Advertisement

ಬೀದರನಲ್ಲಿ ರಾಜ್ಯದ ಮೊದಲ ಬೇಟಿ ಸರ್ಕಲ್‌

05:39 PM Jan 30, 2021 | Team Udayavani |

ಬೀದರ: ಮಹಾತ್ಮರು, ಗಣ್ಯರ ಪುತ್ಥಳಿ ಮತ್ತು ಕಲಾಕೃತಿಗಳ ವೃತ್ತ ಸ್ಥಾಪಿಸುವುದು ಸಾಮಾನ್ಯ. ಆದರೆ, ಪ್ರವಾಸಿ ನಗರ ಬೀದರನಲ್ಲಿ ಹೆಣ್ಣು ಮಗುವಿನ ಬಗ್ಗೆ ಕಾಳಜಿ, ಶೈಕ್ಷಣಿಕ ಪ್ರಗತಿ ಚಿಂತನೆಗೆ ಪ್ರೇರಣೆಗಾಗಿ ಹೆಣ್ಣು ಮಗು ವೃತ್ತ (ಬೇಟಿ ಸರ್ಕಲ್‌) ಅನಾವರಣಗೊಂಡಿದೆ. ರಾಜ್ಯದ ಮೊದಲ ಬೇಟಿ ಸರ್ಕಲ್‌ ಸ್ಥಾಪಿಸುವ ಮೂಲಕ ಹೆಣ್ಣು ಮಕ್ಕಳ ಘನತೆ ಹೆಚ್ಚಿಸಲಾಗಿದೆ.

Advertisement

ನಗರದ ಶರಣ ಉದ್ಯಾನದ ಸಮೀಪದ ಸಬ್ಬಲ್‌ ಬರೀದ್‌ ಶಾಹಿ ಮಾರ್ಗದಲ್ಲಿ ಹೆಣ್ಣು ಮಗು ವೃತ್ತ (ಬೇಟಿ ಸರ್ಕಲ್‌) ತಲೆ ಎತ್ತಿದೆ. ತಾಯಿ ಹೆಣ್ಣು ಮಗುವನ್ನು ತನ್ನ ಮಡಿಲಲ್ಲಿ ಆರೈಕೆ ಮಾಡುತ್ತಿರುವ ಕಂಚಿನ ಪ್ರತಿಮೆ ಇದಾಗಿದ್ದು, ಜನರನ್ನು ಆಕರ್ಷಿಸುವ ಜತೆಗೆ ಹೆಣ್ಣಿನ ಬಗ್ಗೆ ಅಭಿಮಾನ, ಕಾಳಜಿ ಹೆಚ್ಚುವಂತೆ ಮಾಡಿದೆ. ವೃತ್ತದ ಸುತ್ತಲೂ “ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ’ ಎಂದು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬರೆಸಲಾಗಿದೆ.

ಬೇಟಿ ಸರ್ಕಲ್‌ ಸ್ಥಾಪಿಸಲು ಚಿಂತನೆಗೆ ವೇದಿಕೆಯಾಗಿದ್ದು ಮಕ್ಕಳ ಹಕ್ಕು ಸಂರಕ್ಷಣಾ ಸಮಿತಿ ಸಭೆ. 2018ರಲ್ಲಿ ಜಿಲ್ಲಾ ಧಿಕಾರಿಯಾಗಿದ್ದ ಡಾ| ಎಚ್‌.ಆರ್‌. ಮಹಾದೇವ ನೇತೃತ್ವದಲ್ಲಿ ನಡೆದ ಸಮಿತಿ ಸಭೆಯಲ್ಲಿ “ಹೆಣ್ಣು ಮಗು ವೃತ್ತ’ ನಿರ್ಮಿಸಲು ತೀರ್ಮಾನಿಸಿ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅಂದಿನ ನಗರಸಭೆ ಅಧ್ಯಕ್ಷರಾಗಿದ್ದ ಶಾಲಿನಿ ಚಿಂತಾಮಣಿ ನೇತೃತ್ವದ ಆಡಳಿತ ವೃತ್ತ ನಿರ್ಮಾಣಕ್ಕೆ ಸಮ್ಮತಿ ನೀಡಿದ್ದಲ್ಲದೇ ಜಾಗ ಮತ್ತು 10 ಲಕ್ಷ ರೂ.
ಅನುದಾನ ಒದಗಿಸಿತ್ತು.

ಹುಬ್ಬಳ್ಳಿ ಕಲಾವಿದನ ಕೈಚಳಕದಲ್ಲಿ ತಾಯಿ ಹಸುಗೂಸಿನ ಆರೈಕೆ ಮಾಡುತ್ತಿರುವ ಮೂರ್ತಿ ರಚಿಸಿದ್ದು, ಹೆಣ್ಣು ಮಗು ವೃತ್ತ ಎಂದು ನಾಮಕರಣ ಮಾಡಲಾಗಿದೆ. ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮತ್ತು ಸಂಸದ ಭಗವಂತ ಖೂಬಾ ವಿಶೇಷ ಸರ್ಕಲ್‌ ಲೋಕಾರ್ಪಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ “ಬೇಟಿ ಪಡಾವೋ, ಬೇಟಿ ಬಚಾವೋ’ ಜಾಗೃತಿ ಕಾರ್ಯಕ್ರಮದ ಭಾಗ ಎಂಬಂತೆ “ಬೇಟಿ ಸರ್ಕಲ್‌’ ಸ್ಥಾಪನೆಗೊಂಡಿದ್ದು ಹೆಣ್ಣು ಮಕ್ಕಳ ಬಗ್ಗೆ ಗೌರವ ಮೂಡುವಂತೆ ಮಾಡಲಾಗಿದೆ.

ನಗರದಲ್ಲಿ ಅನಾವರಣಗೊಂಡಿರುವ ಬೇಟಿ ಸರ್ಕಲ್‌ ಈಗ ಜನಾಕರ್ಷಣೆ ಸ್ಥಳವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಶೇಷ ವೃತ್ತದ ಚಿತ್ರಗಳು ಹರಿದಾಡುತ್ತಿದ್ದು, ಜನರು ವಿಶೇಷ ಸರ್ಕಲ್‌ಗೆ ಭೇಟಿ ನೀಡಿ ಕಲಾಕೃತಿ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ ಮತ್ತು ಅದರ ಹಿಂದಿನ ಆಶಯ ಅರಿತುಕೊಳ್ಳುತ್ತಿದ್ದಾರೆ.

Advertisement

ಪ್ರಧಾನಿ ಮೋದಿ ಮಹಿಳೆಯರ ಪರ ಅನೇಕ ಯೋಜನೆ ರೂಪಿಸಿದ್ದಾರೆ. ಬೇಟಿ ಬಚಾವೋ, ಬೇಟಿ ಪಡಾವೋ ಘೋಷ ವಾಕ್ಯ ನೀಡಿದ್ದಾರೆ. ಹೆಣ್ಣು ಮಕ್ಕಳ ಏಳ್ಗೆ ಮತ್ತು ಸುರಕ್ಷತೆಗೆ ರಾಜ್ಯ ಸರ್ಕಾರ ಬದ್ಧವಾಗಿ ಕೆಲಸ ಮಾಡುತ್ತಿದೆ. ಬೀದರನ ಬೇಟಿ ಸರ್ಕಲ್‌ ಹೆಣ್ಣು ಮಕ್ಕಳ ಕಾಳಜಿಗೆ ಪ್ರೇರಣೆ ನೀಡಲಿದೆ.
*ಪ್ರಭು ಚವ್ಹಾಣ,
ಉಸ್ತುವಾರಿ ಸಚಿವ, ಬೀದರ

ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕಿದೆ. ಹೆಣ್ಣು ಮಗು ನಮಗೆ ಹೊರೆ ಎನ್ನುವ ಕಳಂಕ ತೊರೆಯಬೇಕಿದೆ. ಸಮಾಜದಲ್ಲಿ ಹೆಣ್ಣಿಗೂ ಗೌರವವಿದೆ ಎನ್ನುವುದನ್ನು ಜನರಲ್ಲಿ ಮನವರಿಕೆ ಮಾಡುವ ದಿಸೆಯಲ್ಲಿ ಬೀದರನಲ್ಲಿ ಬೇಟಿ ವೃತ್ತ ನಿರ್ಮಿಸಲಾಗಿದೆ.
*ರಾಮಚಂದ್ರನ್‌ ಆರ್‌.,
ಜಿಲ್ಲಾಧಿಕಾರಿ, ಬೀದರ

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next