ಈ ಹಿಂದೆ “ಶುಕ್ಲಾಂಬರಧರಂ’ ಎಂಬ ಸಿನಿಮಾ ಬಂದಿದ್ದು ನೆನಪಿರಬಹುದು. ಆ ಚಿತ್ರ ನಿರ್ದೇಶಿಸಿದ್ದ ಮಸ್ತಾನ್ ಈಗ ಮತ್ತೂಂದು ಚಿತ್ರ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಈ ವಾರ ಆ ಚಿತ್ರವನ್ನು ಪ್ರೇಕ್ಷಕರ ಎದುರು ತರಲು ಅಣಿಯಾಗಿದ್ದಾರೆ. ಹೌದು, ತುಂಬಾ ಗ್ಯಾಪ್ ಬಳಿಕ ಮಸ್ತಾನ್ “ಸಿತಾರ’ ಎಂಬ ಚಿತ್ರ ಮಾಡಿದ್ದಾರೆ. ಇದು ಈಗಿನ ಚಿತ್ರವಂತೂ ಆಲ್ಲ, ಶುರುವಾಗಿ ಐದು ವರ್ಷ ಕಳೆದಿದೆ. ತಡವಾಗಲು ಹಲವು ಕಾರಣಗಳಿವೆ. ಆದರೂ, ಒಂದೊಳ್ಳೆಯ ಚಿತ್ರ ಮಾಡಿರುವ ಖುಷಿಯಲ್ಲೇ, ನಿರ್ದೇಶಕ ಮಸ್ತಾನ್ “ಸಿತಾರ’ ಕುರಿತು ಹೇಳುತ್ತಾ ಹೋದರು.
“ಈ ಸಿನಿಮಾದ ಕಥೆ ಶುರುವಾಗೋದೇ, ದ್ವಿತಿಯಾರ್ಧದಿಂದ. ಚಿತ್ರದ ಶೀರ್ಷಿಕೆ ಹೇಳುವಂತೆ ಇದೊಂದು ಫ್ಯಾಮಿಲಿ ಕಥೆ. ಇಲ್ಲಿ ನಾಯಕಿ ಸಿತಾರ ನುಡಿಸುತ್ತಾಳೆ. ಅವಳ ಹೆಸರು ಕೂಡ ಸಿತಾರ. ಇಲ್ಲೊಂದು ಹೊಸ ಪ್ರಯತ್ನ ಮಾಡಿದ್ದೇನೆ. ಹಿಂದೆ ಬಂದ ಚಿತ್ರಗಳಲ್ಲಿ ಅತ್ತೆ ಮನೆಗೆ ಹೋದಾಗ ಸೊಸೆಗೆ ಹಿಂಸೆ ಕೊಡುವ ಚಿತ್ರಣ ಇರುತ್ತಿತ್ತು. ಆದರೆ, ಇಲ್ಲಿ ತನ್ನ ಮನೆಯಲ್ಲೇ ನಾಯಕಿ ಎಷ್ಟೊಂದು ಸ್ಟ್ರಗಲ್ ಮಾಡ್ತಾಳೆ ಅನ್ನುವ ಕಥೆ ಇದೆ. ನಾಯಕಿ ಎಷ್ಟು ತೊಂದರೆಗೆ ಒಳಪಡುತ್ತಾಳೆ. ಆಕೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ ಅನ್ನೋದೇ ಕಥೆ. ಇದು ಹಿಂದಿನ ಕಾಲದ ಕಥೆ ಎನಿಸಿದರೂ, ಈಗಿನ ಕಾಲಕ್ಕೆ ಸಲ್ಲುವ ಚಿತ್ರವಂತೂ ಹೌದು’ ಎಂದು ಗಟ್ಟಿಯಾಗಿ ಹೇಳುತ್ತಾರೆ ಮಸ್ತಾನ್.
