ಕಥೆ ಆರಂಭವಾದದ್ದು ಒಂದು ದಿನ ಅಕಸ್ಮಾತ್ ಆಗಿ. ಅವನಿಂದ ಎಂದೇ ಹೇಳಬೇಕು. ಆತ ಬ್ಯುಸಿ ಪ್ರೊಫೆಸರ್. ಆಧುನಿಕ ಪಾಶ್ಚಾತ್ಯ ಸಾಹಿತ್ಯ ಓದಿಕೊಂಡವನು. ಐವತ್ತು ದಾಟಿ ಮೀಸೆಯ ಅಂಚುಗಳು ಚೂರು ಬೆಳ್ಳಗಾಗಿವೆ. ಅದರೆ, ಆತ ವಾಟ್ಸಾಪ್‌ನ ಫೊಟೊದಲ್ಲಿ, ಸೂಟಿನಲ್ಲಿ ನಲವತ್ತರ ಆಸುಪಾಸಿನವನಂತೆ ಕಾಣುವುದು ಸುಳ್ಳಲ್ಲ. ಕೆಂಪು ಬಣ್ಣ. ಬೆಳ್ಳಗಾಗದ ಕೂದಲು. ಗ್ಲಾಮರಸ್ ಅನಿಸಬಹುದಾದವನು. ತುಸು ರೊಮ್ಯಾಂಟಿಕ್ ವ್ಯಕ್ತಿಯೇ. ಕವಿತೆಗಳ ಬಗ್ಗೆ ಒಲವಿದೆ. ಹಳೆಯ ಪ್ರೇಮ ಗೀತೆಗಳು ಹೃದಯವನ್ನೇ ತಟ್ಟಿಬಿಡುತ್ತವೆ. ಅಂಥ ಕವಿಯೇನೂ ಅಲ್ಲ.ಡೈರಿಗಳಲ್ಲಿ ತೀವ್ರ ಪ್ರೇಮಕಾವ್ಯ ಇತ್ಯಾದಿ ಬರೆದು ಇಡುವುದು.
ಒಂದು ದಿನ ಜಲಾಲುದ್ದೀನ್ ರೂಮಿಯ ಚಂದದ ಕವಿತೆಯೊಂದನ್ನು ಆತ ಹಾಗೇ ಆಫೀಸ್‌ನಲ್ಲಿ ಕುಳಿತೇ ಅನುವಾದಿಸಿ ಅದನ್ನು ಕನ್ನಡದ ಈ-ಮ್ಯಾಗಜಿನ್‌ಗೆ ಕಳಿಸಿದ್ದ. ಅದು ಪ್ರಕಟವಾಗಿ ಹೋಯಿತು. ಅಲ್ಲಿಂದ ಆರಂಭವಾದದ್ದು ಅದು. ಯಾರೋ ಒಬ್ಬಳು ಅದನ್ನು ತುಂಬ ಲೈಕ್ ಮಾಡಿ ಕಮೆಂಟ್ ಬರೆದಿದ್ದಳು. ವಾಟ್ಸಾಪ್‌ನಲ್ಲಿ ಕೂಡ ಒಡಮೂಡಿ ಬಂದಿದ್ದಳು. ಬಾಬ್ ಮಾಡಿದ ಸುಂದರಿ. ಮಿಂಚಿನಂಥ ಕಣ್ಣುಗಳು ಸೂಸುವ ತೀವ್ರ ಕಾಮನೆ. ತೀಡಿದ ಹುಬ್ಬು. ದಟ್ಟವಾದ ಕೆಂಪು ಲಿಪ್‌ಸ್ಟಿಕ್. ಜೀನ್ಸ್ ಪ್ಯಾಂಟಿನಲ್ಲಿರುವ ತಂಬೂರಿಯಂಥ ದೇಹ. ವಿವಾಹವಾದವಳೇ! ಕತ್ತು, ಮುಖದ ಗೆರೆಗಳು, ಅಡ್ಡ ಗೆರೆಗಳು ಬಿದ್ದ ಎದೆಯ ಆಕೃತಿ ಅದನ್ನು ಹೇಳುತ್ತವೆ. ನಲವತ್ತು ವರ್ಷ ಇರಬಹುದು. ಹಾರಾಡುವ ಕೂದಲುಗಳು. ಬೇಟೆಗೆ ಸಿದ್ಧವಾದ ಚಿರತೆಯಂತಹ ಬಾಡಿ ಲ್ಯಾಂಗ್ವೇಜ್.
