Advertisement

ಕಲ್ಲು ಎಸೆಯುವ ಹಬ್ಬ

07:00 PM May 15, 2019 | mahesh |

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಲವು ಬಗೆಯ ಆಚರಣೆಗಳಿವೆ, ಹಾಗೆಯೇ ಕೆಲವು ಹಬ್ಬಗಳು ಹಿಂದಿನ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿವೆ. ಅಂತ ಕೆಲವು ಆಚರಣೆಗಳಲ್ಲಿ ಮಧ್ಯಪ್ರದೇಶದ ಗೋಟಾ¾ರ್‌ ಮೇಳ ಅಥವಾ ಕಲ್ಲು ಎಸೆಯುವ ಆಚರಣೆಯೂ ಒಂದು. ನೋಡುಗರಿಗೆ ಒಂದು ರೀತಿಯ ರೋಮಾಂಚನ ಉಂಟುಮಾಡುವ ಮತ್ತು ಅಷ್ಟೇ ಅಪಾಯಕಾರಿಯಾದ ಈ ಆಚರಣೆ ಇಂದಿಗೂ ಹಳೆಯ ಸಂಪ್ರದಾಯವಾಗಿದೆ.

Advertisement

ಮಧ್ಯಪ್ರದೇಶದ ಚಿಂದ್ವಾರದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಪಂದುರ್‌ ನಾ ಮತ್ತು ಸಾವರ್ಗಾನ್‌ ಎಂಬ ಹಳ್ಳಿಯ ನಿವಾಸಿಗಳ ನಡುವೆ ನಡೆಯುವ ಈ ಕಾಳಗ ಅತ್ಯಂತ ಕುತೂಹಲ ಮತ್ತು ಬೀಭತ್ಸವಾಗಿ ಸಾಗುತ್ತದೆ. ಈ ಎರಡು ಹಳ್ಳಿಗಳ ನಡುವೆ ಹರಿಯುವ ಜಾಮ್‌ ನದಿಯು ಈ ಆಚರಣೆಯ ಕೇಂದ್ರಬಿಂದು. ಈ ಆಚರಣೆಯು ಪ್ರತಿ ವರ್ಷದ ಭಾದ್ರಪದ ಮಾಸದ ಎರಡನೇ ದಿನ ನಡೆಯುತ್ತದೆ.

ಗೋಟಾರ್‌ ಮೇಳಕ್ಕೆ ಒಂದು ದಿನ ಬಾಕಿ ಇರುವಾಗಲೇ ಜಾಮ್‌ ನದಿಯ ಮಧ್ಯಭಾಗದಲ್ಲಿ ದೊಡ್ಡ ಮರದ ಕಾಂಡವನ್ನು ನಿಲ್ಲಿಸಿ ಅದರ ತುದಿಯಲ್ಲಿ ಧ್ವಜ ಹಾರಿಸಲಾಗುತ್ತದೆ. ಹಾಗೂ ನದಿಯ ಇಕ್ಕೆಲಗಳಲ್ಲಿ ಎರಡೂ ಹಳ್ಳಿಗಳವರು ಕಲ್ಲುಗಳನ್ನು ಗುಡ್ಡೆ ಹಾಕಿಕೊಳ್ಳುತ್ತಾರೆ. ಹಬ್ಬದ ದಿನ ಎರಡೂ ಹಳ್ಳಿಗಳ ಯಾರಾದರೂ ಒಬ್ಬ ವ್ಯಕ್ತಿ ಹೋಗಿ ಧ್ವಜವನ್ನು ತರಬೇಕು. ಯಾವ ಹಳ್ಳಿಯವರು ಧ್ವಜ ಪಡೆಯುವರೋ ಅವರೇ ವಿಜಯಶಾಲಿಗಳಾಗುತ್ತಾರೆ. ಹಾಗಾಗಿ ಆ ಕೆಲಸಕ್ಕೆ ಸಾವಿನ ಭಯವಿಲ್ಲದ ಧೃಡಕಾಯದ ಯುವಕರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.

