Advertisement
ಸಮುದಾಯ ಜೀವನ, ಸಹಕಾರ ಮನೋಭಾವ, ಪ್ರಜಾಸತ್ತಾತ್ಮಕ ಹೊಣೆಗಾರಿಕೆ ಇಂತಹ ಅತ್ಯುತ್ತಮ ಶಿಬಿರೋದ್ದೇಶಗಳನ್ನಿಟ್ಟುಕೊಂಡು ನಡೆದ ನಮ್ಮ ಶಿಬಿರವು ಒಬ್ಬ ಸದೃಢ ಶಿಕ್ಷಕನಾಗಿ ರೂಪುಗೊಳ್ಳಲು ಮಾನಸಿಕವಾಗಿ ನಮ್ಮನ್ನು ಅಣಿಮಾಡಿತು. ಈ ನಮ್ಮ ಶಿಬಿರವು ಕೇವಲ ಶ್ರಮದಾನ, ಉಪನ್ಯಾಸ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿರದೆ ನಮ್ಮಲ್ಲಿ ಸೃಜನಶೀಲತೆಯನ್ನು ಪರೀಕ್ಷಿಸುವಂತಿತ್ತು. ಅದುವೇ ಶಿಬಿರದ ಒಂದು ಭಾಗವಾದ ಕೊಠಡಿ ವೀಕ್ಷಣೆ.
Related Articles
Advertisement
ತೀರ್ಪುಗಾರರು ನಮ್ಮ ಜೇನುಗೂಡು ನಿಲಯದ ಹತ್ತಿರ ಬರುತ್ತಿದ್ದಂತೆೆ ನಮ್ಮನೆ ನಾಯಿ ಬೊಗಳುತ್ತದೆ. ಹೊರಗೆ ಓಡಿದ ಮಗ “ಅಮ್ಮಾ ಯಾರೋ ಬಂದಿದ್ದಾರೆ’ ಎನ್ನುತ್ತಾನೆ. ಒಳಗಿನಿಂದ ಬರುವ ಅಮ್ಮ “ಹೋ! ಇವರಾ ನಿನ್ನ ತಂಗಿಯನ್ನು ನೋಡುವುದಕ್ಕೆ ಬಂದಿದ್ದಾರೆ. ಮನೆಯನ್ನು ಪರಿಚಯಿಸು’ ಎನ್ನುತ್ತಾಳೆ. ಆಗ ಮಗ ಅತಿಥಿಗಳಿಗೆ ಮೊದಲು ನಮ್ಮ ಸರ್ವಧರ್ಮ ಸಮನ್ವಯತೆ ಸಾರುವ ದೇವರ ಮನೆಯನ್ನು , ಪೂಜೆಯಲ್ಲಿ ಮಗ್ನರಾಗಿದ್ದ ಅಜ್ಜಿಯನ್ನು , ನಂತರ ತನ್ನ ಅನಾರೋಗ್ಯಪೀಡಿತ ತಂದೆಯನ್ನು ಹಾಗೆಯೇ ಮಕ್ಕಳಿಗೆ ಪಾಠ ಮಾಡುವ ತನ್ನ ಹೆಂಡತಿಯನ್ನು, ಮನೆಯ ತುಂಬಾ ಅಂಬೆಗಾಲಲ್ಲಿ ಓಡಾಡುತ್ತಿದ್ದ ಮಗುವನ್ನು, ಇಲಿ ಹಿಡಿಯುತ್ತಿದ್ದ ಬೆಕ್ಕನ್ನು ಪರಿಚಯಿಸಿ ನಾವೇ ತಯಾರಿಸಿದ್ದ ಮೆತ್ತನೆಯ ಹಾಸಿನ ಮೇಲೆ ಕೂರಿಸುತ್ತಾನೆ. ನಂತರ ಒಂದು ಕೋಣೆಯಿಂದ ಮೆಲ್ಲನೆ ಬೆಲ್ಲ-ಪಾನಕದ ತಟ್ಟೆ ಹಿಡಿದು ನಾಚುತ್ತ ಬರುವ ಮನೆಮಗಳು ಅತಿಥಿಗಳಿಗೆ ಪಾನಕ ನೀಡುತ್ತಾಳೆ. ಆಗ ನಾವು “ನಮ್ಮ ಮಗಳು ಹೇಗಿದ್ದಾಳೆ. ನಿಮಗೆ ಒಪ್ಪಿಗೆ ಇದೆಯೆ?’ ಎಂಬೆಲ್ಲಾ ಪ್ರಸ್ತಾಪ ಶುರುವಾಗುತ್ತದೆ.
