Advertisement

ಕೇಂದ್ರದ ಮುಂದೆ ರಾಜ್ಯದ ಸಾಲ ಕಮ್ಮಿ

12:47 PM Feb 24, 2018 | Team Udayavani |

ವಿಧಾನ ಪರಿಷತ್ತು: ಕೇಂದ್ರ ಸರ್ಕಾರವು ಜಿಡಿಪಿಯ ಅರ್ಧದಷ್ಟು ಅಂದರೆ, ಶೇ.48.8ರಷ್ಟು ಸಾಲ ಪಡೆದಿದೆ. ಆದರೆ ನಾವು ಜಿಡಿಪಿಯ ಶೇ.25ರ ಮಿತಿಯೊಳಗೆ ಸಾಲ ಮಾಡಿದ್ದೇವೆ. ಆದರೂ ಬಿಜೆಪಿಯವರು ರಾಜಕೀಯ ಕಾರಣಗಳಿಗೆ ರಾಜ್ಯ ದಿವಾಳಿ ಸ್ಥಿತಿಗೆ ತಲುಪಿದೆ ಎಂದು ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಧನವಿನಿಯೋಗ ಹಾಗೂ ಲೇಖಾನುದಾನ ಧನವಿನಿಯೋಗ ಮಂಡಿಸಿ ಮಾತನಾಡಿದ ಅವರು, ನಿರಂತರವಾಗಿ ಬಜೆಟ್‌ ಗಾತ್ರ ಹಿಗ್ಗುತ್ತಿರುವ ಜತೆಗೆ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡದ ಮಿತಿಯೊಳಗೆ  ಜನಪರ, ಅಭಿವೃದ್ಧಿ ಪರ ಬಜೆಟ್‌ ಮಂಡಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.

ರಾಜ್ಯದ ಆರ್ಥಿಕ ನಿರ್ವಹಣೆ ಅತ್ಯುತ್ತಮವಾಗಿದೆ ಎಂದು ಆರ್ಥಿಕತಜ್ಞರೂ ಆದ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಸಹಿಸಲಾರದೆ, ಹೊಟ್ಟೆಕಿಚ್ಚಿನಿಂದ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸಹಕಾರ ಸಂಘಗಳಲ್ಲಿ 50,000 ರೂ.ವರೆಗಿನ ಸಾಲ ಮನ್ನಾ ಮಾಡಿ 22 ಲಕ್ಷ ರೈತರಿಗೆ ಅನುಕೂಲ ಕಲ್ಪಿಸಲಾಯಿತು. ಈ ವೇಳೆ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ರೈತರಿಗೆ ಲಾಲಿಪಪ್‌ ಕೊಟ್ಟಿದ್ದಾರೆ ಎನ್ನುವ ಮೂಲಕ ರೈತರಿಗೆ ಅವಮಾನ ಮಾಡಿದರು. ಬಿ.ಎಸ್‌.ಯಡಿಯೂರಪ್ಪ ಅವರು ಇದೇ ಸದನದಲ್ಲಿ, ಇದೇ ಸ್ಥಾನದಲ್ಲಿ ನಿಂತು ರೈತರ ಸಾಲ ಮನ್ನಾ ಮಾಡಲು ಹಣ ತರಲು ನನ್ನ ಬಳಿ ನೋಟು ಮುದ್ರಣ ಯಂತ್ರವಿದೆಯೇ ಎಂದು ಪ್ರಶ್ನಿಸಿದ್ದರು ಎಂದು ಟೀಕಿಸಿದರು.

ಸತ್ಯ ಕೇಳುವ ಮನಸಿಲ್ಲ: ಏಪ್ರಿಲ್‌ನಿಂದ ಜುಲೈವರೆಗೆ ನಾನ ಇಲಾಖೆಗೆ ಅಗತ್ಯವಿರುವ ಅನುದಾನಕ್ಕೆ ಒಪ್ಪಿಗೆ ಪಡೆಯಲ ಧನವಿನಿಯೋಗ ವಿಧೇಯಕ ಮಂಡಿಸಿದ್ದೇನೆ. ಬಿಜೆಪಿ ಸದಸ್ಯರು ಇರಬೇಕಿತ್ತು. ಆದರೆ ಅವರಿಗೆ ಸತ್ಯ ಕೇಳುವ ಮನಸ್ಸಿಲ್ಲ. ಹಾಗಾಗಿ ತಕರಾರು ಮಾಡಿ ಹೋದರು. ಜೆಡಿಎಸ್‌ ಸದಸ್ಯರು ಕೂತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

Advertisement

ನಂತರ ಚರ್ಚೆಯಲ್ಲಿ ಪಾಲ್ಗೊಂಡ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ಮೇಕೆದಾಟು ಸೇರಿದಂತೆ ಯೋಜನೆಯನ್ನು ತ್ವರಿತವಾಗಿ ಆರಂಭಿಸುವುದಾಗಿ ಬಜೆಟ್‌ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು. ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌, “ಕೊನೆಯ ಕ್ಷಣದವರೆಗೂ ವಿಧಾನಮಂಡಲವನ್ನು ರಾಜಕೀಯ ದುರದ್ದೇಶಕ್ಕೆ ವೇದಿಕೆಯನ್ನಾಗಿ ಬಳಸಿಕೊಂಡಿದ್ದು ದುರದೃಷ್ಟಕರ.