ಇನ್ನು, ನೇಹಾ ಪಾಟೀಲ್‌ಗೆ ಇದು ಮೊದಲ ಚಿತ್ರವಂತೆ. ಅವರು ಇಂಡಸ್ಟ್ರಿಗೆ ಬರೋಕೆ ಈ ಸಿನಿಮಾನೇ ಕಾರಣವಂತೆ. “ಐದು ವರ್ಷಗಳ ಹಿಂದೆ ಶುರುವಾದ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗುತ್ತಿದೆ. ನನ್ನ ಕೆರಿಯರ್ ಶುರುವಾಗೋಕೆ “ಸಿತಾರ’ ಕಾರಣ. ನಿರ್ದೇಶಕರು ನನ್ನ ಮನೆಗೆ ಬಂದು ಕಥೆ ಹೇಳಿ, ಒಂದು ಡೈಲಾಗ್ ಕೊಟ್ಟು, ಅದನ್ನು ಹೇಳುವಂತೆ ಸೂಚಿಸಿದ್ದರು. ನಾನು ಡೈಲಾಗ್ ಹೇಳುವುದನ್ನು ವಿಡೀಯೋ ಕೂಡ ಮಾಡಿದ್ದರು. ಅಂದೇ ನನ್ನನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ, ಚಿತ್ರದ ನಿರ್ಮಾಪಕರು ನಿಧನರಾದರು. ಸಿನಿಮಾ ಆಗುತ್ತೋ, ಇಲ್ಲವೋ ಅಂದುಕೊಂಡಾಗ, ಡಾ.ವಿಜಯ್ ಅವರು ಬಂದು ಸಿನಿಮಾ ಪೂರ್ಣಗೊಳಿಸಿದ್ದಾರೆ. ಇಲ್ಲಿ ಎಲ್ಲರ ಸಹಕಾರದಿಂದ ಒಳ್ಳೆಯ ನಟನೆ ಮಾಡಲು ಸಾಧ್ಯವಾಗಿದೆ. ನಾನಿಲ್ಲಿ ಹಳ್ಳಿಯೊಂದರ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಿಟಿಗೆ ಹೋಗಿ ಪುನಃ ಹಳ್ಳಿಗೆ ಬಂದು ಏನೆಲ್ಲಾ ಮಾಡ್ತಾಳೆ ಅನ್ನೋದು ಕಥೆ. ಇನ್ನು, ಸಿತಾರ ನುಡಿಸೋಕೆ ಬರಲ್ಲ. ಆದರೆ, ಹೇಗೆ ಹಿಡಿದುಕೊಳ್ಳಬೇಕು ಅಂತ ಹಿರಿಯ ನಟ ದತ್ತಣ್ಣ ಸಲಹೆ ಕೊಟ್ಟಿದ್ದರು’ ಅಂತ ನೆನಪಿಸಿಕೊಂಡರು ನೇಹಾ ಪಾಟೀಲ್.
ನಟಿ ನೀತು ಇಲ್ಲಿ ಅತಿಥಿ ಪಾತ್ರಮಾಡಿದ್ದಾರಂತೆ. ಅವರಿಲ್ಲಿ ಎನ್‌ಆರ್‌ಐ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಕೆರಿಯರ್‌ನಲ್ಲಿ ರೊಮ್ಯಾಂಟಿಕ್ ಹಾಡುಗಳು ಕಮ್ಮಿಯಂತೆ. ಆದರೆ, ಇಲ್ಲೊಂದು ಆ ರೀತಿಯ ಹಾಡು ಇರುವುದಕ್ಕೆ ಖುಷಿ ಇದೆ. ಒಳ್ಳೆಯ ಸಮಯದಲ್ಲೇ ಚಿತ್ರ ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಸಹಕಾರ ಇರಲಿ ಅಂದರು’ ನೀತು.
ನಿರ್ಮಾಪಕ ಡಾ.ವಿಜಯ್ ಅವರು ಒಳ್ಳೆಯ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಮಾಧ್ಯಮದವರ ಸಹಕಾರ ಬೇಕು ಅಂದರು. ಸಂಗೀತ ನಿರ್ದೇಶಕ ಚಂದ್ರಕಾಂತ್ ಅವರು ಐದು ಹಾಡುಗಳಿಗೆ ಸಂಗೀತ ನೀಡಿದ್ದಾರಂತೆ. ಸಂಕ್ರಾಂತಿ ಕುರಿತ ಒಂದು ಹಾಡು ಇಲ್ಲಿದೆ. ಮಿಕ್ಕಂತೆ ಎಲ್ಲಾ ಬಗೆಯ ಹಾಡುಗಳಿಗೂ ಜಾಗ ಕಲ್ಪಿಸಲಾಗಿದೆ ಎಂದರು ಚಂದ್ರಕಾಂತ್. ಈ ಚಿತ್ರದಲ್ಲಿ ಡಾ.ಮಹರ್ಷಿ ಆನಂದ ಗುರೂಜಿ ಕೂಡ ಒಂದು ಪಾತ್ರ ನಿರ್ವಹಿಸಿದ್ದಾರಂತೆ.