ನಂತರ ತೀರ್ಪುಗಾರರು ಇದು ಹೆಣ್ಣು ತೋರಿಸುವ ಶಾಸ್ತ್ರ ಎನ್ನುವುದನ್ನು ಮನಗಂಡು, ಅನೇಕ ಪ್ರಶ್ನೆಗಳನ್ನು ಕೇಳಿದರು. “ನಿಮ್ಮದು ಎಷ್ಟು ಎಕರೆ ಹೊಲವಿದೆ, ಏನು ಬೆಳೆಯುತ್ತಿದ್ದೀರಾ?’ ಎಂದು ಕೇಳಿದರೆ “ನನ್ನ ಮಗಳಿಗೆ ನೀನು ಏನು ಓದಿದ್ದೀಯಮ್ಮಾ? ನಿನ್ನ ಕನಸಿನ ಗಂಡ ಹೇಗಿರಬೇಕು?’ ಎಂದೆಲ್ಲ ಕೇಳಿ ನಮ್ಮ ಪ್ರೌಢಿಮೆಯನ್ನು ಪರೀಕ್ಷಿಸಿದರು. ಕೊನೆಯದಾಗಿ ನಾವು ಅತಿಥಿಗಳಿಗೆ ತಾಂಬೂಲ, ಹಾಗೆಯೇ ಮಹಿಳಾ ತೀರ್ಪುಗಾರರಿಗೆ ಮಡಿಲಕ್ಕಿ ತುಂಬುವ ಶಾಸ್ತ್ರ ನೆರವೇರಿಸಿದೆವು. ಕೊನೆಯದಾಗಿ ತೀರ್ಪುಗಾರರು ನಮ್ಮ ಅತಿಥಿ ಸತ್ಕಾರದ ಸಂಸ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, “ನಿಮ್ಮ ಮನೆಯ ನಾಯಿ ಮರಿ ಹಾಕಿದರೆ ನಮಗೊಂದು ಕೊಡಿ’ ಎಂದು ಹಾಸ್ಯ ಮಾಡಿ ಹೊರ ನಡೆದರು.
ಉಸ್ಸಪ್ಪಾ ! ಏನೋ ಒಂದು ಮಾಡಿ ಮುಗಿಸಿದೆವಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಅಂದಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮಗೆ ಸಪ್ರೈìಸ್ ಸುದ್ದಿಯೊಂದು ಕಾದಿತ್ತು. ಅದುವೇ ಕೊಠಡಿಯನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸುವು ದರಲ್ಲಿ ನಮ್ಮ ತಂಡಕ್ಕೆ ಪ್ರಥಮ ಬಹುಮಾನ. ನಮಗಂತೂ ಇದು ಅನಿರೀಕ್ಷಿತ ಗೆಲುವು. ನಗುವುದೋ ಸಂಭ್ರಮಿಸುವುದೋ ತಿಳಿಯದಾಗಿದ್ದೆವು. ಪ್ರಿನ್ಸಿಪಾಲರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದೆವು.
ಒಟ್ಟಾರೆಯಾಗಿ ಈ 3 ದಿನಗಳ ಶಿಬಿರ ನೂರಾರು ಇಂತಹ ಸವಿನೆನಪು ಗಳೊಂದಿಗೆ ನಮ್ಮ ಕ್ರಿಯೇಟಿವಿಟಿಗೆ ಹಿಡಿದ ಕೈಗನ್ನಡಿಯಾಗಿತ್ತು. ಸುಸಂಸ್ಕೃತ ಸಾಮರಸ್ಯ ಜೀವನ, ಸೃಜನಾತ್ಮಕ ನಿರ್ಧಾರ, ಹಕ್ಕು, ಹೊಣೆಗಾರಿಕೆಗಳಂತಹ ಪಾಠವನ್ನು ಧಾರೆ ಎರೆಯಿತು.
ಮಹೇಶ್ ಎಂ. ಸಿ.ದ್ವಿತೀಯ ಬಿ.ಎಡ್
ಎಸ್.ಡಿ.ಎಂ. ಬಿಎಡ್ ಕಾಲೇಜು, ಉಜಿರೆ