Advertisement
ಒಣ ದ್ರಾಕ್ಷಿ ಖರೀದಿಸಲು ಮಾಡಿದ್ದ ಸಾಲ ತೀರಿಸಲು ಪರಿಚಯಸ್ಥರ ಗೋದಾಮಿಗೆ ಕನ್ನ ಹಾಕಿ, ಅಲ್ಲಿದ್ದ 17 ಲಕ್ಷ ರೂ. ಮೌಲ್ಯದ ಗೋಡಂಬಿ ಕಳವು ಮಾಡಿ ಬೇರೆಡೆ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ವ್ಯಾಪಾರಿಯನ್ನು ಬಂಧಿಸುವಲ್ಲಿ ವೈಯಾಲಿಕಾವಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
Related Articles
Advertisement
ರಾಜೇಶ್ ಕಾಮತ್ ಆಗಸ್ಟ್ ಎರಡನೇ ವಾರದಲ್ಲಿ ತೀರ್ಥಹಳ್ಳಿಯಿಂದ 510 ಕೆ.ಜಿ, ಮಂಗಳೂರಿನಿಂದ 800 ಕೆ.ಜಿ, ಆ.5ರಂದು ಕೋಣಂದೂರಿನಿಂದ 1,050 ಕೆ.ಜಿ, ಕಾರ್ಕಳದಿಂದ 700 ಕೆ.ಜಿ ಸೇರಿ ಒಟ್ಟು 3,060 ಕೆ.ಜಿ ಗೋಡಂಬಿಯನ್ನು ತರಿಸಿಕೊಂಡು ತಮ್ಮ ಗೋದಾಮಿನಲ್ಲಿ ಶೇಖರಿಸಿ ಇರಿಸಿದ್ದರು.
ಉಳಿದದ್ದು ಒಂದೇ ಡಬ್ಬ!: ಆ.21ರಂದು ಗೋದಾಮಿನಲ್ಲಿರುವ ಎಲ್ಲ ಗೋಡಂಬಿ ಡಬ್ಬಗಳನ್ನು ಲೆಕ್ಕ ಬಾಕಿ ಗೋದಾಮಿಗೆ ಬೀಗ ಹಾಕಿ ಹೋಗಿದ್ದರು. ಆ.22ರಂದು ಸಂಜೆ ವ್ಯಾಪಾರಿಗಳಿಗೆ ಗೋಡಂಬಿ ಸರಬರಾಜು ಮಾಡಲು ಗೋದಾಮು ಬಾಗಿಲು ತೆರೆದಾಗ 10 ಕೆ.ಜಿ. ಗೋಡಂಬಿ ಇದ್ದ 198 ಡಬ್ಬಗಳು ನಾಪತ್ತೆಯಾಗಿದ್ದವು. ಒಂದೇ ಒಂದು ಡಬ್ಬ ಮಾತ್ರ ಇತ್ತು. ಇದರಿಂದ ಆತಂಕಗೊಂಡ ರಾಜೇಶ್ ಕಾಮತ್ ಕೂಡಲೇ ವೈಯಾಲಿಕಾವಲ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ಆ.19ರಂದು ಪ್ರಶಾಂತ್ 2-3 ಬಾರಿ ಗೋದಾಮಿಗೆ ಬಂದು ಹೋಗಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಆರೋಪಿಯ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಿದಾಗ ಮೊದಲಿಗೆ ಸ್ವಿಚ್‌ಆಫ್ ಆಗಿತ್ತು. ಮರು ದಿನ ಮತ್ತೂಮ್ಮೆ ಪರಿಶೀಲಿಸಿದಾಗ ಬಸವೇಶ್ವರನಗರದಲ್ಲಿ ಸಂಖ್ಯೆಯ ಸುಳಿವು ಪತ್ತೆಯಾಗಿತ್ತು. ಅನುಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕಳವು ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಕೀ ಬಳಸಿ ಕೃತ್ಯ: ಡ್ರೈಫೂಟ್ಸ್ ವ್ಯಾಪಾರಿಯಾಗಿರುವ ಪ್ರಶಾಂತ್, ನೆರೆ ರಾಜ್ಯಗಳಿಂದ ಒಣ ದ್ರಾಕ್ಷಿ ತರಿಸಿ ನಗರದ ವಿವಿಧ ಅಂಗಡಿಗಳಿಗೆ ಪೂರೈಸುತ್ತಿದ್ದ. ಇದಕ್ಕಾಗಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಆದರೆ, ನಿರೀಕ್ಷೆಯಂತೆ ಲಾಭ ಬಾರದೆ ನಷ್ಟ ಅನನುಭವಿಸಿದ್ದ. ಹೀಗಾಗಿ ಸಾಲಗಾರರು ಮನೆ ಹಾಗೂ ಅಂಗಡಿ ಬಳಿ ಬಂದು ಹಣ ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದರು.
ಈ ನಡುವೆ ರಾಜೇಶ್ ಕಾಮತ್ ಗೋದಾಮಿಗೆ ಭೇಟಿ ನೀಡಿದ್ದ ಆರೋಪಿ ಇಲ್ಲಿರುವ ಗೋಡಂಬಿ ಡಬ್ಬಗಳನ್ನು ಕಳವು ಮಾಡಿ ಸಾಲ ತೀರಿಸಲು ಸಂಚು ರೂಪಿಸಿದ್ದ. ಅದರಂತೆ ಆ.19ರಂದು ಬೆಳಗ್ಗೆಯೇ ಗೋದಾಮಿಗೆ ಹೋದ ಆರೋಪಿ, ರಾಜೇಶ್ ಕಾಮತ್ ಜತೆ ಮಾತನಾಡುತ್ತ, ಅವರಿಗೆ ಗೊತ್ತಾಗದಂತೆ ಗೋದಾಮಿನ ಕೀ ಎಗರಿಸಿಕೊಂಡು ಹೋಗಿದ್ದ. ನಕಲಿ ಕೀ ಮಾಡಿಸಿಕೊಂಡು ಒಂದು ಗಂಟೆ ಬಳಿಕ ಮತ್ತೆ ಬಂದು ಅಸಲಿ ಕೀ ಇಟ್ಟು, ನಂತರ ಕೆಲ ಹೊತ್ತು ಅಲ್ಲೇ ಇದ್ದು ಹೋಗಿದ್ದ.
ಆ.21ರಂದು ತಡರಾತ್ರಿ 12.30ರ ಸುಮಾರಿಗೆ ಬಾಡಿಗೆ ವಾಹನದೊಂದಿಗೆ ಗೋದಾಮಿಗೆ ಬಂದ ಆರೋಪಿ, ನಕಲಿ ಕೀ ಮೂಲಕ ಬೀಗ ತೆಗೆದು, 17 ಲಕ್ಷ ರೂ. ಮೌಲ್ಯದ, 1,980 ಕೆ.ಜಿ ಗೋಡಂಬಿ ಕಳವು ಮಾಡಿದ್ದ. ಅದನ್ನು ಬಸವೇಶ್ವರನಗರದ ಶಿವನಗರದಲ್ಲಿರುವ ಸ್ನೇಹಿತನ ಮನೆಯಲ್ಲಿ ಶೇಖರಿಸಿಟ್ಟಿದ್ದ. ಆ.23ರಂದು ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ. ಅಷ್ಟರಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವೈಯಾಲಿಕಾವಲ್ ಪೊಲೀಸರು ತಿಳಿಸಿದ್ದಾರೆ.