ಅಮೀನಗಡ: ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದ ಜನರೇ 10 ಲಕ್ಷ ರೂ. ಹಣ ಕೂಡಿಸಿ ಹುತಾತ್ಮ ವೀರಯೋಧ ನಾಗೇಶ ಜಾಪಾಳ ಸ್ಮರಣಾರ್ಥ ಸ್ಮಾರಕ ನಿರ್ಮಿಸಿದ್ದು ಅದರ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಶನಿವಾರ ಜರುಗಿತು.
ಗ್ರಾಮಸ್ಥರೇ ಮನೆ ಮನೆಯಿಂದ ಸಂಗ್ರಹಿಸಿದ್ದ 10 ಲಕ್ಷ ಹಣದಲ್ಲಿ ನಿರ್ಮಿಸಿದ ಸ್ಮಾರಕ ಹಾಗೂ ಮೂರ್ತಿಯನ್ನು ಶನಿವಾರ ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ನಡೆಸಿ, ಪಟ್ಟಣದ ಹೊರ ವಲಯದಲ್ಲಿ ಹುತಾತ್ಮ ಯೋಧ ನಾಗೇಶ ಜಾಪಾಳ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಈ ಕಾರ್ಯಕ್ಕೆ ನಾಡಿನ ಹಲವು ಮಠಾಧೀಶರು, ಮಾಜಿ ಸೈನಿಕರು, ಹಾಲಿ ಸೈನಿಕರ ತಾಯಂದಿರುವ ಸಹಿತ ಸಹಸ್ರಾರು ಜನರು ಸಾಕ್ಷಿಯಾದರು.
ಇದಕ್ಕೂ ಮೊದಲು ಹೊಳೆಹುಚ್ಚೇಶ್ವರ ಮಠದಿಂದ ಪ್ರಾರಂಭವಾದ ಮೂರ್ತಿ ಮೆರವಣಿಗೆ ಬಸ್‌ಸ್ಟಾಂಡ್, ಪಾರ್ವತಿ ಪರಮೇಶ್ವರ ಗುಡಿ, ಮೇನ್ ಬಜಾರ್, ಸ್ವಿಚಕಟ್ಟಿ, ಕೆಎಬಿ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ನಂತರ ಸ್ಮಾರಕ ತಲುಪಿತು. ಮೆರವಣಿಗೆಯಲ್ಲಿ ಹುಚ್ಚೇಶ್ವರ ಪ್ರೌಢಶಾಲೆ, ಎಂಪಿಎಸ್ ಪ್ರೌಢಶಾಲೆ, ಡಿಪಿಪಿ ಪ್ರೌಢಶಾಲೆ, ಸೇವಾಲಾಲ ಪ್ರೌಢ ಶಾಲೆ, ಶಿವಶರಣೆ ಪ್ರೌಢಶಾಲೆ, ಶಾರದಾ ಪ್ರೌಢಶಾಲೆ, ವಿಶ್ವಚೇತನ ಪ್ರೌಢಶಾಲೆ ಸೇರಿದಂತೆ ವಿವಿಧ ಪ್ರೌಢಶಾಲೆಯ ಮಕ್ಕಳು ಹಾಗೂ ಪದವಿ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಸೈನಿಕರು ಹುತಾತ್ಮ ಯೋಧ ನಾಗೇಶ ಅವರ ಭಾವಚಿತ್ರ ಹಿಡಿದುಕೊಂಡು ದೇಶ ಭಕ್ತಿಯ ಘೋಷಣೆೆಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ, ಕಮತಗಿ-ಕೊಟೇಕಲ್ಲಿನ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ನೀಲಕಂಠಮಠದ ಶಿವಶಂಕರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ್ಯ ಸ್ವಾಮೀಜಿ, ಗುಳೇದಗುಡ್ಡದ ಬಸವರಾಜ ಸ್ವಾಮೀಜಿ, ಕಮತಗಿಯ ಶಿವಕುಮಾರ ಸ್ವಾಮೀಜಿ, ಗುಳೇದಗುಡ್ಡದ ಕಾಶೀನಾಥ ಸ್ವಾಮೀಜಿ, ಕುಂದರಗಿಯ ಅಡವಿಸಿದ್ದೇಶ್ವರ ಸ್ವಾಮೀಜಿ, ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ, ಕೋಟೆಕಲ್ಲನ ನೀಲಕಂಠ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಜರುಗಿತು. ಇದೇ ಸಂದರ್ಭದಲ್ಲಿ ವೀರಯೋಧ ನಾಗೇಶ ಜಾಪಾಳ ಸ್ಮಾರಕ ಸಮಿತಿಯ ಪ್ರಮುಖರಾದ ಮಾರುತಿ ಚಿತ್ರಗಾರ, ವೀರಯೋಧನ ತಂದೆ ಶರಶ್ಚಂದ್ರಪ್ಪ ಜಾಪಾಳ, ತಾಯಿ ಶಂಕ್ರವ್ವ ಜಾಪಾಳ, ವೀರಯೋಧನ ಪತ್ನಿ ಪುಷ್ಪಾ ನಾಗೇಶ ಜಾಪಾಳ, ಈರಣ್ಣ ಜಾಪಾಳ, ಲಕ್ಷ್ಮಣ ಜಾಪಾಳ ಉಪಸ್ಥಿತರಿದ್ದರು.