ಗೋಟಾ¾ರ್‌ ಮೇಳದ ನಿಯಮ ಬಹಳ ಸರಳವಾಗಿದ್ದು ಇದರಲ್ಲಿ ಭಾಗವಹಿಸುವವರು ಅಂದರೆ ದ್ವಜವನ್ನು ತರಲು ಪ್ರಯತ್ನಿಸುವವರು ಇದೇ ತಮ್ಮ ಜೀವನದ ಅಂತಿಮ ದಿನ ಎಂದು ತಿಳಿದಿರಬೇಕು ಅಷ್ಟೆ. ಹಬ್ಬದ ದಿನ ಇಬ್ಬರೂ ನೀರಿಗೆ ಹಾರಿದಾಕ್ಷಣ ಒಮ್ಮೆಗೇ ಕಲ್ಲಿನ ಮಳೆ ಶುರುವಾಗುತ್ತದೆ. ತಮ್ಮ ಊರಿನ ಘನತೆ ಕಾಪಾಡಿಕೊಳ್ಳಲು ಎರಡೂ ಕಡೆಯವರು ಕಲ್ಲಿನ ಮಳೆ ಸುರಿಸುತ್ತಲೇ ಹೋಗುತ್ತಾರೆ. ಕೊನೆಗೆ ಧ್ವಜ ತಂದವರು ವಿಜಯಿಗಳಾಗುತ್ತಾರೆ. ಸ್ಥಳೀಯ ದಂತ ಕಥೆಯ ಪ್ರಕಾರ, ಗೋಟಾ¾ರ್‌ ಮೇಳದ ಆಚರಣೆ ಪಂದುರ್‌ ನಾ ರಾಜನ ಕತೆಯಿಂದ ಪ್ರೇರಿತವಾಗಿದೆ.

ಈ ರಾಜ, ಸಾವರ್ಗಾನ್‌ ನಗರದ ರಾಜನ ಮಗಳ ಸೌಂದರ್ಯದ ಬಗ್ಗೆ ಕೇಳಿದ ಮೇಲೆ ಆಕೆಯನ್ನು ಹೇಗಾದರೂ ಮಾಡಿ ಪಡೆಯುವ ಹಂಬಲ ಹೆಚ್ಚಾಯಿತು. ಧೈರ್ಯ ಸಾಹಸಗಳಿಗೆ ಹೆಸರಾದ ಆತ ನದಿ ದಾಟಿ ಹೋಗಿ ಆಕೆಯನ್ನು ಅಪಹರಿಸಿದ. ಸಾವರ್ಗಾನಿನ ಪ್ರಜೆಗಳಿಗೆ ಈ ವಿಷಯ ತಿಳಿಯುತ್ತಿದ್ದಂತೆ ಆವರು ಅಪಹರಣಕಾರನನ್ನು ಹಿಡಿಯಲು ದೌಡಾಯಿಸಿದರು. ಅವರು ಬರುವ ವೇಳೆಗೆ ಪಂದುರ್ನಾದ ರಾಜ ನದಿ ದಾಟಿದ್ದ. ಆದರೂ ಧೃತಿಗೆಡದ ಸಾವರ್ಗಾನ್‌ ಪ್ರಜೆಗಳು ಕಲ್ಲುಗಳನ್ನು ಆಯ್ದು ಬೀಸಿ ಆತನತ್ತ ಒಗೆದರು. ಇದನ್ನರಿತ ಪಂದುರ್‌ನಾ ರಾಜ್ಯದ ಪ್ರಜೆಗಳು ತಮ್ಮ ರಾಜನನ್ನು ಕಾಪಾಡಲು ಧಾವಿಸಿ ಅವರು ಕೂಡ ತಮ್ಮ ಕಡೆಯ ನದಿಯ ದಡದಲ್ಲಿದ್ದ ಕಲ್ಲುಗಳಿಂದ ಸಾವರ್ಗಾನ್‌ ಪ್ರಜೆಗಳತ್ತ ಬೀಸಿ ಒಗೆದು ಸೇಡು ತೀರಿಸಿಕೊಂಡರು. ತಮ್ಮ ರಾಜ ಸುರಕ್ಷಿತವಾಗಿ ಅರಮನೆಯನ್ನು ತಲುಪಲು ಅವಕಾಶ ಕಲ್ಪಿಸಿಕೊಟ್ಟರು.

Advertisement

ಇವತ್ತು ಗೋಟಾ¾ರ್‌ ಮೇಳ ಎನ್ನುವ ಕಲ್ಲು ಎಸೆಯುವ ಆಚರಣೆ ಸಂಪ್ರಾದಾಯವಾಗಿ ಉಳಿದಿದೆ. ಇಂಥ ಅಮಾನವೀಯ, ಭಯಾನಕ ಆಚರಣೆಯನ್ನು ಕೈಬಿಡಲು ಮಧ್ಯಪ್ರದೇಶ ಸರ್ಕಾರ ಮಾಡಿದ ಯಾವ ಮನವಿಯೂ ಕೈಗೂಡಿಲ್ಲ. ನೂರಾರು ಜನ ಗಾಯಗೊಳ್ಳುವ ಈ ಆಚರಣೆ ಅಪಾಯಕಾರಿಯಾದುದು.

– ಪುರುಷೋತ್ತಮ್‌ ವೆಂಕಿ

Advertisement

Udayavani is now on Telegram. Click here to join our channel and stay updated with the latest news.

Next