ಗ್ಯಾಸ್ ಒಲೆ ಹೊತ್ತಿಕೊಳ್ಳುವ ರೀತಿಯಲ್ಲಿ ಆತನೊಳಗೆ “ಭಗ್’ ಎಂದು ಬೆಂಕಿ ಹೊತ್ತಿಕೊಂಡಿತು. ಅದಿನ್ನೂ ತನ್ನೊಳಗೆ ಉರಿಯುತ್ತಲೇ ಇದೆ ಎಂದು ಅವನಿಗೆ ತಿಳಿದಿದ್ದು ಈಗಲೇ. ಬೂದಿಯಾಗಿ ಹೋಗಿದೆ ಎಂದು ಆತ ಭಾವಿಸಿ ವರ್ಷಗಳೇ ಕಳೆದು ಹೋಗಿದ್ದವು. ಗಂಡ-ಹೆಂಡತಿಯ ನಡುವಿನ ವ್ಯವಹಾರದಲ್ಲಿ ಹಾಗೇ. ಬಚ್ಚಲು ಒಲೆಗೆ ಹಾಕಿದ ತೆಂಗಿನ ಗೆರಟೆಯ ಬೆಂಕಿಯಂತೆ ಅದು ಗರಗರನೆ ಉರಿದು ಬೇಗ ಆರಿ ಹೋಗುತ್ತದೆ. ಆರಿಯೇ ಹೋಗುತ್ತದೆ. ತೆರೆದುಕೊಳ್ಳುವ, ಬಿಚ್ಚಿಕೊಳ್ಳುವ, ಬಯಲಾಗುವ, ಎರಡು ಒಂದಾಗುವ ಎಲ್ಲವೂ ಯಾಂತ್ರಿಕ ಅನ್ನಿಸಲಾರಂಭಿಸುತ್ತದೆ. ತುಂಬ ತೀವ್ರತೆಯ ಕ್ಷಣಗಳಲ್ಲಿ ಕೂಡ ಮನಸ್ಸಿನೊಳಗೆ ಏಕತಾನತೆ ಹುಟ್ಟಿಕೊಳ್ಳುತ್ತದೆ. ಬೇಸರ ಹುಟ್ಟಿಕೊಳ್ಳುತ್ತದೆ. ಬೆಳದಿಂಗಳು ಮಂಕಾಗಿ ನಿದ್ದೆಗೆ ಜಾರಿಕೊಳ್ಳುತ್ತದೆ. ನಕ್ಷತ್ರಗಳು ನಂದಿ ಹೋಗುತ್ತವೆ. ಹೂವಿನ ಡಿಸೈನ್‌ನ ಚಾದರದಡಿಗೆ ಬರೇ ಗಂಧದ ಕೊರಡು. ಹಳಿ ಬಿಟ್ಟು ಬೇರೊಂದು ಹಳಿಯ ಮೇಲೆ ಇಳಿಯುವಷ್ಟು ಧೈರ್ಯವೂ ಉಳಿದಿರುವುದಿಲ್ಲ. ಮಿಂಚು, ಮಾದಕತೆ ಮಾಯವಾಗುತ್ತದೆ. ಏನೋ ಒಂದು ಇಲ್ಲವಾಗುತ್ತದೆ. ಸಿಲೆಬಸ್ ಮುಗಿಸಿ ರಜೆಗೆ ಕಾಯುವಂತಹ ಶೂನ್ಯಮನಸ್ಥಿತಿ.
