ಗ್ರೂಪ್: ದಾರಿ ತಪ್ಪಿದ ಮಗ
ಅಡ್ಮಿನ್‌ಗಳು: ರೋಹಿತ್ ಪೈ, ನಿತೀಶ್ ಕೆ., ಲಾವಣ್ಯ, ಸನ್ನಿಧಿ, ಸಂಘಮಿತ್ರಾ, ಶ್ರೀರಾಮ್, ಚಿಂತನ್ ಶೆಟ್ಟಿ, ಮಯೂರ್…
ನಾವು ನಿಂತಲ್ಲಿ ನಿಲ್ಲೋರಲ್ಲ. ಕುಂತಲ್ಲಿ ಕೂರೋರಲ್ಲ. “ಓಡಾಡ್ತ ಇದ್ರೇನೇ ಮನುಷ್ಯ ಜನ್ಮ’ ಅನ್ನೋ ಮಾತಿನಲ್ಲಿ ನಂಬಿಕೆ ಇಟ್ಟವರು. ವೀಕೆಂಡ್ ಬಂತು ಅಂದ್ರೆ, ಟ್ರೆಕ್ಕಿಂಗ್ ಹೊರಡೇ ಇದ್ದರೆ, ಸೋಮವಾರ ಯಾರಿಗೂ ಕೆಲಸ ಮಾಡೋದಿಕ್ಕೇ ಮೂಡೇ ಇರೋದಿಲ್ಲ. ಟ್ರೆಕ್ಕಿಂಗ್ ಸಮಾಚಾರಕ್ಕೆಂದೇ ಮೀಸಲಿರುವ “ದಾರಿ ತಪ್ಪಿದ ಮಗ’ ಎಂಬ ಗ್ರೂಪ್‌ನಲ್ಲಿ ಚರ್ಚೆ ಆಗೋದೇ, ಸುತ್ತಾಟದ ವಿಚಾರಗಳು.
ಜಗತ್ತಿನ ಎಲ್ಲ ಕಡೆ ಇರುವಂತೆ, ನಮ್ಮ ಗುಂಪಿನಲ್ಲೂ ಒಬ್ಬ ಸೋಮಾರಿ ಹುಡುಗನಿದ್ದಾನೆ. ಅವನ ಹೆಸರು, ನಿತೀಶ್. ಬೆಟ್ಟ ಹತ್ತುತ್ತೀವಿ ಅಂದಾಗ, ಅವನಿಗೆ ಕಾಲು ನೋವು ಬರುತ್ತೆ, ಊಟ ಮಾಡೋಣ ಅಂತಂದಾಗ ಅವನ ಹೊಟ್ಟೆ ವಿಪರೀತ ಹಸಿದಿರುತ್ತೆ. ಟ್ರೆಕ್ಕಿಂಗ್‌ನಲ್ಲಿ ಎಲ್ಲರ ಟೈಮ್ ವೇಸ್ಟ್ ಮಾಡಿ, ಮಜಾ ಅನುಭವಿಸುವ ಈ ಪುಣ್ಯಾತ್ಮನಿಗೆ ಒಮ್ಮೆ ಸಾಮೂಹಿಕವಾಗಿ ಪಾಠ ಕಲಿಸುವ ಸ್ಕೆಚ್ ಹಾಕಿದೆವು.
ಅವತ್ತು ವಯ್ನಾಡಿಗೆ ಹೋಗಿದ್ದೆವು. ಬೆಟ್ಟದ ಮೇಲೆ ಕ್ಯಾಂಪ್ ಫೈರ್ ಹಾಕಿ, ಟೆಂಟ್ ಹಾಕ್ಕೊಂಡು, ಎಂದಿನ ಲಹರಿಯಲ್ಲಿದ್ದೆವು. ಎಂದಿನಂತೆ ನಿತೀಶ್, ಬೇಗನೆ ನಿದ್ದೆಗೆ ಜಾರಿದ. ಅದೇ ಸಮಯ ಎಂದುಕೊಂಡೇ, ಅಡ್ಮಿನ್ ರವಿಚಂದ್ರ ಒಂದು ಉಪಾಯ ಮಾಡಿದ. ಅವನ ಮೊಬೈಲಿನ ಪಾಸ್‌ವರ್ಡ್ ಗೊತ್ತಿದ್ದರಿಂದ, “ಬೆಳಗ್ಗೆ ಬೇಗ ಇಲ್ಲಿಂದ ಎದುರಿರುವ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೊರಡೋಣ’ ಅಂತ ಮೆಸೇಜು ಟೈಪಿಸಿದ. ಎಲ್ಲರೂ ಥಮ್ಸಪ್ ಮಾಡಿ, “ಓಕೆ ನಿತೀಶ್’, “ಗ್ರೇಟ್ ನಿತೀಶ್’ ಅಂತೆಲ್ಲ ರಿಪ್ಲೆ„ ಕೊಟ್ಟೆವು. ಅದರಂತೆ, ಬೆಳಗ್ಗೆ ನಾಲ್ಕರ ಹೊತ್ತಿಗೆ, ಎಲ್ಲರೂ ಗಂಟು, ಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡಿದ್ದೆವು.
ನಿತೀಶ್ ಮಾತ್ರ, ಬೆಳಗ್ಗೆ ಸೂರ್ಯ ಹುಟ್ಟಿದ ಮೇಲೆ ಎದ್ದು, ಅಕ್ಕಪಕ್ಕ ನೋಡ್ತಾನೆ, ಯಾರೂ ಇಲ್ಲ! ಅವನ ಮೊಬೈಲ್‌ನಿಂದ ಕರೆ ಬಂದಾಗ, ಯಾರೂ ಎತ್ತಲಿಲ್ಲ. ನಂತರ ವಾಟ್ಸಾéಪ್ ಗ್ರೂಪ್ ನೋಡಿದಾಗಲೇ ಅವನಿಗೆ ಬ್ರೇಕಿಂಗ್ ನ್ಯೂಸ್ ಗೊತ್ತಾಗಿದ್ದು!
ಕೊನೆಗೆ, ಎಲ್ಲರೂ ಅವನನ್ನು ಹಿಲ್ ಸ್ಟೇಷನ್ನಿನ ಆರಂಭದ ಪಾಯಿಂಟ್‌ನಲ್ಲಿ ಹಾರ ಹಾಕಿ ಸ್ವಾಗತಿಸಿದೆವು.
– ಲಾವಣ್ಯ ಶ್ರೀನಿಧಿ, ಬೆಂಗಳೂರು