ಹುಬ್ಬಳ್ಳಿ: ಲಿಡ್ಕರ್ ಫಲಾನುಭವಿಗಳಿಗೆ ನೀಡಲಾದ ನಿವೇಶನಗಳ ನೋಂದಣಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಐಟಿ ಪಾರ್ಕ್‌ನಲ್ಲಿ ಬಾಬು ಜಗಜೀವನರಾಮ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ನವೀಕೃತ ಲಿಡ್ಕರ್ ಮಾರಾಟ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 35 ವರ್ಷಗಳಿಂದ ಲಿಡ್ಕರ್ ಫಲಾನುಭವಿಗಳ ನಿವೇಶನಗಳ ನೋಂದಣಿಯಾಗಿಲ್ಲ. ಈ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರತಿ ನಿವೇಶನದ ನೋಂದಣಿಗೆ 27,000 ರೂ. ವೆಚ್ಚ ತಗುಲಲಿದ್ದು, ಇದನ್ನು ಸರ್ಕಾರದಿಂದ ಭರಿಸಲು ಪ್ರಯತ್ನಿಸಲಾಗುವುದು ಎಂದರು.
ನಗರದಲ್ಲಿ ನವೀಕೃತ ಮಾರಾಟ ಮಳಿಗೆ ಉದ್ಘಾಟನೆಗೊಂಡಿರುವುದು ಸಂತಸದ ಸಂಗತಿ. ಯಾವುದೇ ಬ್ರ್ಯಾಂಡ್ ಪಾದರಕ್ಷೆಗಳಿಗೂ ಕಡಿಮೆ ಇಲ್ಲದಂತೆ ಗುಣಮಟ್ಟದ ಉತ್ಪನ್ನಗಳು ಇಲ್ಲಿ ಲಭಿಸುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿ ಮಾಡಿ ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ದಿವಾಕರ ಮಾತನಾಡಿ, ಕಳೆದ 3-4 ವರ್ಷಗಳಿಂದ ನಿಗಮ ಲಾಭಗಳಿಸುತ್ತಿದೆ. 2015-16ನೇ ಸಾಲಿನಲ್ಲಿ ನಿಗಮಕ್ಕೆ 2 ಕೋಟಿ ರೂ. ಲಾಭವಾಗಿದೆ.
ಚರ್ಮ ಕೈಗಾರಿಕೆಯನ್ನು ಅವಲಂಬಿಸಿದ ಯುವಕರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಸ್ವಂತ ಮಳಿಗೆ ತೆರೆಯಲು ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ಉಪಮಹಾಪೌರ ಲಕ್ಷ್ಮಿ ಉಪ್ಪಾರ, ದಾಕ್ಷಾಯಿಣಿ ಬಸವರಾಜ ಉಪಸ್ಥಿತರಿದ್ದರು.