ಬಾಗಲಕೋಟೆ : ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜನವಾರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ಕಲ್ಲು ಬೀಳುವ ಪ್ರಕರಣ ಭಾನಾಮತಿ ಕಾಟದಿಂದ ನಡೆದಿದ್ದಲ್ಲ ಬದಲಾಗಿ ಆ ಶಾಲೆಯ ವಿದ್ಯಾರ್ಥಿನಿಯೊಬ್ಬಳ ಕೈಚಳದಿಂದ ನಡೆದಿರುವುದು ಎಂದು ಈಗ ಬಯಲಾಗಿದೆ.
ಇಂಜನವಾರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1ರಿಂದ 5ನೇ ತರಗತಿ ಹೊಂದಿದ್ದು, ಐದು ಶಾಲಾ ಕೊಠಡಿಗಳಿವೆ. ಇಲ್ಲಿ ಒಟ್ಟು 24 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಓರ್ವ ಮುಖ್ಯೋಪದ್ಯಾಯಕ ಸೇರಿ ಇಬ್ಬರು ಶಿಕ್ಷಕರಿದ್ದಾರೆ.
ಕಳೆದ ಒಂದು ತಿಂಗಳಿಂದ ಇಲ್ಲಿನ ಎರಡು ಕೊಠಡಿಗಳ, ನಾಲ್ಕೈದು ವಿದ್ಯಾರ್ಥಿಗಳ ಮೇಲೆ ಕಲ್ಲು ಬೀಳುತ್ತಿದ್ದವು. ಈ ಕುರಿತು ಸ್ವತಃ ಗುಳೇದಗುಡ್ಡ ಪಿಎಸ್‌ಐ, ಡಿಡಿಪಿಐ ಸಹಿತ ಹಲವು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಡಿಡಿಪಿಐ ಮತ್ತು ಪಿಎಸ್‌ಐ ಹೋದಾಗಲೂ ಕಲ್ಲು ಬಿದ್ದಿದ್ದವು. ಹೀಗಾಗಿ ಇದೊಂದು ಭಾನಾಮತಿ ಕಾಟ ಎಂಬ ನಿರ್ಧಾರಕ್ಕೆ ಬರಲಾಗಿತ್ತು.
ಈ ಪ್ರಕರಣ ಡಿಸಿ ಮತ್ತು ಎಸ್ಪಿ ಗಮನಕ್ಕೆ ಬಂದ ಬಳಿಕ, ಗಂಭೀರತೆ ಪಡೆದಿತ್ತು. ಇಂದಿನ ವೈಜ್ಞಾನಿಕ ಯುಗದಲ್ಲಿ ಭಾನಾಮತಿ ಕಾಟವಿದೆ ಎಂದರೆ ಒಪ್ಪಿಕೊಳ್ಳಲಲು ಸಾಧ್ಯವಿಲ್ಲ. ಯಾರೋ ಕಿಡಿಗೇಡಿಗಳ ಕೃತ್ಯ ಇರಬಹುದು. ಇದನ್ನು ಪತ್ತೆಮಾಡಿ ಎಂದು ಸೂಚನೆ ನೀಡಲಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ, ಶಾಲೆಯ ಐದು ಕೊಠಡಿಯಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಸಿಸಿ ಕ್ಯಾಮರಾ ಅಳವಡಿಸಿದ ಬಳಿಕ, ಕಲ್ಲು ಬೀಳುವ ಘಟನೆ ನಿಂತಿತ್ತು. ಆದರೆ, ಇದನ್ನು ಯಾರು ಮಾಡುತ್ತಾರೆ ಎಂಬುದನ್ನು ಪತ್ತೆ ಮಾಡುವುದು ಪೊಲೀಸ್ ಇಲಾಖೆಗೆ ಸವಾಲಾಗಿತ್ತು.
ಕಳೆದ ಒಂದು ವಾರದಿಂದ ಶಾಲೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ನಿರಂತರ ಪರಿಶೀಲನೆ ಜತೆಗೆ ನಿಗಾ ವಹಿಸಿದ್ದು, ಶಾಲೆಯ ಓರ್ವ ಬಾಲಕಿಯೇ ಈ ರೀತಿ ಕಲ್ಲು ಎಸೆಯುತ್ತಿದ್ದದ್ದು ಖಚಿತಪಟ್ಟಿದೆ. ಆ ಬಾಲಕಿಯನ್ನು ವಿಚಾರಿಸಲಾಗಿದ್ದು, ಅವಳೂ ಒಪ್ಪಿಕೊಂಡಿದ್ದಾಳೆ. ಆದರೆ, ಆ ಬಾಲಕಿಯ ಭವಿಷ್ಯದ ಹಿತೃದೃಷ್ಟಿಯಿಂದ ಅವಳ ಹೆಸರು, ಗುರುತು ಪತ್ತೆಯಾಗದಂತೆ ಬಹಿರಂಗಪಡಿಸದೇ, ಎಚ್ಚರಿಕೆ ನೀಡಿ ಬಿಡಲಾಗಿದೆ.
ಇಂಜನವಾರಿ ಶಾಲೆಯ ಮಕ್ಕಳ ಮೇಲೆ ಕಲ್ಲು ಬೀಳುವ ಪ್ರಕರಣ ಪತ್ತೆಯಾಗಿದ್ದು, ಯಾವುದೇ ಭಾನಾಮತಿ ಕಾಟದಿಂದ ಅದು ನಡೆದಿದ್ದಲ್ಲ. ಆ ಶಾಲೆಯ ಓರ್ವ ವಿದ್ಯಾರ್ಥಿನಿಯೇ ನಿತ್ಯ ಶಾಲೆಗೆ ಕಲ್ಲು ತೆಗೆದುಕೊಂಡು ಬಂದು, ಇತರ ವಿದ್ಯಾರ್ಥಿಗಳ ಮೇಲೆ ಎಸೆಯುತ್ತಿದ್ದಳು. ಇದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಆದರೆ ಆ ಬಾಲಕಿ ಯಾಕೆ ಕಲ್ಲು ಎಸೆಯುತ್ತಿದ್ದಳು ಎಂಬುದು ತಿಳಿದು ಬಂದಿಲ್ಲ.
ಲೋಕೇಶ ಜಗಲಾಸರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