರವನ್ನು ಕೊಡಲು ನಾನೇ ಬಂದಿರುವೆನು.
ಅಯ್ಯಾ… ಹುಳ-ಹುಪ್ಪಟೆಗಳು ನಿನ್ನ ದೇಹವನ್ನು ತಿಂದಿದ್ದರು ನಿನ್ನ ಪ್ರಾಣಗಳು ಅಸ್ಥಿಗತವಾಗಿ ಉಳಿದಿದೆ. ಇಂತಹ ಕಠಿಣವಾದ ತಪಸ್ಸನ್ನು ಈ ಹಿಂದೆ ಯಾರು ಮಾಡಿಲ್ಲ ಮುಂದೆ ಯಾರೂ ಮಾಡಲಾರರು. ದೇವತೆಗಳ ದಿವ್ಯವಾದ ನೂರು ವರ್ಷಗಳ ವರೆಗೆ ಪವನಾಶನಾಗಿ ಯಾರು ತಾನೆ ಇರಬಲ್ಲರು. ಇಂತಹ ಕಾರ್ಯವನ್ನು ಧೀರರು ಮಾತ್ರ ಕಷ್ಟದಿಂದ ಮಾಡಬಲ್ಲರು. ಈ ತಪೋ ನಿಷ್ಠೆಯಿಂದ ನೀನು ನನ್ನನ್ನು ವಶಪಡಿಸಿಕೊಂಡಿರುವೆ. ದೈತ್ಯ ಶಿರೋಮಣಿಯೇ ನಿನಗೆ ಬೇಕಾದ ವರವನ್ನು ಬೇಡಿಕೋ ಎಂದು ತನ್ನ ಕಮಂಡಲುವಿನ ಜಲವನ್ನು ಅಭಿಮಂತ್ರಿಸಿ ಅವನಿಗೆ ಪ್ರೋಕ್ಷಿಸಿದನು. ತಕ್ಷಣವೇ ಕಟ್ಟಿಗೆಯ ರಾಶಿಯಿಂದ ಬೆಂಕಿಯು ಉರಿದೇಳುವಂತೆ ಹುತ್ತದ ಮಣ್ಣಿನಿಂದ, ಪರಿಪೂರ್ಣವಾದ, ವಜ್ರದಂತೆ ಕಠೋರವಾದ, ಚಿನ್ನದಂತೆ ಥಳಥಳಿಸುವ ದೇಹವುಳ್ಳ ಹಿರಣ್ಯಕಶಿಪು ಎದ್ದು ನಿಂತನು .
ತನ್ನ ಮುಂದೆ ಅಂತರಿಕ್ಷದಲ್ಲಿ ಹಂಸವಾಹನರಾಗಿ ಇರುವ ಬ್ರಹ್ಮದೇವರನ್ನು ಕಂಡು ಆನಂದ ಭರಿತರಾಗಿ ತನ್ನ ಶಿರಸ್ಸನ್ನು ಭೂಮಿಯಲ್ಲಿ ಇರಿಸಿ ಶಿರಸಾ ನಮಸ್ಕರಿಸಿದನು. ಮತ್ತೆ ಅಂಜಲೀಭದ್ದನಾಗಿ ವಿನಮ್ರಭಾವದಿಂದ ನಿಂತುಕೊಂಡು ಗದ್ಗದ ವಾಣಿಯಿಂದ ಬ್ರಹ್ಮನನ್ನು ಸ್ತುತಿಸಿದನು. ಪ್ರಭುವೇ ನೀನು ವರಕೊಡುವುದರಲ್ಲಿ ಸರ್ವ ಶ್ರೇಷ್ಠನು. ನೀನು ನನಗೆ ಅಭೀಷ್ಟವಾದ ವರವನ್ನು ಕೊಡುವುದಾದರೆ – ನೀನು ಸೃಷ್ಟಿಸಿರುವ ಯಾವುದೇ ಪ್ರಾಣಿ, ಪಕ್ಷಿ ಮನುಷ್ಯ ದೇವತೆ ದೈತ್ಯ ನಾಗಾದಿಗಳಿಂದಲೂ ನನಗೆ ಮರಣವು ಪ್ರಾಪ್ತವಾಗಬಾರದು. ಒಳಗಾಗಲೀ ಹೊರಗಾಗಲಿ, ಹಗಲು-ರಾತ್ರಿಗಳಲ್ಲಾಗಲಿ , ಯಾವುದೇ ಶಸ್ತ್ರ ಅಸ್ತ್ರಗಳಿಂದಾಗಲಿ , ಭೂಮಿಯಾಕಾಶಾದಿಗಳಲ್ಲಿ ನನಗೆ ಮರಣ ಉಂಟಾಗದಿರಲಿ. ಯುದ್ಧದಲ್ಲಿ ನನಗೆ ಯಾವುದೇ ಎದುರಾಳಿಗಳಿಲ್ಲದೆ ಏಕಚ್ಛತ್ರಾಧಿಪತಿಯಾಗಿ ಮೆರೆಯುವಂತೆ ವರವನ್ನು ಕರುಣಿಸು ಎಂದು ಬ್ರಹ್ಮದೇವನಲ್ಲಿ ಬೇಡಿದನು.
ಹಿರಣ್ಯಕಶಿಪು ಈ ಪ್ರಕಾರ ದುರ್ಲಭವಾದ ವಾರಗಳನ್ನ ಬೇಡಲು ಮಹಾ ಮಹಿಮರಾದ ಬ್ರಹ್ಮ ದೇವರು ಪ್ರಸನ್ನರಾಗಿ ವರಗಳನ್ನು ಕರುಣಿಸಿದರು. ನಂತರ ಬ್ರಹ್ಮದೇವರು “ವತ್ಸ , ನೀನು ಪಡೆದಿರುವ ವರಗಳು ಅತಿ ದುರ್ಲಭವಾದವುಗಳು. ಈ ವರಗಳು ಎಂದು ಸುಳ್ಳಾಗುವುದಿಲ್ಲ” ಎಂದು ಹೇಳಿ ಬ್ರಹ್ಮದೇವರು ತಮ್ಮ ಲೋಕಕ್ಕೆ ಹೊರಟು ಹೋದರು .