Advertisement

ಸಂಕಷ್ಟಕ್ಕೆ ದೂಡಿದ ಬಿರುಗಾಳಿ ಮಳೆಯ ಆರ್ಭಟ

02:45 PM May 26, 2019 | Team Udayavani |

ನಾಗಮಂಗಲ: ತಾಲೂಕಿನಾದ್ಯಂತ ಗುರುವಾರ ಸಂಜೆ ಬಿದ್ದ ಆಲಿಕಲ್ಲು ಸಹಿತ ಭಾರೀ ಮಳೆಗೆ ಹಲವು ಗ್ರಾಮಗಳು ಅಪಾರ ನಷ್ಟ ಅನುಭವಿಸಿದ್ದರೆ ಶುಕ್ರವಾರ ಸಂಜೆ ಮತ್ತೆ ವರುಣನ ರುದ್ರ ನರ್ತನ ಮುಂದುವರೆದಿತ್ತು.

Advertisement

ಗುರುವಾರ ಸುರಿದ ಮಳೆಗೆ ಕೇವಲ ಅಕ್ಕಪಕ್ಕದ ಗ್ರಾಮಗಳಷ್ಟೇ ನಷ್ಟ ಅನುಭವಿಸಿದರೆ ಶುಕ್ರವಾರದ ಮಳೆಗಾಳಿಗೆ ಪಟ್ಟಣ ಸೇರಿದಂತೆ ಹಲವು ಗ್ರಾಮಗಳು ನಷ್ಟ ಅನುಭವಿಸಿವೆ.

ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆಯಲ್ಲಿ ಕೆಂಪು ಹೂಗಳಿಂದ ಮೈದುಂಬಿಕೊಂಡು ಮಂಡ್ಯದಿಂದ ನಾಗಮಂಗಲಕ್ಕೆ ಬರುವವರನ್ನು ಸ್ವಾಗತಿಸುತ್ತಿದ್ದ ಗುಲ್ಮೊಹರ್‌ನ ಅನೇಕ ಮರಗಳು ಧರೆಗುರುಳಿದ್ದವು. ಕೇವಲ ಮರಗಳಷ್ಟೇ ಅಲ್ಲದೆ ವಿದ್ಯುತ್‌ ಕಂಬಗಳೂ ನೆಲಕ್ಕುರುಳಿದ್ದವು. ವಾಹನ ಸಂಚಾರ ಅಸ್ತವ್ಯಸ್ತ ಅಷ್ಟೇ ಅಲ್ಲ ಪಾದಚಾರಿಗಳೂ ಅತ್ತಿಂದಿತ್ತ ನಡೆದಾಡುವುದೂ ದುಸ್ತರವಾಗಿತ್ತು.

ನೆಲಕಚ್ಚಿದ ಅಪಾರ ಮೇವು:ಇಷ್ಟೇ ಅಲ್ಲದೆ ಅನೇಕರ ಜಮೀನಿನಲ್ಲಿ ಮುಸುಕಿನಜೋಳದ ಕಡ್ಡಿಗಳು ಸಂಪೂ ರ್ಣವಾಗಿ ಗಾಳಿ ರಭಸಕ್ಕೆ ಬುಡಮೇಲಾಗಿವೆ.

ಮುಸುಕಿನಜೋಳದ ಕಡ್ಡಿಗಳು ಹಾಳಾಗದೆ ಇದ್ದಿದ್ದರೆ ಕನಿಷ್ಟ 4 ರಿಂದ 5 ತಿಂಗಳ ಅವಧಿಗೆ ಜಾನುವಾರುಗಳಿಗೆ ಮೇವಾ ಗುತ್ತಿತ್ತು ಎಂದು ರೈತರು ಹಲುಬುತ್ತಿದ್ದರು. 30 ವರ್ಷದ ಹಿಂದಿನ ಅರಳಿಮರ ಬುಡ ಸಮೇತ ಧರೆಗುರುಳಿತ್ತು. 12 ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕೆ ಬಿದ್ದಿವೆ.

Advertisement

30 ಅಡಿ ದೂರದಲ್ಲಿ ಬಿದ್ದಿತ್ತು:ಕರಡಹಳ್ಳಿಯಲ್ಲಿ ಬಿರುಗಾಳಿಯ ರಭಸದ ಉದಾಹರಣೆಯೆಂದರೆ ಗ್ರಾಮದ ನಿವಾಸಿ ಭಟ್ರಾ ರಾಮಣ್ಣ ಎಂಬವರ ಮನೆಗೆ ಹೊಂದಿಸಲಾಗಿದ್ದ 1800 ಕೆ.ಜಿ. ತೂಕದ ಕಬ್ಬಿಣದ ಚಾವಣಿ ಕಿತ್ತು ಹಾರಿಹೋಗಿ 30 ಅಡಿ ದೂರದಲ್ಲಿ ಬಿದ್ದಿತ್ತು ಎಂದು ಗ್ರಾಮದ ಪ್ರತ್ಯಕ್ಷ ದರ್ಶಿಗಳು ತಿಳಿಸಿದರು.