ಸಿದ್ದರಾಮಯ್ಯ ಅವರ ಆಡಳಿತದಲ್ಲಿ ರೆಸಾರ್ಟ್‌, ಬ್ಲ್ಯಾಕ್‌ವೆುಲ್‌ ರಾಜಕಾರಣ, ಭಿನ್ನಮತ ಕೇಳಿಬರಲಿಲ್ಲ ಎಂದು ಹೇಳಿದರು. ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಮೈಸೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯ ರಚಿಸಬೇಕು. ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಸಂಜೆ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಅನುಭವ ಮಂಟಪ: ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಸರ್ಕಾರಿ ನೌಕರರಿಗೆ ಏ. 1ರಿಂದ ವೇತನ ಪರಿಷ್ಕರಣೆಯಾಗಲಿದೆ. ಯಾವುದೇ ಕಾರಣಕ್ಕೂ ಅವರಿಗೆ ಬಾಡಿಗೆ ಭತ್ಯೆ ಕಡಿಮೆಯಾಗುವುದಿಲ್ಲ. ಮೇಕೆದಾಟು ಯೋಜನೆಗೆ ಡಿಪಿಆರ್‌ ಸಿದ್ದವಾಗಿದ್ದು, ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಇತರೆ ಸಲಹೆಗಳ ಬಗ್ಗೆಯೂ ಪರಿಶೀಲಿಸಲಾಗುವುದು. ಬಸವಕಲ್ಯಾಣದಲ್ಲಿ “ಅನುಭವ ಮಂಟಪ’ ನಿರ್ಮಿಸಲಾಗುತ್ತಿದ್ದು, ಈ ವರ್ಷ ಅದನ್ನು ಆರಂಭಿಸಲಾಗುವುದು ಎಂದು ಹೇಳಿದರು. ಬಳಿಕ ವಿಧೇಯಕಗಳಿಗೆ ಅನುಮೋದನೆ ದೊರೆಯಿತು.
 
ಇಲ್ಲಿ ಬಂದರೆ ಹೇಳಿಕೊಡುತ್ತೇನೆ: ಅಂಕಿ-ಸಂಖ್ಯೆ ನೀಡುತ್ತಾ, ಮಾರ್ಮಿಕವಾಗಿ ತಿರುಗೇಟು ನೀಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನ ವೈಖರಿ ಬಗ್ಗೆ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ, ನಿಮ್ಮ ಸ್ಟೈಲ್‌ ಚೆನ್ನಾಗಿದೆ ಎಂದರು. ಇದಕ್ಕೆ ಸಿದ್ದರಾಮಯ್ಯ, ಈ ಕಡೆ ಬಂದರೆ ನಿಮಗೂ ಕಲಿಸಿಕೊಡುತ್ತೀನಿ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ಸಚಿವ ಜಾರ್ಜ್‌ ಸಿಡಿಮಿಡಿ: ಶಾಸಕರು, ಶಾಸಕರ ಮಕ್ಕಳಿಗೆ ಸಂಬಂಧಪಟ್ಟ ಘಟನೆಗಳು ಸರ್ಕಾರದ ಬಗ್ಗೆ ಋಣಾತ್ಮಕ ಸಂದೇಶ ರವಾನಿಸಲಿವೆ ಎಂದ ಜೆೆಡಿಎಸ್‌ನ ಪುಟ್ಟಣ್ಣ, ಮಾತಿನ ಭರದಲ್ಲಿ, “ಡಿ.ಕೆ.ರವಿ, ಗಣಪತಿ ಸಾವಿನ ಪ್ರಕರಣದಲ್ಲಿ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಿದ್ದರು’ ಎಂದರು. ಆಗ ಸಿಡಿಮಿಡಿಗೊಂಡ ಕೆ.ಜೆ.ಜಾರ್ಜ್‌, “ಡಿ.ಕೆ.ರವಿ ಪ್ರಕರಣ ಸಂಬಂಧ ಸಿಬಿಐ ವರದಿ ಓದಿದ್ದೀರಾ? ಅಂದಿನ ಗೃಹ ಸಚಿವರ ಯಾವುದೇ ಪಾತ್ರವಿಲ್ಲ ಎಂದು ಕ್ಲೀನ್‌ ಚಿಟ್‌ ನೀಡಿದ್ದಾರೆ ಎಂದು ಸಮರ್ಥನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next