ಏಕೋ! ಅವಳನ್ನು ನೋಡಿದ್ದೇ ಆತನೊಳಗೆ ಸಿಡಿಲು ಹೊಡೆದ ಹಾಗೆ. ಅಬ್ಟಾ! ಗಂಡಸಿನ ಹೃದಯದೊಳಗೆ ನಿಜವಾಗಿಯೂ ಮಿಂಚು ಹೊತ್ತಿಸುವ ವಿಚಿತ್ರ ಸಾಮರ್ಥ್ಯ ಯಾವುದೇ ಹೆಣ್ಣಿಗೆ ಇರುತ್ತದೆ ಎಂದು ಅವನಿಗೆ ತಿಳಿದಿದ್ದು ಈಗ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕೀಚಕನ ನೆನಪು ಬಂತು. ಕೀಚಕನಿಗೆ ಅಕಸ್ಮಾತ್ ಸುಂದರಿ ಸೈರಂಧ್ರಿಯನ್ನು ನೋಡಿದಾಗ ಹಿಡಿದಂಥ ಹುಚ್ಚು ಎಲ್ಲರಲ್ಲಿಯೂ ಇರುತ್ತದೆಯೆ? ಕೀಚಕ ಅವಳಿಗಾಗಿ ಜೊಲ್ಲು ಸುರಿಸುವುದು, ಅವಳ ಹಿಂದೆ ಮರ್ಯಾದೆ ಎಲ್ಲ ಬಿಟ್ಟು ಅಲೆಯುವುದು ನಿಜವಾಗಿಯೂ ಒಂದು ವಾಸ್ತವಿಕ ಭಾವನೆಯ ಚಿತ್ರಣವೆ? ಮರ್ಯಾದಸ್ಥರು ತೋರಿಸಿಕೊಳ್ಳದಿದ್ದರೂ ಇಂತಹ ಭಾವನೆಗಳು ಎಲ್ಲರ ಮನಸ್ಸನ್ನು, ಇಳಿವರ್ಷಗಳಲ್ಲಿಯೂ ಅಥವಾ ಅದನ್ನು ಮೀರಿಯೂ ತುಂಬಿಕೊಂಡಿರುತ್ತದೆಯೆ? ಮತ್ತೆ ಸಂಸಾರದ ಸರಿಗಮದಲ್ಲಿ ಅದೆಲ್ಲ ಮುಚ್ಚಿ ಹೋಗುತ್ತದೆಯೆ? ಚೌಕಟ್ಟಿನಲ್ಲಿ ಹಿಡಿದಿಟ್ಟಾಗ ಅಗ್ನಿ ತನ್ನ ದಿವ್ಯತೆಯನ್ನು ಕಳೆದುಕೊಳ್ಳುತ್ತದೆಯೆ? ಕೊರಡನ್ನು ಹೊತ್ತಿಸಲು ಬೇರೆ ಬೆಂಕಿಗೆ ಸಾಧ್ಯವಿರುತ್ತದೆಯೆ?
ಅವಳಿಗೆ ಒಂದು ಥ್ಯಾಂಕ್ಸ್ ಕಳುಹಿಸಬೇಕಾದಾಗ ಉದ್ವೇಗದಿಂದ ಕೈ ನಡುಗುತ್ತಿತ್ತು. ದೇವರೇ ! ಎಂತಹ ತೀವ್ರ ಆಕರ್ಷಣೆ. ಪಾಬ್ಲೋ ನೆರೂಡನ ಕವಿತೆ ನೆನಪಿಗೆ ಬಂತು. ಒಮ್ಮೆ ನೀ ನನ್ನ ಕಡೆ ತಿರುಗಿ ಕಣ್ಣುಗಳೊಳಗೆ ಕಣ್ಣು ಕೂಡಿಸಿದರೆ ಬೆಂಕಿ ನನ್ನೊಳಗೆ ಭಗ್ಗನೆ ಹತ್ತಿಕೊಳ್ಳುತ್ತದೆ. ಆಗ ನಿನ್ನ ಮರೆಯಲು ಸಾಧ್ಯವೇ ಇಲ್ಲ. ಯೋಚಿಸುತ್ತಿರುವಂತೆಯೇ ಅವಳಿಂದ ಠಣಕ್ಕೆಂದು ಮೆಸೇಜ್. Deeply impressed. ಆಮೇಲೆ ಎರಡೂ ಕಡೆಯಿಂದ ಮೆಸೇಜ್‌ಗಳ ಮಹಾಪೂರ. ಆತ ಪೂರ್ತಿ ಅಲುಗಾಡಿ ಹೋದ : ನಿಮ್ಮ ಹಾಬಿಗಳೇನು? ಏನು ಮಾಡುತ್ತಿದ್ದೀರಿ? ನಮ್ಮ-ನಿಮ್ಮ ಟೇಸ್ಟ್ ನಡುವೆ ಒಂದೇ ರೀತಿ ಇರುವ ಹಾಗೇ ಅನಿಸುತ್ತದೆ- ಇತ್ಯಾದಿ. ನಡುನಡುವೆ ರೋಮ್ಯಾಂಟಿಕ್ ಆದ ಕವಿತೆಯ ಸಾಲಿನ ಚೂರುಗಳು. ಆ ಸಾಲುಗಳಿಗೆಲ್ಲ ಕಾಮಕಸ್ತೂರಿಯ ಪರಿಮಳ. ಮನಸ್ಸೆಲ್ಲ ಅಲುಗಾಡಿ ಹೋಯಿತು. ವಿಚಿತ್ರ ರೋಮಾಂಚನ. ನಿರರ್ಗಳ ಭಾವನೆ. ತಡೆಯಲಾರದೆ ಉಕ್ಕಿ ಹರಿಯುವಂಥಾದ್ದು. ಭೂಮಿ ಸೀಳಿ ಬರುವ ಒರತೆಯ ಹಾಗೆ. ಹಸಿವಿನಲ್ಲಿರುವ ಹುಲಿ ಜಿಂಕೆಯ ಮೇಲೆ ದಾಳಿ ನಡೆಸುವ ರೀತಿಯ ಕೇಂದ್ರಿಕೃತ ಭಾವನೆ. ಅದನ್ನು ಕಳೆದುಕೊಂಡು ಎಷ್ಟೋ ವರ್ಷಗಳಾಗಿ ಹೋಗಿದೆ. ಕಲ್ಪನೆಗೇ ಇಲ್ಲದಂತೆ ಮತ್ತೆ ದೊರೆತು ಬಿಟ್ಟಿದೆ.
ಭಾವನೆಯ ತೀವ್ರ ಮಡುವಿನಲ್ಲಿ ಜಾರಿಬಿದ್ದು ಹೋದ. ಮೆಸೇಜ್ ಮೇಲೆ ಮೆಸೇಜ್‌ಗಳು. ಅವಳು ಹೇಳಿಕೊಂಡಳು. ಇವನೂ ಹಾಗೆ. ಎಲ್ಲವನ್ನೂ ಹೇಳಿಕೊಂಡ. ಚಂದಿರನ ಕಂಡ ಬೆಳ್ಳಿ ಕ್ಷಣಗಳ ಕುರಿತು ಕೂಡ.ಕ್ರಮೇಣ ಅವಳೂ ಎಲ್ಲವನ್ನೂ ಬಿಚ್ಚಿಕೊಂಡಳು. ಬೆಳದಿಂಗಳಾದಳು. ಬಯಲಾದಳು. ಇಬ್ಬರದೂ ಎಲ್ಲ ಒಳವಿವರಗಳು, ಮಧುರ, ಮಾದಕ ವಿಷಯಗಳೆಲ್ಲವೂ ಮೊಬೈಲ್‌ನಿಂದ ಮೊಬೈಲಿಗೆ ಹಕ್ಕಿಗಳಂತೆ ಹಾರಿಕೊಂಡವು- ಮುಕ್ತವಾಗಿ.
ಆತನಿಗೆ ಒಂದು ರೀತಿಯ ಹುಚ್ಚು ಹಿಡಿಯಿತು. ಹಣ್ಣಾದ ಮೀಸೆಯ ಎಳೆ ಕತ್ತರಿಸಿಕೊಂಡ. ಹೊಸದಾಗಿ ಅರಳಿಕೊಂಡ ಭಾವದೊಳಗೆ ತೇಲಾಡಿದ. ಬಿಡದ ಗುಂಗು. ಇಡೀ ದಿನ. ಮೂರು ಪೆಗ್ ಸ್ಕಾಚ್‌ವಿಸ್ಕಿ ಹಾಕಿದ ಹಾಗೆ. ತೇಲಾಡುವ ಅನುಭವ. ಅರೇ! ಜೀವನದಲ್ಲಿ ಎಲ್ಲವೂ ಸಾಧ್ಯವಿದೆ. ಹೆಣ್ಣಿನೊಳಗೆ ಒಂದು ವಿಚಿತ್ರ ಶಕ್ತಿಯಿದೆ. ಕೊನರಿದ ಕೊರಡನ್ನೂ ಚಿಗುರಿಸುವ ಶಕ್ತಿ! ಎಂತಹ ಗಿಡದಲ್ಲಿಯೂ ಹೂ ಅರಳಿಸುವ ಶಕ್ತಿ. ಅದಕ್ಕೆ ಚಿಮ್ಮಲು ದಾರಿ ಮಾಡಿಕೊಡಬೇಕಾಗುತ್ತದೆ. ಅಷ್ಟೇ. ಭಾವನೆಗಳು ಅವನೊಳಗೆ ಕುದಿದುಕುದಿದು ವಿಸ್ಫೋಟಗೊಂಡವು. ಭಾವುಕನಾಗಿ ಹೋದ. ತಡೆಯಲಾರದೆ ಒಂದು ದಿನ ಸಂದೇಶ ಕಳುಹಿಸಿದ. ನೀವಿಲ್ಲದೆ ಇರಲಾರೆ. ಎಂತಹ ಅದ್ಭುತ ಸುಂದರಿ ನೀವು! ನಿಮ್ಮನ್ನು ವಿವಾಹವಾಗಬೇಕೆಂದು ಅನಿಸುತ್ತಿದೆ.