ಬಿರುಗಾಳಿ, ಸುಂಟರಗಾಳಿ ಎಂದು ಕೇಳಿದ್ದೆವು. ಆದರೆ ಶುಕ್ರವಾರ ರಾತ್ರಿ ಅದರ ರೌದ್ರಾವತಾರದ ಪ್ರತ್ಯಕ್ಷ ದರ್ಶನವಾಯಿತು. ನನ್ನಿಡೀ ಜೀವಮಾನದಲ್ಲಿ ಇಂತಹ ಗಾಳಿಯ ಆರ್ಭಟ ಕಂಡಿರಲಿಲ್ಲ. ಕಬ್ಬಿಣದ ತುಂಡುಗಳು ಗಾಳಿಯಲ್ಲಿ ತೇಲುವಂತಹ ದೃಶ್ಯ ಕಂಡು ನಿಜಕ್ಕೂ ಅಚ್ಚರಿ ಪಟ್ಟಿದ್ದೇನೆ. ಆದ ನಷ್ಟಕ್ಕೆ ತಾಲೂಕು ಆಡಳಿತ ಸ್ಪಂದಿಸಿ ಶೀಘ್ರವೇ ಪರಿಹಾರ ಕಲ್ಪಿಸಲಿ.● ಸೀತಾರಾಮು, ಹರಳಕೆರೆ ಗ್ರಾಮ ಪಂಚಾಯಿತಿ ಸದಸ್ಯ

ಪಪ್ಪಾಯಿ, ಸಪೋಟ ಇನ್ನಿತರೆ ಮರಗಳು ಧರೆಗೆ:

ತಾಲೂಕಿನ ಕೂಗಳತೆ ದೂರದ ಹರಳಕೆರೆ ಗ್ರಾಮ ಮಳೆ ಗಾಳಿಯ ಆರ್ಭಟಕ್ಕೆ ಮುಕ್ಕಾಲು ಪಾಲು ನಲುಗಿ ಹೋಗಿದೆ. ಗ್ರಾಮದ ಗೋಪಾಲಕೃಷ್ಣ ಎಂಬವರ ಜಮೀನಿನಲ್ಲಿ ಹಾಕಲಾಗಿದ್ದ 1000 ಕ್ಕೂ ಹೆಚ್ಚು ಪಪ್ಪಾಯ ಗಿಡಗಳು ಭೂಮಿ ಮೇಲೆ ಮಲಗಿ ನಿದ್ರಿಸುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿತ್ತು. 15 ಕ್ಕೂ ಹೆಚ್ಚು ಸಪೋಟ ಮರಗಳು ಹಣ್ಣುಗಳ ಸಮೇತ ನೆಲಕ್ಕುರುಳಿದ್ದವು. 5 ಬೇವಿನ ಮರ ಹಾಗೂ 1 ಮಾವಿನ ಮರ ಧರೆಗುರುಳಿದೆ. ಹಾಗೆಯೇ ಸೀತಾರಾಮು ಎಂಬವರ ಶೆಡ್‌ ಗಾಳಿ ಮಳೆಗೆ ಆಹುತಿಯಾಗಿತ್ತು. ಕರಿ ಮುದ್ದಪ್ಪ ಎಂಬುವವರ ವಾಸದ ಮನೆಗೆ ಹೊಂದಿ ಕೊಂಡಂತಿದ್ದ ಈರುಳ್ಳಿ ಶೆಡ್‌ 30 ಕ್ವಿಂಟಲ್ ಈರುಳ್ಳಿ ಸಮೇತ ಹಾನಿ ಗೊಳಗಾಗಿದೆ. ಮರಿಯಣ್ಣ ಮತ್ತು ಕೃಷ್ಣೇಗೌಡ ಎಂಬವರ ಶೆಡ್ಡು, ಮರಿಯಪ್ಪ ಎಂಬವರ 30 ಕ್ವಿಂಟಲ್ ಈರುಳ್ಳಿ ಹಾಗೂ ಶೆಡ್‌, ಸಣ್ಣಮರಿ ಎಂಬವರಿಗೆ ಸೇರಿದ 30 ಕ್ವಿಂಟಲ್ ಮತ್ತು ಶೆಡ್‌, ಶಿವಲಿಂಗಮ್ಮ ಸೀತಾರಾಮು ಎಂಬುವವರ 1 ತೆಂಗಿನಮರ, ಮೆಣಸಿನ ಗಿಡ, ಟೊಮೋಟೊ ಗಿಡ, ಶಿವಲಿಂಗಪ್ಪ ಎಂಬವರ 1 ಶೆಡ್‌, ಚನ್ನೇಗೌಡ ಸಿದ್ಧಯ್ಯ ಎಂಬವರ ದನದ ಕೊಟ್ಟಿಗೆ ಹೀಗೆ ಹಲವೆಡೆ ರೈತರ ಸೇರಿದಂತೆ ನಾಗರಿಕರ ಆಸ್ತಿಪಾಸ್ತಿಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next