Advertisement

ನಿರಗುಡಿ ಮುತ್ಯಾ ನೇತೃತ್ವದಲ್ಲಿ ಶೋಭಾಯಾತ್ರೆ

10:22 AM Apr 27, 2022 | Team Udayavani |

ಆಳಂದ: ಎರಡು ದಿನಗಳ ಹಿಂದೆ (ಏ.24ರಂದು) ಶ್ರೀರಾಮ ಸೇನೆಯಿಂದ ಶ್ರೀ ರಾಮನವಮಿ ಅಂಗವಾಗಿ ಏರ್ಪಡಿಸಲಾಗಿದ್ದ ಭವ್ಯ ಶೋಭಾಯಾತ್ರೆ ಬೆನ್ನಲ್ಲೇ ಮಂಗಳವಾರ ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಮಲ್ಲಯ್ಯ ಮುತ್ಯಾ ನಿರಗುಡಿ ನೇತೃತ್ವದಲ್ಲಿ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಮುಸ್ಲಿಮರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತ್ಯೇಕವಾಗಿ ಭಾಗವಹಿಸಿದ್ದರು.

Advertisement

ಪಟ್ಟಣದಲ್ಲಿ ಕಳೆದ ಮಾರ್ಚ್‌ ತಿಂಗಳಲ್ಲಿ ಲಾಡ್ಲೆಮಶಾಕ್‌ ದರ್ಗಾ ಮತ್ತು ರಾಘವಚೈತನ್ಯ ಲಿಂಗದ ಪೂಜೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಅಶಾಂತಿ ವಾತಾವರಣ ನಡುವೆಯೂ ಶ್ರೀರಾಮನ ಪ್ರತಿಮೆ ಮೆರವಣಿಗೆ ಬಿಗಿಭದ್ರತೆಯಲ್ಲಿ ನಡೆದಿತ್ತು. ಮಂಗಳವಾರ ನಡೆದ ಶೋಭಾಯಾತ್ರೆಯೂ ಶಾಂತಿಯುತವಾಗಿ ಜರುಗಿತು. ಶೋಭಾಯಾತ್ರೆಯಲ್ಲಿ ಜಯ ಕರ್ನಾಟಕ ವೇದಿಕೆ, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಹಾಗೂ ಮುಸ್ಲಿಮ ಮುಖಂಡರು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ 15 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ಸೇರಿ ಬುದ್ಧ, ಬಸವ, ಡಾ| ಬಿ.ಆರ್‌. ಅಂಬೇಡ್ಕರ್‌, ಮಠಾಧಿಧೀಶರು ಸೇರಿ ಹಲವು ಮಹನೀಯರ ಪ್ರತಿಮೆಗಳು, ಸ್ವಾತಂತ್ರ್ಯ ಸೇನಾನಿಗಳು, ಹುತಾತ್ಮರು, ಸಾಧಕರು, ಶ್ರಮಿಸಿದ ಶಾಸಕರು, ಕಲಾವಿದರು, ಸಾಹಿತಿಗಳ ಭಾವಚಿತ್ರ, ಕಟೌಟ್‌ಗಳು ಮೆರವಣಿಗೆಯುದ್ಧಕ್ಕೂ ರಾರಾಜಿಸಿದವು. ಈ ವೇಳೆ ಸಾವಿರಾರ ಉಜನರಿಗೆ ಮುತ್ಯಾ ಹಣ್ಣು ಹಂಪಲು ನೀಡಿದರು.

ಪಟ್ಟಣದ 2 ಕಿ.ಮೀ ಅಂತರದಲ್ಲಿನ ಹಳೆಯ ಚೆಕ್‌ಪೋಸ್ಟ್‌ ಹತ್ತಿರದಲ್ಲಿರುವ ಮಲ್ಲಯ್ನಾ ಮುತ್ಯಾ ಆಶ್ರಮದಿಂದ ಹೆದ್ದಾರಿ ಮೂಲಕ ಹೊರಟ ಮೆರವಣಿಗೆಯಲ್ಲಿ ಟಂಟಂ, ಕ್ರೂಸರ್‌, ಜೀಪು, ಟ್ರ್ಯಾಕ್ಟರ್‌ ಹೀಗೆ ಹಲವು ವಾಹನಗಲ್ಲಿ ಕಟೌಟ್‌, ಪ್ರತಿಮೆಗಳಿಟ್ಟು ವಾದ್ಯ ವೈಭವ, ಸೌಂಡ್‌ನೊಂದಿಗೆ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಶೋಭಾಯಾತ್ರೆಯಲ್ಲಿ ಶ್ರೀರಾಮನ ಮತ್ತು ಬಸವಣ್ಣನವರ ಅಭಿಮಾನಿಗಳು ಭಗವಾ ಧ್ವಜ ಹಾರಿಸಿದರೇ, ಬುದ್ಧ ಮತ್ತು ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಅಭಿಮಾನಿಗಳು ನೀಲಿಧ್ವಜದೊಂದಿಗೆ ನೃತ್ಯ ಪ್ರದರ್ಶಿಸಿದರು.

ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ನೃತ್ಯ, ಹಲಗೆ ವಾದನ, ಬಾಜಾ-ಭಜಂತ್ರಿ ಕುಣಿತ ಆಶರ್ಷವಾಗಿ ಕಂಡಿತು. ಶೋಭಾಯಾತ್ರೆ ಬೆಳಗಿನ 11 ಗಂಟೆಯ ಸುಮಾರಿಗೆ ಹೊರಟು ಮಧ್ಯಾಹ್ನದ ಸುಡುಬಿಸಿಲಿನಲ್ಲೇ ಚೆಕ್‌ಪೋಸ್ಟ್‌ನಿಂದ ಬಸ್‌ ನಿಲ್ದಾಣ, ರಜ್ವಿರೋಡ, ತಹಶೀಲ್ದಾರ್‌ ಕಚೇರಿ ಮಾರ್ಗವಾಗಿ ಗ್ರಾಮದೇವತೆ ಹನುಮಾನ ದೇವಸ್ಥಾನದ ವರೆಗೆ ಸಾಗಿ ಹನುಮಾನ ದೇವರಿಗೆ ಮಂಗಳಾರುತಿ ಮಾಡಿ ಸಂಜೆ 5 ಗಂಟೆಯ ಹೊತ್ತಿಗೆ ಸಮಾರೋಪಗೊಂಡಿತು.

Advertisement

ಮುಖಂಡರಾದ ಜಫರ್‌ ಹುಸೇನ, ಅಫಜಲ್‌ ಅನ್ಸಾರಿ, ಆಸೀಫ್‌ ಅನ್ಸಾರಿ ಮಾತನಾಡಿ, ದೇಶ ಅಖಂಡಂತೆ ಕೋಮುಸೌಹಾರ್ದತೆಗಾಗಿ ನಾವು ಸಿದ್ಧರಾಗಿದ್ದೇವೆ. ಇಂಥ ಉತ್ಸವಗಳಲ್ಲಿ ನಾವು ಭಾಗವಹಿಸಿ ಎಲ್ಲ ರೀತಿಯಿಂದಲು ಸಹಕರಿಸುತ್ತೇವೆ. ಮಲ್ಲಯ್ನಾ ಮುತ್ಯಾ ಎಲ್ಲ ಧರ್ಮೀಯರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next