ಉತ್ತರಕ್ಕಾಗಿ ಕಾದು ಕುಳಿತ. ಅದೇ ವೇಳೆಗೆ ಅವನ ಮೊಬೈಲ್ ಬ್ಯಾಟರಿ ಡಿಸ್‌ಚಾರ್ಜ್. ಚಾರ್ಜರ್ ಆಫೀಸಿಗೆ ತಂದಿಲ್ಲ. ಗಡಿಬಿಡಿಯಲ್ಲಿ ಆಫೀಸ್ ಕೆಲಸ ಮುಗಿಸಿ ಮನೆಗೆ ಹೋದ. ಕರೆಂಟ್ ಇಲ್ಲ. ಒಳಗೇ ಕುದಿದ. ಚಹಾ ಕುಡಿದ. ಟಾಯ್ಲೆಟ್‌ಗೆ ಹೋದ. ಕರೆಂಟ್‌ಬಂತು. ಅವಳ ಹಲವಾರು ಮೆಸೇಜ್‌ಗಳು ಈಗ ವಾಟ್ಸಾಪ್‌ನಲ್ಲಿ ಬಿದ್ದಿರುತ್ತವೆ. ಎಕ್ಕೆ„ಟ್ ಆದ. ಆದರೆ, ಮೆಸೇಜ್ ಇರಲೇ ಇಲ್ಲ. ಅದೇ ಮೆಸೇಜನ್ನು ಇನ್ನೊಮ್ಮೆ ಒತ್ತಿದ. ವಾಟ್ಸಾಪ್‌ನಿಂದ ದಿವ್ಯ ಮೌನ. ಅವಳು ಕೊನೆಯದಾಗಿ ನೋಡಿದ್ದು ಮೊದಲಿನ ಮೆಸೇಜ್ ಮಾತ್ರ. ನಂತರ ಅವಳ ವಾಟ್ಸಾಪ್ ಮೌನವಾಗಿ ಹೋಗಿದೆ. ನಿಶ್ಚಲವಾಗಿ ಶಿವನಂತೆ ಕಲ್ಲಾಗಿ ಹೋಗಿದೆ. ಮತ್ತೆ ಅದೇ ಮೆಸೇಜ್‌ನ ಕಾಮಕಸ್ತೂರಿಗಾಗಿ ಕಾಯುತ್ತಲೇ ಉಳಿದ.
ದಿನಗಳು ಹೋಗುತ್ತ ಹೋದಂತೆ ಆತನಿಗೆ ಅರಿವಾಗುತ್ತ ಹೋಗಿದ್ದು ಇವಳು ಮತ್ತೆ ಸಿಗುವುದಿಲ್ಲ ಎನ್ನುವುದು. ಬಹುಶಃ ಅವಳು ಈತನ ಮೆಸೇಜ್‌ಗಳನ್ನು ಬ್ಲಾಕ್‌ಮಾಡಿದ್ದಾಳೆ. ನಂಬರ್‌ಡಿಲೀಟ್ ಮಾಡಿದ್ದಾಳೆ. ಈಗ ಆತನಿಗೆ ತೀವ್ರವಾಗಿ ಅನಿಸುವುದೆಂದರೆ ಬಹುಶಃ ವಿವಾಹದ ಪ್ರಸ್ತಾಪ ಮಾಡಬಾರದಿತ್ತು.
ರಾಮಚಂದ್ರ ಹೆಗಡೆ