Advertisement

ಕೋವಿಡ್ ವಲಯ ನಿಗದಿ ಜವಾಬ್ದಾರಿ ಇನ್ನು ರಾಜ್ಯಗಳದ್ದು: ಯಾವ ಝೋನ್ ಗಳಲ್ಲಿ ಯಾವುದಕ್ಕೆ ಅವಕಾಶ?

08:30 AM May 18, 2020 | Hari Prasad |

ನವದೆಹಲಿ: ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ನಿರ್ಧಾರ ಮಾಡಿ ಘೋಷಣೆ ಮಾಡುವ ಹೊಣೆ ಇನ್ನು ಮುಂದೆ ಆಯಾಯಾ ರಾಜ್ಯ ಸರಕಾರಗಳದ್ದಾಗಿರಲಿದೆ.

Advertisement

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಇಂದು ಬಿಡುಗಡೆ ಮಾಡಿರುವ ತನ್ನ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.

ಈ ವಿಚಾರವಾಗಿ ಸಂಬಂಧಿತ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಕೇಂದ್ರದ ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ತಮ್ಮಲ್ಲಿ ವಲಯಗಳ ವಿಭಾಗೀಕರಣವನ್ನು ಮಾಡಲಿವೆ.

– ಕೇಂದ್ರದ ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಪರಿಗಣಿಸಿ ಆಯಾಯ ಜಿಲ್ಲಾಡಳಿತಗಳು ತಮ್ಮವ್ಯಾಪ್ತಿಯಲ್ಲಿ ರೆಡ್, ಆರೆಂಜ್, ಕಂಟೈನ್ಮೆಂಟ್ ಝೋನ್ ಹಾಗೂ ಬಫರ್ ಝೋನ್ ಗಳ ವಿಭಾಗೀಕರಣವನ್ನು ಮಾಡಬಹುದಾಗಿರುತ್ತದೆ.

– ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಅಗತ್ಯ ಸೇವೆಗಳನ್ನು ಕೈಗೊಳ್ಳಲು ಮಾತ್ರವೇ ಅವಕಾಶವಿರುತ್ತದೆ. ಮತ್ತು ಈ ಪ್ರದೇಶಗಳಿಂದ ಹಾಗೂ ಈ ಪ್ರದೇಶಗಳಿಗೆ ಜನರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕಾಗಿರುತ್ತದೆ. ವೈದ್ಯಕೀಯ ಸೇವೆಗಳು ಮತ್ತು ಅತ್ಯಗತ್ಯ ವಸ್ತುಗಳ ಸರಬರಾಜಿಗೆ ಇದರಿಂದ ವಿನಾಯಿತಿ ಇರುತ್ತದೆ.

Advertisement

– ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಸೋಂಕಿತರ ಸಂಪರ್ಕ ಪತ್ತೆ, ಮನೆ ಮನೆ ನಿಗಾ ಮತ್ತು ಇತರೇ ವೈದ್ಯಕೀಯ ಚಟುವಟಿಕೆಗಳನ್ನು ತೀವ್ರಸ್ವರೂಪದಲ್ಲಿ ನಡೆಸಬೇಕಾಗಿರುತ್ತದೆ.

– ಈ ಹಿಂದಿನ ಲಾಕ್ ಡೌನ್ ಅವಧಿಗಳಲ್ಲಿ ಇದ್ದಂತೆಯೇ ರಾತ್ರಿ 7 ಗಂಟೆಯಿಂದ ಮರುದಿವಸ ಬೆಳಿಗ್ಗೆ 7 ಗಂಟೆಯವರೆಗೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧವನ್ನು ಮುಂದುವರಿಸಲಾಗಿದೆ.

– ಆರೋಗ್ಯ ಸಮಸ್ಯೆ ಇರುವ 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಗರ್ಭಿಣಿಯರು, 10 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ತುರ್ತು ಕಾರಣಗಳಿಲ್ಲದೇ ಹೊರಗಡೆ ಓಡಾಡುವಂತಿಲ್ಲ.

– ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಲಲ್ಲಿ ನಿರ್ಧಿಷ್ಟ ನಿರ್ಬಂಧಿತ ಕಾರ್ಯಚಟುವಟಿಕೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ಕಾರ್ಯಚಟುವಟಿಕೆಗಳನ್ನು ನಡೆಸಲು ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ.

– ಮತ್ತು ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ತಮ್ಮ ರಾಜ್ಯಗಳಲ್ಲಿ ಈಗಾಗಲೇ ಅನುಮತಿ ನೀಡಲಾಗಿರುವ ಯಾವುದೇ ಕಾರ್ಯಚಟುವಟಿಕೆಗಳನ್ನು ನಿರ್ಬಂಧಿಸುವ ಅಧಿಕಾರ ಆಯಾಯ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳದ್ದಾಗಿರುತ್ತದೆ.

– ವೈದ್ಯರು, ನರ್ಸ್ ಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು, ಸ್ವಚ್ಛತಾಕರ್ಮಿಗಳು ಮತ್ತು ಆ್ಯಂಬುಲೆನ್ಸ್ ಗಳ ಅಂತರ್ ರಾಜ್ಯ ಹಾಗೂ ರಾಜ್ಯದೊಳಗಿನ ಪ್ರಯಾಣಗಳಿಗೆ ಯಾವುದೇ ರೀತಿಯ ನಿರ್ಬಂಧವನ್ನು ಸ್ಥಳೀಯ ಸರಕಾರಗಳು ವಿಧಿಸುವಂತಿಲ್ಲ.

– ಖಾಲಿ ಟ್ರಕ್ ಗಳೂ ಸೇರಿದಂತೆ ಎಲ್ಲಾ ರೀತಿಯ ಸರಕು/ಕಾರ್ಗೋ ವಾಹನಗಳ ಅಂತರ್ ರಾಜ್ಯ ಸಂಚಾರಕ್ಕೆ ಎಲ್ಲಾ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಅನುಮತಿ ನೀಡಬೇಕು.

– ನೆರೆ ರಾಷ್ಟ್ರಗಳ ಜೊತೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯಗಳೂ ಸಹ ದ್ವಿಪಕ್ಷೀಯ ವ್ಯವಹಾರ ಒಪ್ಪಂದ ಇರುವ ದೇಶಗಳಿಗೆ ಸರಕು ಮತ್ತು ಕಾರ್ಗೊ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next